ಸಾಫ್ಟ್‌ವೇರ್ ಕಂಪನಿ ಸೇರಿದ್ದ ಕಿರುತೆರೆ ನಟಿಯ ಸೆಕೆಂಡ್ ಇನ್ನಿಂಗ್ಸ್ ಶುರು? ಸೀರಿಯಲ್ ಯಾವುದು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಸೀತಾರಾಮ' ಧಾರಾವಾಹಿಯೂ ಕೂಡಾ ಒಂದು. 'ಸೀತಾರಾಮ' ಧಾರಾವಾಹಿಯಲ್ಲಿ ನಾಯಕ ರಾಮ್‌ನ ಮಾಜಿ ಪ್ರೇಯಸಿ ಚಾಂದಿನಿಯ ಅಕ್ಕ ಭಾವನಾ ಪಾತ್ರ ಸೇರ್ಪಡೆಯಾಗಿದೆ. ಹೌದು, ಚಾಂದಿನಿಯ ಅಕ್ಕ ಶಾಲಿನಿ ಆಗಿ ನಟಿಸುವ ಮೂಲಕ ಮತ್ತೊಮ್ಮೆ ಕಿರುತೆರೆಯಲ್ಲಿ ಚಂದನಾ ಮಹಾಲಿಂಗಯ್ಯ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಾಯಕ ಕಂಠಿಯ ಮಾವನ ಮಗಳು ಪೂರ್ವಳಾಗಿ ಬಣ್ಣ ಹಚ್ಚಿದ್ದ ಚಂದನಾ ತದ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಇಂಜಿನಿಯರಿಂಗ್ ಪದವಿ ಪಡೆದಿರುವ ಈಕೆ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದರು. ಇದೀಗ ಎರಡು ವರ್ಷಗಳ ಸುದೀರ್ಘ ಗ್ಯಾಪ್‌ನ ನಂತರ ಶಾಲಿನಿಯಾಗಿ ಕಿರುತೆರೆಗೆ ಮರಳಿದ್ದಾರೆ.

"ಎರಡು ವರ್ಷಗಳ ನಂತರ ಸೀತಾರಾಮ ಧಾರಾವಾಹಿಯ ಶಾಲಿನಿಯಾಗಿ ಕಿರುತೆರೆಗೆ ಮರಳಿದ್ದೇನೆ. ನನಗಂತೂ ತುಂಬಾನೇ ಖುಷಿಯಾಗುತ್ತಿದೆ. ಒಂದು ಒಳ್ಳೆಯ ಪಾತ್ರದ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದು ಕೂಡಾ ನನಗೆ ಖುಷಿಯಿದೆ" ಎಂದು ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡುತ್ತಾ ನಟಿ ಚಂದನಾ ಹೇಳಿಕೊಂಡಿದ್ದಾರೆ.
"ಶಾಲಿನಿ ಪಾತ್ರವನ್ನು ಒಪ್ಪಿಕೊಳ್ಳುವ ಮೊದಲು ನನಗೆ ಬೇರೆ ಬೇರೆ ಆಫರ್‌ಗಳು ಬಂದಿತ್ತು. ಆದರೆ, ದೊರೆತಿರುವಂತಹ ಬೇರೆ ಎಲ್ಲಾ ಅವಕಾಶಗಳನ್ನು ನನಗೆ ಕೆಲಸದ ಜೊತೆಗೆ ಮ್ಯಾನೇಜ್ ಮಾಡುವುದಕ್ಕೆ ಕಷ್ಟವಾಗುತ್ತಿತ್ತು. ಕೆಲಸವನ್ನು ಬಿಡುವುದಕ್ಕೂ ನನಗೆ ಮನಸ್ಸಿರಲಿಲ್ಲ. ಆದರೆ, ಈ ಪಾತ್ರದ ಜೊತೆಗೆ ನಾನು ಕೆಲಸವನ್ನು ಮ್ಯಾನೇಜ್ ಮಾಡಬಹುದಾದ ಕಾರಣ ನಿರಾಂತಕವಾಗಿ ಒಪ್ಪಿಕೊಂಡೆ" ಎಂದು ನಟಿ ಚಂದನಾ ಮಹಾಲಿಂಗಯ್ಯ ಹೇಳಿಕೊಂಡಿದ್ದಾರೆ.

"ಶಾಲಿನಿ ಸ್ಟ್ರೈಟ್ ಫಾರ್ವರ್ಡ್ ಹುಡುಗಿ. ಸ್ಟ್ರೈಟ್ ಫಾರ್ವರ್ಡ್ ಆದ ಕಾರಣ ಆಕೆಯ ಬಿಹೇವಿಯರ್ ಸ್ವಲ್ಪ ರೂಡ್ ಆಗಿದೆ ಎಂದು ನೋಡುಗರಿಗೆ ಅನ್ನಿಸಬಹುದು. ಇಂಟಿರಿಯರ್ ಡಿಸೈನರ್ ಆಗಿರುವ ಶಾಲಿನಿ ಇಷ್ಟು ಸಮಯ ಗಂಡನೊಂದಿಗೆ ಫಾರಿನ್‌ನಲ್ಲಿ ಇದ್ದವಳು. ಈಗ ಮತ್ತೆ ಊರಿಗೆ ಮರಳಿರುವ ಆಕೆಗೆ ತನ್ನ ಸೌಂದರ್ಯ ಮತ್ತು ಫಿಟ್ನೆಸ್ ನತ್ತ ವಿಶೇಷ ಒಲವು" ಎಂದು ಶಾಲಿನಿ ಪಾತ್ರದ ಬಗ್ಗೆಯೂ ಚಂದನಾ ಮಹಾಲಿಂಗಯ್ಯ ಹಂಚಿಕೊಂಡಿದ್ದಾರೆ.
ರಂಗಭೂಮಿಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಚಂದನಾ ಮುಂದೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. 'ಕನಸು' ನಾಟಕದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಈಕೆ 'ನಾಗಕನ್ನಿಕೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ಮುಂದೆ 'ಸೀತಾವಲ್ಲಭ' ಧಾರಾವಾಹಿಯಲ್ಲಿ ಅಂಕಿತಾ ಆಗಿ ಕಾಣಿಸಿಕೊಂಡ ಚಂದನಾ ಮೊದಲ ಬಾರಿಗೆ ಖಳನಾಯಕಿಯಾಗಿ ಮಿಂಚಿದರು.
ನಂತರ ತೆಲುಗು ಕಿರುತೆರೆಗೆ ಹಾರಿದ ಈ ಬೆಡಗಿ 'ವೈದೇಹಿ ಪರಿಣಯಂ' ಧಾರಾವಾಹಿಯಲ್ಲಿ ಸಿಯಾ ಎನ್ನುವ ಪಾತ್ರಕ್ಕೆ ಜೀವ ತುಂಬಿದ್ದರು. ನಂತರ ಪೂರ್ವಿಯಾಗಿ ಕನ್ನಡ ಕಿರುತೆರೆಗೆ ಮರಳಿದ ಈಕೆ ಸಹಜ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ.


Click it and Unblock the Notifications











