Actress Chandana Mahalingaiah: ನಟನೆಗೆ ಬ್ರೇಕ್ ಕೊಟ್ಟ ನಟಿಯೀಗ ಸಾಫ್ಟ್‌ವೇರ್ ಇಂಜಿನಿಯರ್!
ಕಿರುತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಅನೇಕ ನಟ ನಟಿಯರು ಮುಂದೆ ಹಿರಿತೆರೆ ಅಥವಾ ಪರಭಾಷೆಯ ಕಿರುತೆರೆ, ಹಿರಿತೆರೆಯಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ಆದರೆ, ಈ ನಟಿ ಹಾಗಲ್ಲ. ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದಿರುವ ನಟಿ ಚಂದನಾ ಮಹಾಲಿಂಗಯ್ಯ ಇದೀಗ ನಟನೆಯಿಂದ ದೂರವಿದ್ದಾರೆ.
ಇಂಜಿನಿಯರಿಂಗ್ ಪದವಿ ಪಡೆದಿರುವ ಚಂದನಾ ಅವರು ಸದ್ಯ ನಟನೆಯಿಂದ ದೂರವಿದ್ದು ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಾಯಕ ಕಂಠಿ ಮಾವನ ಮಗಳು ಪೂರ್ವಿ ಆಗಿ ಕೊನೆಯದಾಗಿ ನಟಿಸಿದ್ದ ಚಂದನಾ ಇದೀಗ ನಟನೆಗೆ ವಿದಾಯ ಹೇಳಿದ್ದಾರೆ.

ಬಾಲ್ಯದಿಂದಲೂ ಇದ್ದಿತ್ತು ನಟಿಯಾಗುವ ಬಯಕೆ
ಸಣ್ಣ ವಯಸ್ಸಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಚಂದನಾ ಅವರು ನಾಟಕ, ಡ್ಯಾನ್ಸ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಇಂಜಿನಿಯರಿಂಗ್ ಪದವೀಧರೆಯಾದ ಈಕೆಯನ್ನು ಬಣ್ಣದ ಲೋಕ ತನ್ನತ್ತ ಸೆಳೆಯಿತು. ನಟಿಯಾಗುವ ನಿರ್ಧಾರ ಮಾಡಿದ ಆಕೆ ನಾಗರಾಜ ಕೋಟೆಯವರ ಬಣ್ಣ ನಟನಾ ಶಾಲೆಗೆ ಸೇರಿ ಆರು ತಿಂಗಳ ತರಬೇತಿಯನ್ನು ಕೂಡ ಪಡೆದರು.
ಮೊದಲು ನಟಿಸಿದ್ದು ನಾಟಕದಲ್ಲಿ!
ಶಿವಾನಂದ ಸಿಂಧಗಿ ಅವರ ನಿರ್ದೇಶನದ 'ಕನಸು' ನಾಟಕದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ ಚಂದನಾ ಅವರ ಬಣ್ಣದ ಪಯಣ ಶುರುವಾಗಿದ್ದು ನಾಗಕನ್ನಿಕೆ ಧಾರಾವಾಹಿ ಮೂಲಕ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಕನ್ನಿಕೆ' ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಈಕೆ ಮುಂದೆ ಬದಲಾದುದು ಖಳನಾಯಕಿಯಾಗಿ.

ಸೀತಾವಲ್ಲಭದ ಅಂಕಿತಾ ಆಗಿ ಮೋಡಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೀತಾವಲ್ಲಭ' ಧಾರಾವಾಹಿಯಲ್ಲಿ ಖಳನಾಯಕಿ ಅಂಕಿತಾ ಪಾತ್ರಕ್ಕೆ ಜೀವ ತುಂಬಿದ್ದ ಚಂದನಾ ಆ ಪಾತ್ರದ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿದ್ದರು. ಮುಂದೆ ಪರಭಾಷೆಯ ಕಿರುತೆರೆಗೂ ಪಾದಾರ್ಪಣೆ ಮಾಡಿದ ಈಕೆ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವೈದೇಹಿ ಪರಿಣಯಂ' ಧಾರಾವಾಹಿಯಲ್ಲಿಯೂ ಸಿಯಾ ಪಾತ್ರದ ಮೂಲಕ ಮನೆ ಮಾತಾಗಿದ್ದರು.
ಪೂರ್ವಿಯಾಗಿಯೂ ಮನ ಸೆಳೆದ ಚೆಲುವೆ
ತದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪೂರ್ವಿಯಾಗಿ ಒಂದಷ್ಟು ಸಂಚಿಕೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಚಂದನಾ ಸದ್ಯ ನಟನೆಯಿಂದ ಬ್ರೇಕ್ ಪಡೆದುಕೊಂಡು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











