ಚಾಲೆಂಜಿಗ್ ಆಗಿರುವಂತಹ ಪಾತ್ರದ ಮೂಲಕ ರಂಜಿಸಲು ಬಂದಿದ್ದಾರೆ ಚಂದನಾ
ಪ್ರಾಣಿಗಳನ್ನು ಉಪಯೋಗಿಸಿ ಅದರ ಸುತ್ತ ಕಥೆ ಕಟ್ಟಿ ನಟಿಸುವುದು ಇತ್ತೀಚಿಗೆ ಕನ್ನಡ ಸ್ಯಾಂಡಲ್‌ವುಡ್ ಹಾಗೂ ಈಗ ಕಿರುತೆರೆಯಲ್ಲೂ ಟ್ರೆಂಡ್‌ಗೆ ಬರುತ್ತಿದೆ. ಧಾರಾವಾಹಿ ವಿಷಯಕ್ಕೆ ಬಂದರೆ 'ರಾಣಿ' ಧಾರಾವಾಹಿ ಅತ್ಯುತ್ತಮವಾಗಿ ಈ ಟ್ರೆಂಡ್ ಅನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಚೆರಿ ಕುರಿಮರಿಯೇ ಸಾಕ್ಷಿ.
ಈ ಪುಟ್ಟ ಕುರಿ ಮರಿ ಜೊತೆ ಅಭಿನಯಿಸುತ್ತಿರುವ 'ರಾಣಿ' ಧಾರಾವಾಹಿ ನಾಯಕ ನಟಿ ಚಂದನ ಎಂ ರಾವ್ ತಮ್ಮ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಮೋಡಿ ಮಾಡಿದ್ದಾರೆ. 'ರಾಣಿ' ಧಾರಾವಾಹಿಯ ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕಾಶದೀಪ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಚಂದನ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರನ ಸೆಳೆಯುವಲ್ಲಿ ಯಶಸ್ವಿಯಾದರು.

ಚಾಲೆಂಜಿಂಗ್ ಪಾತ್ರದಲ್ಲಿ ಚಂದನಾ
'ಆಕಾಶದೀಪ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಚಂದನಾ, ಇದೀಗ ರಾಣಿಯಾಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಪುಟಾಣಿ ನಾಯಿಮರಿ ಅಂದರೇ ಭಯಪಡುವ ಈ ನಟಿಗೆ ಕುರಿಮರಿಯೊಂದಿಗೆ ನಟಿಸುವುದು ಶುರುವಿಗೆ ತುಂಬಾ ಕಷ್ಟವಾಗಿತ್ತಂತೆ. ಅಷ್ಟೇ ಅಲ್ಲದೆ ಹಳ್ಳಿ ಹುಡುಗಿಯ ಪಾತ್ರವಾದ್ದರಿಂದ ಹಳ್ಳಿಯ ಭಾಷೆಯಂತೆ ಮಾತನಾಡುವುದು ಹಾಗೆ ಕಲಿತು ಓದುವುದು ಅಷ್ಟು ಸುಲಭದ ಮಾತಗಿರಲಿಲ್ಲ. ಈ ಎಲ್ಲಾ ವಿಚಾರಗಳನ್ನು ಚೆನ್ನಾಗಿ ಕಲಿತು ನಟಿಸುತ್ತಿರುವುದಲ್ಲದೆ ಶ್ರವಣದೋಷ ಇರುವಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ನಟಿ ಚಂದನ.
'ರಾಣಿ' ಪಾತ್ರಕ್ಕಾಗಿ ತಯಾರಿ
ಈ ಮೊದಲು ಈ ರೀತಿ ಶ್ರವಣದೋಷ ಇದ್ದವರನ್ನು ಹತ್ತಿರದಿಂದ ನೋಡದ ಕಾರಣ ಮೊದಲಿಗೆ ಹೀಗೆ ನಟಿಸುವುದು ತುಸು ಕಷ್ಟವೆನಿಸಿದರೂ ರಾಣಿ ಧಾರಾವಾಹಿ ತಂಡದ ಸಹಾಯದಿಂದ ಎಲ್ಲವೂ ಸುಲಭವಾಗುತ್ತಿದೆಯಂತೆ. ಮೊದಮೊದಲಿಗೆ ಒಂದಷ್ಟು ವಿಡಿಯೋಗಳನ್ನು ಆಗಾಗ ನೋಡುವದರ ಮೂಲಕ ಶ್ರಾವಣದೋಷವಿರುವ ವ್ಯಕ್ತಿಗಳ ಹಾವ ಭಾವವನ್ನು ತಿಳಿದುಕೊಳ್ಳುತ್ತಿದ್ದರಂತೆ.

ಪ್ರಾಣಿಗಳನ್ನು ಬಳಸಿ ಧಾರಾವಾಹಿ
ಇನ್ನು ಪ್ರಾಣಿಗಳನ್ನು ಬಳಸಿಕೊಂಡು ಸಿನಿಮಾ ಧಾರಾವಾಹಿ ಮಾಡುವುದು ಈಗ ಮತ್ತೆ ಟ್ರೆಂಡ್‌ಗೆ ಬಂದ ಕಾಲದಲ್ಲಿ, ತಮ್ಮ ಹಾಗೂ ಚೆರಿ ನಡುವಿನ ಸಂಬಂಧವನ್ನು ಖುಷಿಯಿಂದ ಹಂಚಿಕೊಂಡಿದ್ದರು ನಟಿ ಚಂದನಾ. ಚೆರಿ ಎಂಬ ಪುಟ್ಟ ಕುರಿಮರಿಯೇ 'ರಾಣಿ' ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿದ್ದು, ಶೂಟಿಂಗ್ ಅನ್ನು ಈ ಕುರಿಮರಿಗೆ ಅನುಕೂಲವಾಗುವಂತೆಯೇ ನಡೆಸಿದ್ದಾರೆಯಂತೆ. ಒಮ್ಮೊಮ್ಮೆ ಕುರಿಮರಿಯನ್ನು ಕ್ಯಾಮೆರಾ ಮುಂದಿರಿಸಿಕೊಳ್ಳಲು ಅದರ ತಾಯಿ ಕುರಿಯನ್ನೂ ಹತ್ತಿರದಲ್ಲೇ ಇರಿಸಿಕೊಳ್ಳಬೇಕಾಗುತ್ತದಂತೆ.


Click it and Unblock the Notifications











