ಧಾರಾವಾಹಿಯ ಸಂಭಾವನೆ ಬಾಕಿ ಹಣ ಕೊಟ್ಟಿಲ್ಲ: ನಟಿ ದೂರು
ಸಿನಿಮಾ ನಟ-ನಟಿಯರಿಗೆ ಹೋಲಿಸಿದರೆ ಧಾರಾವಾಹಿ ನಟ-ನಟಿಯರಿಗೆ ಸಂಭಾವನೆ ತೀರಾ ಕಡಿಮೆ. ಯಾರೊ ಕೆಲವು ಮುಖ್ಯ ಪಾತ್ರಧಾರಿಗಳಿಗೆ, ಸ್ಟಾರ್ ಕಿರುತೆರೆ ನಟ-ನಟಿಯರಿಗಷ್ಟೆ ಒಳ್ಳೆಯ ಸಂಭಾವನೆ ಸಿಗುತ್ತದೆ. ಉಳಿದವರಿಗೆ ದಿನಗೂಲಿ ಲೆಕ್ಕದ ಸಂಭಾವನೆಯಷ್ಟೆ.
ಆದರೆ ಇಲ್ಲೊಬ್ಬರು ನಟಿ ಧಾರಾವಾಹಿ ನಿರ್ಮಾಪಕರು ತಮಗೆ ಮೂರು ವರ್ಷದಿಂದ ಸಂಭಾವನೆಯನ್ನೇ ನೀಡಿಲ್ಲವೆಂದು ಆರೋಪ ಮಾಡಿದ್ದಾರೆ.
'ದಾಸ್ತಾನ್ ಎ ಮೊಹೋಬ್ಬತ್: ಸಲೀಂ ಅನಾರ್ಕಲಿ' ಹೆಸರಿನ ಧಾರಾವಾಹಿ 2018ರಲ್ಲಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ನಾಯಕಿ ಅನಾರ್ಕಲಿ ಪಾತ್ರದಲ್ಲಿ ಸೊನಾರಿಕಾ ಬದುರಿಯಾ ನಟಿಸಿದ್ದರು. ಧಾರಾವಾಹಿ ಆರಂಭದಲ್ಲಿ ಹಿಟ್ ಆಯಿತು. ಸಾಕಷ್ಟು ಮೆಚ್ಚುಗೆಗೆ ಸಹ ಪಾತ್ರವಾಯಿತು.

ಇದೀಗ ಮಾತನಾಡಿರುವ ನಟಿ ಸೊನಾರಿಕಾ ''ಮೂರು ವರ್ಷಗಳಾದರೂ ಆ ಧಾರಾವಾಹಿಯಿಂದ ನನಗೆ ಬರಬೇಕಾದ ಸಂಭಾವನೆ ಬಂದಿಲ್ಲ. ನನ್ನ ಸಂಭಾವನೆ ಮಾತ್ರವಲ್ಲ ಆ ಧಾರಾವಾಹಿಯ ಹಲವು ನಟರು, ತಂತ್ರಜ್ಞರ ಸಂಭಾವನೆ ಇನ್ನೂ ಬಾಕಿ ಇದೆ'' ಎಂದಿದ್ದಾರೆ.
''ಸಂಭಾವನೆಯ ಬಾಕಿ ಸುಮಾರು 70 ಲಕ್ಷ ರುಪಾಯಿಗಳು ನನಗೆ ಆ ಧಾರಾವಾಹಿ ನಿರ್ಮಾಪಕರಿಂದ ಬರಬೇಕಿದೆ. ಆದರೆ ಈ ವರೆಗೆ ಅದು ಬಂದಿಲ್ಲ. ನಾನು ಈಗಾಗಲೇ ಕಾನೂನು ಕ್ರಮ ಕೈಗೊಂಡಿದ್ದೇನೆ, ದೂರುಗಳನ್ನು ನೀಡಿದ್ದೇನೆ ಆದರೆ ಏನೂ ಪ್ರಯೋಜನವಾಗಿಲ್ಲ. ಬಾಕಿ ಸಂಭಾವನೆ ನೀಡದೇ ಇರುವುದರಿಂದ ಕೋವಿಡ್ ಸಮಯದಲ್ಲಿ ನಾನು ತೀವ್ರ ಸಂಕಷ್ಟ ಅನುಭವಿಸಿದ್ದೆ'' ಎಂದಿದ್ದಾರೆ ನಟಿ.
ಪ್ರಸ್ತುತ 'ದೇವೋಂಕೆ ದೇವ್ ಮಹಾದೇವ್‌ನಲ್ಲಿ ನಟಿಸುತ್ತಿರುವ ಸೊನಾರಿಕಾ ಕೋವಿಡ್ ಮುಂಚೆಯೇ ನಟಿಸಿದ್ದ ಸಿನಿಮಾ ಒಂದು ಬಿಡುಗಡೆ ಆಗದೇ ಇರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಧಾರಾವಾಹಿ ಜೊತೆಗೆ ಒಟಿಟಿಯ ಕೆಲವು ವೆಬ್ ಸರಣಿ, ಸಿನಿಮಾಗಳಲ್ಲಿ ನಟಿಸುತ್ತಿರುವ ಸೊನಾರಿಕಾ ನಟನಾ ವೃತ್ತಿಯಲ್ಲಿಯೇ ಮುಂದುವರೆಯಲು ಅಗತ್ಯ ಶ್ರಮ ಯತ್ನಗಳನ್ನು ಮಾಡುತ್ತಿದ್ದಾರೆ.
'ದೇವೋಂಕೆ ದೇವ್ ಮಹಾದೇವ್' ಧಾರಾವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ಸೊನಾರಿಕಾ ನಟಿಸಿದ್ದಾರೆ. ಇದರ ಜೊತೆಗೆ 'ಇತಿಹಾಸ್ ಬೀ, ರಹಸ್ಯ ಬೀ' ಧಾರಾವಾಹಿಯಲ್ಲಿಯೂ ಸೊನಾರಿಕಾ ನಟಿಸುತ್ತಿದ್ದಾರೆ. ಹಿಂದಿ ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಈ ಚೆಲುವೆ ನಟನೆ ಆರಂಭಿಸಿದ್ದು ದಕ್ಷಿಣ ಭಾರತ ಸಿನಿಮಾಗಳ ಮೂಲಕ.
2015 ರಲ್ಲಿ ತೆಲುಗು ಸಿನಿಮಾ 'ಜಾದೂಗಾಡು' ಮೂಲಕ ನಟನೆ ಆರಂಭಿಸಿದರು ಸೊನಾರಿಕಾ. ಬಳಿಕ 'ಸ್ಪೀಡುನ್ನೋಡು' ಸಿನಿಮಾದಲ್ಲಿ ನಟಿಸಿದರು. ಬಳಿಕ 'ಈಡೋ ರಕಮ್, ಆಡೋ ರಕಮ್' ಸಿನಿಮಾಗಳಲ್ಲಿ ನಟಿಸಿದರು. ಹಿಂದಿಯ 'ಸಾಂಸೆ', ತಮಿಳಿನ 'ಇಂದ್ರಜಿತ್' ಸಿನಿಮಾದಲ್ಲಿ ಇವರು ನಟಿಸಿದ್ದಾರೆ.


Click it and Unblock the Notifications











