"ನಾನು ಯಾವುದೇ ಕಾರಣಕ್ಕೂ ಲಕ್ಷ್ಮಿ ನಿವಾಸ ಧಾರಾವಾಹಿ ಬಿಡುವುದಿಲ್ಲ"; ನಟಿ ಚಂದನಾ ಅನಂತಕೃಷ್ಣ
ನಟಿ ಚಂದನಾ ಅನಂತಕೃಷ್ಣ ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಜಾಹ್ನವಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಚಂದನಾ ಅವರು ಬಹಳ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜಾಹ್ನವಿ ಪಾತ್ರವನ್ನು ಕನ್ನಡದ ಕಿರುತೆರೆ ಪ್ರೇಕ್ಷಕರು ಬಹಳ ಪ್ರೀತಿಯಿಂದ ನೆಚ್ಚಿಕೊಂಡಿದ್ದಾರೆ.
ಮುಗ್ಧ ಮನಸ್ಸಿನ ಸಾಧು ಸ್ವಭಾವದ ಹುಡುಗಿ ಮದುವೆಯಾಗಿ ಪಡುತ್ತಿರುವ ಪಜೀತಿಯನ್ನು ನೋಡಿ ಪ್ರೇಕ್ಷಕರಿಗೂ ಬೇಸರವಾಗಿದೆ. ಒಟ್ಟಿನಲ್ಲಿ ಹುಚ್ಚನಂತೆ ಪ್ರೀತಿಸುವ ಗಂಡನನ್ನು ಅರ್ಥ ಮಾಡಿಕೊಳ್ಳಲಾಗದೆ ಒದ್ದಾಡುತ್ತಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಚಂದನಾ ಅನಂತಕೃಷ್ಣ ಸದ್ಯಕ್ಕಂತೂ ಕಿರುತೆರೆಯಲ್ಲಿ ಬಹಳಷ್ಟು ಪಾಪ್ಯುಲಾರಿಟಿ ಪಡೆದಿದ್ದಾರೆ.

ಹೀಗಿರುವಾಗಲೇ ಚಂದನಾ ಅನಂತಕೃಷ್ಣ ಹಿರಿತೆರಿಗೆ ಕಾಲಿಟ್ಟಿರುವುದು ವಿಶೇಷ. ಹೌದು, 'ಭಾವ ತೀರ ಯಾನ' ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ನಟಿ ಚಂದನಾ ಇದೀಗ ಹಿರಿತೆರೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಮಯೂರ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಅವರು ಸೇರಿ ನಿರ್ಮಿಸುತ್ತಿರುವ ಈ ಸಿನಿಮಾಗೆ ಚಂದನಾ ಅನಂತ ಕೃಷ್ಣ ಅವರೇ ಮುಖ್ಯ ಪಾತ್ರಧಾರಿ ಹೌದು. ಚಂದನಾ ಅವರು ಈ ಸಿನಿಮಾದಲ್ಲಿ ಧೃತಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ ಎಂಬ ವಿಚಾರವೂ ಇದೀಗ ಮತ್ತಷ್ಟು ಸುದ್ದಿಯಾಗಿದೆ.
ಇದರ ಬೆನ್ನಲ್ಲೇ 'ಲಕ್ಷ್ಮಿ ನಿವಾಸ' ಧಾರಾವಾಹಿಯಿಂದ ಹೊರಬರುವುದಾಗಿ ಚಂದನಾ ಅನಂತ ಕೃಷ್ಣ ಅವರ ಬಗ್ಗೆ ಒಂದಷ್ಟು ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಸುತ್ತುತ್ತಿವೆ. ಅಫೀಶಿಯಲ್ ಆಗಿ ನಟಿ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದರೂ ಒಂದಷ್ಟು ಟ್ರೋಲ್ ಪೇಜ್‌ಗಳು ಸೇರಿದಂತೆ ಸೆಲೆಬ್ರಿಟಿಗಳಿಗೆ ಸಂಬಂಧಪಟ್ಟ ಕಿರುತೆರೆಗೆ ಸಂಬಂಧಪಟ್ಟ ಸೋಶಿಯಲ್ ಮೀಡಿಯಾ ಪೇಜ್ ಗಳು ಈ ರೀತಿ ಮೆಸೇಜ್‌ಗಳನ್ನು ಹರಿಬಿಡುತ್ತಿವೆ.
ಇದನ್ನು ಗಮನಿಸಿ ಈ ಬಗ್ಗೆ ಸ್ಪಷ್ಟಣೆ ನೀಡಿರುವ ನಟಿ ಚಂದನಾ ಅನಂತಕೃಷ್ಣ ಈ ರೀತಿಯಾಗಿ ಹೇಳಿದ್ದಾರೆ. "ಇತ್ತೀಚೆಗೆ ನಾನು ಲಕ್ಷ್ಮಿ ನಿವಾಸ ಧಾರಾವಾಹಿಯಿಂದ ಹೊರಬರುವುದಾಗಿ ಒಂದಷ್ಟು ಊಹಾಪೋಹಗಳು ಓಡಾಡುತ್ತಿರುವುದನ್ನು ಗಮನಿಸಿದೆ. ಸದ್ಯಕ್ಕಂತೂ ನಾನು ಯಾವುದೇ ಕಾರಣಕ್ಕೂ ಲಕ್ಷ್ಮಿನಿವಾಸ ಧಾರಾವಾಹಿಯಿಂದ ಹೊರಬರುವ ಯೋಚನೆಯಲ್ಲಿ ಇಲ್ಲ. ಹಾಗಾಗಿ ದಯಮಾಡಿ ಇಂತಹ ಸುಳ್ಳು ಮಾಹಿತಿಗಳನ್ನು ಹರಿಬಿಡಬೇಡಿ. ನನ್ನ ಪ್ರೀತಿಯ ಪ್ರೇಕ್ಷಕರು ಹಾಗೂ ಅಭಿಮಾನಿಗಳು ನಿಮ್ಮ ಪ್ರೀತಿಯನ್ನು ಇದೇ ರೀತಿ ನನಗೂ ಜಾನವಿ ಪಾತ್ರಕ್ಕೂ ತೋರಿಸಿ ಎಂದು ಕೇಳಿಕೊಳ್ಳುತ್ತೇನೆ. " ಎಂದು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಮೂಲಕ ಸದ್ಯಕ್ಕೆ 'ಲಕ್ಷ್ಮೀ ನಿವಾಸ' ಧಾರಾವಾಹಿಯಿಂದ ಹೊರಬರುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿರುವ ನಟಿ ಚಂದನಾ ಅನಂತಕೃಷ್ಣ ಅವರು ಜಾಹ್ನವಿ ಪಾತ್ರಕ್ಕೆ ಬಣ್ಣ ಹಚ್ಚುವುದನ್ನು ಮುಂದುವರಿಸುತ್ತಾರೆ ಎಂಬುದನ್ನು ಹೇಳಿದ್ದಾರೆ. ಇದು ಇವರ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಬಹಳಷ್ಟು ಸಮಾಧಾನ ತಂದಿದೆ. ಕಮೆಂಟ್ಸ್ ನಲ್ಲಿ ಕೂಡ ಬಹಳಷ್ಟು ಜನ ಶುಭ ಹಾರೈಕೆಗಳೊಂದಿಗೆ ತಮ್ಮ ಪ್ರೀತಿ ಹಾಗೂ ಅಭಿಪ್ರಾಯಗಳ ಬಗ್ಗೆಯೂ ಬರೆದಿದ್ದಾರೆ.
ಅಂದ ಹಾಗೆ ನಟಿ ಚಂದನಾ ಅನಂತಕೃಷ್ಣ ಬಿಗ್ ಬಾಸ್ ಮೂಲಕ ಬಹಳಷ್ಟು ಸದ್ದು ಮಾಡಿದ್ದರು.'ಹೂ ಮಳೆ', 'ರಾಜ ರಾಣಿ', ಡ್ಯಾನ್ಸಿಂಗ್ ಶೋ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದರು. ನಟನೆಯ ಹೊರತಾಗಿ ಭರತನಾಟ್ಯ ಕಲಾವಿದೆ ಆಗಿರುವ ಇವರು ಚೆನ್ನಾಗಿ ಸಂಗೀತವನ್ನು ಕಲಿತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟೀವ್ ಇರುವ ಈಕೆ ತನ್ನ ಇನ್ಸ್ಟಾಗ್ರಾಂನಲ್ಲಿ ಡ್ಯಾನ್ಸ್, ಸಂಗೀತ ಸೇರಿದಂತೆ ಬೇರೆ ಬೇರೆ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹಲವು ವರ್ಷಗಳಿಂದ ಕಿರುತೆರೆಯಲ್ಲಿದ್ದು ಮೊದಲ ಬಾರಿಗೆ ಹಿರಿತೆರೆಗೆ ಒಂದೊಳ್ಳೆಯ ಸಿನಿಮಾ ಮೂಲಕ ಕಾಲಿಡುವ ಪ್ರಯತ್ನದಲ್ಲಿದ್ದಾರೆ ಚಂದನಾ ಅನಂತಕೃಷ್ಣ.


Click it and Unblock the Notifications