ನಿತ್ಯಾ ರಾಮ್ ಜೊತೆ ಮತ್ತೆ ಕಾಣಿಸಿಕೊಂಡ ನಟಿ ಚಂದ್ರಕಲಾ ಮೋಹನ್; ಯಾವ ಧಾರಾವಾಹಿ?
ನಟಿ ಚಂದ್ರಕಲಾ ಮೋಹನ್ ಅವರು 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಅಜ್ಜಮ್ಮನ ಪಾತ್ರದ ಮೂಲಕ ಬಹಳಷ್ಟು ಖ್ಯಾತಿ ಪಡೆದ ನಟಿ. ಅಂತೆಯೇ ನಟಿ ನಿತ್ಯಾ ರಾಮ್ ಅವರು 'ನಂದಿನಿ' ಸೇರಿದಂತೆ ಹಲವಾರು ಮೆಗಾ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ ನಟಿ. ಇದೀಗ ನಟಿ ನಿತ್ಯಾ ರಾಮ್ ಹಾಗೂ ಚಂದ್ರಕಲಾ ಮೋಹನ್ ಅವರು ಮತ್ತೊಮ್ಮೆ ಜೋಡಿ ಆಗಿ ಕಿರುತೆರೆ ಧಾರಾವಾಹಿ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು 12 ವರ್ಷಗಳ ಹಿಂದೆ 'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿಯಲ್ಲಿ ನಟಿ ನಿತ್ಯಾ ರಾಮ್ ಹಾಗೂ ನಟಿ ಚಂದ್ರಕಲಾ ಮೋಹನ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಈ ಎರಡು ಕಲಾವಿದರು ಬೇರೆ ಬೇರೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರೂ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಈ ಜೋಡಿ ಮತ್ತೆ ಒಂದಾಗಿದ್ದು, ಹೊಚ್ಚ ಹೊಸ ಧಾರಾವಾಹಿ 'ಶಾಂತಿ ನಿವಾಸ'ದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ 'ಶಾಂತಿನಿವಾಸ' ಧಾರಾವಾಹಿಯಲ್ಲಿ ನಟಿ ನಿತ್ಯಾ ರಾಮ್ ಹಾಗೂ ನಟಿ ಚಂದ್ರಕಲಾ ಮೋಹನ್ ಅವರು ನಟಿಸುವುದು ಖಚಿತವಾಗಿದ್ದು, ಈ ಬಗ್ಗೆ ನಟಿ ಚಂದ್ರಕಲಾ ಮೋಹನ್ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
"ಹಲವು ವರ್ಷಗಳ ನಂತರ ಮತ್ತೆ ಉದಯ ಟಿವಿಯಲ್ಲಿ ಕೆಲಸ ಮಾಡಲು ಬಹಳ ಖುಷಿ ಇದೆ. ನನ್ನನ್ನು ಗುರುತಿಸಿ ಅವಕಾಶ ಕೊಟ್ಟಿದ್ದಕ್ಕೆ ವೈಷ್ಣವಿ ಮೇಡಂ ಹಾಗೂ ಗೋವಿಂದ್ ಸರ್‌ಗೆ ನಾನು ಬಹಳ ಋಣಿ. ಈ ಇಡೀ ತಂಡ ಬಹಳ ಸ್ನೇಹ ಭರಿತವಾಗಿದ್ದು 12 ವರ್ಷಗಳ ನಂತರ ನಟಿ ನಿತ್ಯಾ ರಾಮ್ ಜೊತೆ ಮತ್ತೆ ತೆರೆಹಂಚಿಕೊಳ್ಳುತ್ತಿರುವ ಬಗ್ಗೆ ಖುಷಿಯಿದೆ.

ಇಷ್ಟು ವರ್ಷಗಳ ಕಾಲ ನನ್ನ ನಟನ ಜರ್ನಿಯನ್ನು ನೋಡಿ ಆನಂದಿಸಿ ಪ್ರೀತಿಸಿದ ಎಲ್ಲಾ ಪ್ರೇಕ್ಷಕರು ಇನ್ನು ಮುಂದೆಯೂ ಇದೇ ರೀತಿ ಪ್ರೀತಿ ಕೊಡುತ್ತಾರೆ ಎಂಬ ದೃಢವಾದ ನಂಬಿಕೆಯಲ್ಲಿದ್ದೇನೆ. ದಯವಿಟ್ಟು ನೋಡಿ ಆಶೀರ್ವದಿಸಿ ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ" ಎಂದು ನಟಿ ಚಂದ್ರಕಲಾ ಮೋಹನ್ ಬರೆದುಕೊಂಡಿದ್ದಾರೆ.
ಅಂದ ಹಾಗೆ 12 ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ 'ಬೆಂಕಿಯಲ್ಲಿ ಅರಳಿದ ಹೂ' ಧಾರಾವಾಹಿಯಲ್ಲಿ ನಟಿ ನಿತ್ಯಾ ರಾಮ್ ಅವರು ನಾಯಕ ನಟಿಯಾಗಿ ಕಾಣಿಸಿಕೊಂಡರೆ ನಟಿ ಚಂದ್ರಕಲಾ ಮೋಹನ್ ಅವರು ಖಳನಾಯಕಿ ಪಾತ್ರವನ್ನು ಮಾಡಿದ್ದರು. ಇದೀಗ ಶೀಘ್ರದಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ "ಶಾಂತಿನಿವಾಸ"ದಲ್ಲಿ ಈ ಜೋಡಿ ಯಾವ ರೀತಿಯ ಪಾತ್ರಗಳಲ್ಲಿ ತೆರೆ ಮುಂದೆ ಬರಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ.


Click it and Unblock the Notifications











