'ಪುಟ್ಟಕ್ಕನ ಮಕ್ಕಳು' ಮೂಲಕ ಮತ್ತೆ ಕಿರುತೆರೆಗೆ ಬಂದ 'ಕನ್ನಡತಿ' ತಾಪ್ಸಿ: ಬಂಗಾರಮ್ಮನ ಮಗಳಾಗಿ ಎಂಟ್ರಿ
ಕನ್ನಡತಿ ಧಾರಾವಾಹಿ ನಂತರ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ನಟನೆಗೆ ವಾಪಸ್ ಆಗಿದ್ದಾರೆ ನಟಿ ದೀಪಶ್ರೀ. ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಯಾಗಿದ್ದ ಕನ್ನಡತಿ ಈಗಾಗಲೇ ಮುಗಿದು ಹಲವು ತಿಂಗಳುಗಳು ಕಳೆದಿದೆ. ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ದೀಪಶ್ರೀ, ತಾಪ್ಸಿ ಎಂಬ ಪಾತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದರು. ಈ ಧಾರಾವಾಹಿ ಮುಗಿದ ನಂತರ ಬೇರಾವುದರಲ್ಲೂ ಕಾಣದ ಈ ನಟಿ ಈಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ವಸು ಎಂಬ ಪಾತ್ರಧಾರಿಯಾಗಿ ಮತ್ತೆ ನಟನೆಗೆ ಮರಳಿದ್ದಾರೆ.
ವಸು ಎಂಬ ಪಾತ್ರವನ್ನು ಮೊದಲಿಗೆ ನಟಿ ಸೌಮ್ಯ ನಡೆಸಿಕೊಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಆಕೆ ಧಾರಾವಾಹಿಯಿಂದ ಹೊರಬಂದಿದ್ದು ಆ ಜಾಗಕ್ಕೆ ಇದೀಗ ದೀಪಶ್ರೀ ಅವರು ಬಂದಿದ್ದಾರೆ. ನಟಿ ದೀಪಶ್ರೀ ಈಗಾಗಲೇ ಧಾರಾವಾಹಿಯನ್ನು ಸೇರಿದ್ದು ಹಲವು ಎಪಿಸೋಡ್‌ಗಳ ಶೂಟಿಂಗ್ ಕೂಡ ನಡೆದಿದೆಯಂತೆ. ಅಲ್ಲದೆ, ಇತ್ತೀಚೆಗೆ ಒಂದು ಎಪಿಸೋಡ್‌ನಲ್ಲಿ ವಸು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪೌರಾಣಿಕ ಪಾತ್ರದ ಮೂಲಕ ನಟನೆಗೆ ಪ್ರವೇಶ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ಜೈ ಹನುಮಾನ್'ನಲ್ಲಿ ದೇವಿ ಸಂಧ್ಯಾ ಆಗಿ ನಟಿಸುವ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ದೀಪಶ್ರೀ ಮುಂದೆ ನಟಿಸಿದ್ದು ಕನ್ನಡತಿಯ ತಾಪ್ಸಿಯಾಗಿ. ಕನ್ನಡತಿಯ ತಾಪ್ಸಿ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದಿರುವ ದೀಪಶ್ರೀ ಈಗ ವಸು ಆಗಿ ನಿಮ್ಮನ್ನು ರಂಜಿಸಲಿದ್ದಾರೆ.
ಬಣ್ಣದ ಕೋನದಲ್ಲಿ ನಟಿಸುವ ಕನಸಿತ್ತು
ದೀಪಶ್ರೀ ಕುಟುಂಬಕ್ಕೂ ನಟನಾ ಕ್ಷೇತ್ರಕ್ಕೂ ಯಾವುದೇ ರೀತಿಯ ಹೋಲಿಕೆಯಿಲ್ಲ. ಕುಟುಂಬದ ಅನೇಕರು ಡಾಕ್ಟರ್, ಇಂಜಿನಿಯರಿಂಗ್ ವೃತ್ತಿಯಲ್ಲಿರುವವರು. ದೀಪಶ್ರೀ ಅವರ ತಂದೆ ಇರಿಗೇಶನ್ ಡಿಪಾರ್ಟ್ಮೆಂಟ್‌ನಲ್ಲಿ ಇಂಜಿನಿಯರ್ ಆಗಿದ್ದವರು. ಮಹಾನಗರಿಯಲ್ಲಿ ಕಲಿಯುತ್ತಿರುವ ಸಮಯದಲ್ಲಿ ಬಿಎಂಎಸ್ ಕಾಲೇಜ್‌ನ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದರು ದೀಪಶ್ರೀ. ಕಾಲೇಜ್‌ನಲ್ಲಿ ಎಂಟಿವಿಯವರು ಟೈಮ್ಸ್ ಆಫ್ ಇಂಡಿಯಾ ಫ್ಯಾಷನ್ ಶೋ ನಡೆಸಿದಾಗ ಅದರಲ್ಲಿಯೂ ಈಕೆ ಭಾಗವಹಿಸಿದ್ದರು. ಇಂಜಿನಿಯರಿಂಗ್‌ನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದ ದೀಪಶ್ರೀಗೆ ಖಾಸಗಿ ಸಂಸ್ಥೆಯಲ್ಲಿ ಒಳ್ಳೆಯ ಉದ್ಯೋಗವೂ ದೊರಕಿತ್ತು. ಆದರೆ, ಬಣ್ಣದ ಲೋಕದ ಸೆಳೆತ ಹೆಚ್ಚಾಗಿದ್ದರಿಂದ ನಟನೆಗೆ ಪಾದಾರ್ಪಣೆ ಮಾಡಿದ್ದರು ದೀಪಶ್ರೀ.

ತಾಪ್ಸಿ ಪಾತ್ರ ಹೆಸರು ತಂದುಕೊಟ್ಟಿದೆ
ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ದೀಪಶ್ರೀ ಅಭಿನಯಿಸಿದ್ದರೂ ಕನ್ನಡತಿಯ ತಾಪ್ಸಿ ಪಾತ್ರ ಸಾಕಷ್ಟು ನೇಮ್ ಹಾಗೂ ಫೇಮ್ ತಂದುಕೊಟ್ಟಿದೆ ಎಂದರೆ ತಪ್ಪಾಗಲಾರದು. ಇಂದು ದೀಪಶ್ರೀ ಎಲ್ಲೇ ಕಂಡರೂ ಜನ ಆಕೆಯನ್ನು ಕನ್ನಡತಿಯ ತಾಪ್ಸಿ ಎಂದೇ ಗುರುತಿಸುವುದಕ್ಕಾಗಿ ತುಂಬಾ ಖುಷಿಯಿದೆಯಂತೆ. ಇದಕ್ಕಾಗಿ ಕನ್ನಡತಿ ತಂಡಕ್ಕೂ, ನಿರ್ದೇಶಕ ಯಶವಂತ್ ಪಾಂಡುಗೂ ಋಣಿಯಾಗಿದ್ದಾರೆಯಂತೆ ದೀಪಶ್ರೀ. ಕನ್ನಡತಿಯ ನಂತರ ಸಣ್ಣ ಗ್ಯಾಪ್ ತೆಗೆದುಕೊಂಡು ವಸು ಆಗಿ ತೆರೆ ಮೇಲೆ ದೀಪಶ್ರೀ ಬಂದಿದ್ದಾರೆ.


Click it and Unblock the Notifications