ಬಸ್‌ನಲ್ಲಿ ತಿಗಣೆ ಕಾಟ; ಕಂಪನಿ ವಿರುದ್ಧ ಕೇಸ್ ದಾಖಲಿಸಿದ ಕನ್ನಡದ ನಟಿಗೆ ₹1.29 ಲಕ್ಷ ನೀಡಲು ಕೋರ್ಟ್ ಆದೇಶ
ಖಾಸಗಿ ಇರಬಹುದು. ಇಲ್ಲವೇ ಸರ್ಕಾರಿ ಬಸ್‌ಗಳು ಇರಬಹುದು ಶುಚಿತ್ವವನ್ನು ಇಟ್ಟುಕೊಳ್ಳಬೇಕು. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗುತ್ತೆ. ಆದರೆ, ಕೆಲವು ಬಸ್ ಕಂಪನಿಗಳು ಆ ಗೋಜಿಗೆ ಹೋಗುವುದಿಲ್ಲ. ಬಸ್‌ಗಳಲ್ಲಿ ಪ್ರಮುಖವಾಗಿ ಎದುರಾಗುವ ಸಮಸ್ಯೆ ಅಂದರೆ ಅದು ತಿಗಣೆಯದ್ದು. ಕೆಲವರಿಗೆ ತಿಗಣೆ ಅಲರ್ಜಿ. ಅದರಿಂದ ಕಚ್ಚಿಸಿಕೊಂಡವರು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ಉದಾಹರಣೆಗಳು ಇವೆ.
ಇಂತಹದ್ದೇ ಒಂದು ಸಮಸ್ಯೆ ವಿರುದ್ಧ ಕನ್ನಡ ನಟಿಯೊಬ್ಬರು ಕಾನೂನು ಹೋರಾಟ ಮಾಡಿ ಗೆದ್ದಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ದೀಪಿಕಾ ಸುವರ್ಣ ಅವರು ಖಾಸಗಿ ಕಂಪನಿ ವಿರುದ್ಧ ತಿಗಣೆ ಕೇಸ್ ಗೆದ್ದ ನಟಿ. ಇವರು ಕನ್ನಡದ ಜನಪ್ರಿಯ ಧಾರಾವಾಹಿ 'ಗೀತಾ'ದ ನಟ ವಿಜಯ್ ಶೋಭರಾಜ್ ಪಾವೂರ್ ಅವರ ಪತ್ನಿ.

ದೀಪಿಕಾ ಸುವರ್ಣ ಸೀಬರ್ಡ್ ಸ್ಲೀಪರ್ ಖಾಸಗಿ ಬಸ್‌ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅವರಿಗೆ ತಿಗಣೆ ಕಾಟ ಶುರುವಾಗಿತ್ತು. ಅದನ್ನು ಬಸ್‌ನ ಸಿಬ್ಬಂದಿಗಳ ಗಮನಕ್ಕೆ ತಂದರೂ ಅವರು ನಿರ್ಲ್ಯಕ್ಷಿಸಿದ್ದರು. ಹೀಗಾಗಿ ತಿಗಣೆಯಿಂದ ಕಚ್ಚಿಕೊಂಡು ಬೆಂಗಳೂರಿನ ವರೆಗೂ ಪ್ರಯಾಣ ಮಾಡಿದ್ದರು. ಅದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಜೊತೆಗೆ ಆರ್ಥಿಕ ನಷ್ಟ ಕೂಡ ಆಗಿತ್ತು. ಈ ಸಂಬಂಧ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ನ್ಯಾಯಾಲಯದಿಂದ ಆ ತೀರ್ಪು ಹೊರ ಬಿದ್ದಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ರಿಯಾಲಿಟಿ ಶೋ 'ಗಿಚ್ಚಿ ಗಿಲಿಗಿಲಿ'ಯಲ್ಲಿ ದೀಪಿಕಾ ಸುವರ್ಣ ಭಾಗವಹಿಸುತ್ತಿದ್ದರು. ಮೂಲತ: ಮಂಗಳೂರಿನವರಾಗಿರುವ ಇವರು 2022 ಆಗಸ್ಟ್ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಸೀಬರ್ಡ್ ಖಾಸಗಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದರು. ರೆಡ್ ಬಸ್ ಆಪ್‌ನಿಂದ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು. ಬಸ್ ಹತ್ತಿದ ಕೆಲವೇ ಕ್ಷಣಗಳಲ್ಲಿ ತಿಗಣೆ ಕಾಟ ಶುರುವಾಗಿದೆ. ಈ ವಿಷಯವನ್ನು ಸೀಬರ್ಡ್ ಬಸ್‌ನ ಸಿಬ್ಬಂದಿಯ ಗಮನಕ್ಕೂ ತಂದಿದ್ದರು. ಸಿಬ್ಬಂದಿ ಇದಕ್ಕೆ ಯಾವುದೇ ಪರಿಹಾರ ನೀಡಿಲ್ಲ.

ತಿಗಣೆಯಿಂದ ಕಚ್ಚಿಸಿಕೊಂಡು ಬೆಂಗಳೂರಿನವರೆಗೂ ಪ್ರಯಾಣ ಮಾಡಿದ್ದ ದೀಪಿಕಾ ಸುವರ್ಣ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಂಬಂಧ ಅವರಿಗೆ ಆಸ್ಪತ್ರೆಗೂ ದಾಖಲಾಗಿದ್ದರು. ಅಲ್ಲದೆ ಗಿಚ್ಚಿ ಗಿಲಿ ಗಿಲಿ ಶೋನಿಂದ ಅವರು ಹೊರಗೆ ಉಳಿಯಬೇಕಾಯ್ತು. ಇದರಿಂದ ನೊಂದ ನಟಿ ದೀಪಿಕಾ ಸುವರ್ಣ ಹಾಗೂ ಪತಿ ವಿಜಯ್ ಶೋಭರಾಜ್ ಪಾವೂರ್ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಹೊರ ಹೋಗಿದ್ದರು.
ದೀಪಿಕಾ ಅವರು ಪ್ರಯಾಣಿಸಿದ್ದ ಸೀಬರ್ಡ್ ಟೂರಿಸ್ಟ್, ಹಾಗೂ ರೆಡ್ ಬಸ್ ಅಪ್ಲಿಕೇಶನ್ ವಿರುದ್ಧ ಕೇಸ್ ದಾಖಲಿಸಿದ್ದರು. ಇವರು ನೀಡಿದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಸೋಮಶೇಖರಪ್ಪ.ಕೆ.ಹಂಡಿಗೋಲ್ ಮತ್ತು ಶಾರದಮ್ಮ ಎಚ್‌ಜಿ ಪರಿಹಾರವನ್ನು ಘೋಷಿಸಿದೆ. ವೈದ್ಯಕೀಯ ವೆಚ್ಚ 18,650 ರೂಪಾಯಿ, ಬಸ್ ಟಿಕೆಟ್ ಮೊತ್ತ 840 ರೂಪಾಯಿ, ದೂರು ಮತ್ತು ವ್ಯಾಜ್ಯಕ್ಕೆಂದು 10 ಸಾವಿರ, ಮಾನಸಿಕ ಕಿರಿಕಿರಿ ಹಾಗೂ ಆರ್ಥಿಕ ನಷ್ಟವಾದ ಹಿನ್ನೆಲೆಯಲ್ಲಿ ಏಪ್ರಿಲ್ 6, 2023ರಿಂದ ಜಾರಿಗೆ ಬರುವಂತೆ ಶೇ.6ರಷ್ಟು ಬಡ್ಡಿ ಸಮೇತ ಒಟ್ಟು 1.29 ಲಕ್ಷ ರೂಪಾಯಿ ನೀಡುವಂತೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.
ಇನ್ನು ಡಿಸೆಂಬರ್ 30ಕ್ಕೆ ಈ ಆದೇಶವನ್ನು ನೀಡಲಾಗಿದ್ದು, ಈ ಆದೇಶವನ್ನು ಮೀರಿದರೆ ಮತ್ತು 45 ದಿನಗಳ ಅವಧಿಯ ಒಳಗೆ ಶೇ.8ರಷ್ಟು ಬಡ್ಡಿಯನ್ನು ಸೇರಿಕೊಡಬೇಕಾಗುತ್ತೆ ಎಂದು ನ್ಯಾಯಾಲಯ ಹೇಳಿದೆ. ತಿಗಣೆ ಕಾಟದಿಂದ ನಟಿಯ ಆರೋಗ್ಯ ತಪ್ಪಿದ್ದರಿಂದ ಅವರು ರಿಯಾಲಿಟಿ ಶೋನಿಂದ ಹೊರ ಬರಬೇಕಾಗಿಯ್ತು. ಇದರಿಂದ ಆರ್ಥಿಕ ನಷ್ಟದ ಜೊತೆಗೆ ವೃತ್ತಿ ಬದುಕಿನಲ್ಲೂ ಹಿನ್ನೆಡೆಯಾಗಿತ್ತು. ಈ ಕಾರಣಕ್ಕೆ ಅವರು ಖಾಸಗಿ ಬಸ್ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.


Click it and Unblock the Notifications











