10 ವರ್ಷಗಳ ಬಳಿಕ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿದ ಈ ನಟಿ ಯಾರು ಗೊತ್ತಾ? ಇವರ ಹಿನ್ನೆಲೆ ಏನು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ 'ಲಕ್ಷ್ಮಿ ನಿವಾಸ'ದಲ್ಲಿ ನುರಿತ ಕಲಾವಿದರ ದಂಡೇ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸೂಪರ್ ಫ್ಯಾಮಿಲಿ ಸ್ಟೋರಿಯನ್ನು ವೀಕ್ಷಕರಿಗೆ ಕಟ್ಟಿಕೊಡುತ್ತಿರುವ ಧಾರಾವಾಹಿಯಲ್ಲಿ ನಮ್ಮ ದಿನನಿತ್ಯದ ಜೀವನವನ್ನು ಆಗಾಗ ನೆನಪಿಸುವಂತಹ ಹಲವು ಘಟನೆಗಳು ಸಂಭವಿಸುತ್ತಲೇ ಇರುತ್ತದೆ. ನಿವೃತ್ತಿ ನಂತರದ ಜೀವನದ ಕಲ್ಪನೆ ನಮ್ಮ ಜೀವನದಲ್ಲಿ ಎಷ್ಟು ಹಾಸುಹೊಕ್ಕಿದೆ ಎನ್ನುವುದು ಈ ಸೀರಿಯಲ್ ನೋಡಿದರೆ ನಿಮಗೆ ನೆನಪಾಗುತ್ತದೆ.
ಒಟ್ಟಿನಲ್ಲಿ ಮಿಡಲ್ ಕ್ಲಾಸ್ ಜನರ ಜೀವನವನ್ನು ಎತ್ತಿ ಹಿಡಿದಿರುವ ಈ ಧಾರಾವಾಹಿಯಲ್ಲಿ ದಿಶಾ ಮದನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಭಾವನಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದಿಶಾ ತಮ್ಮ ಪಾತ್ರದ ಬಗ್ಗೆ ಒಂದಷ್ಟು ವಿಚಾರಗಳನ್ನು ಖಾಸಗಿ ವಾಹಿನಿಯೊಂದರಲ್ಲಿ ಹಂಚಿಕೊಂಡಿದ್ದಾರೆ.

ಭಾವನಾ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುವಂತಹ ಪಾತ್ರ. ಈ ಪಾತ್ರದಲ್ಲಿ ದಿಶಾ ಮದನ್ ಅಭಿನಯಿಸಲು ಆರಂಭಿಸಿದ ನಂತರ ಅವರು ಗಮನಿಸಿರುವ ಒಂದು ವಿಚಾರವೆಂದರೆ ಈ ಪಾತ್ರಕ್ಕೆ ತುಂಬಾ ಹುಡುಗಿಯರು ಬಹಳ ಬೇಗನೇ ಕನೆಕ್ಟ್ ಆಗಿದ್ದಾರೆ . ಮಾತ್ರವಲ್ಲದೇ ಲಕ್ಷ್ಮಿ ನಿವಾಸ ಧಾರಾವಾಹಿಯ ಕಥೆಯೂ ಕೂಡ ಜನರನ್ನು ಬೇಗ ಅಟ್ರಾಕ್ಟ್ ಮಾಡುವ ರೀತಿಯಲ್ಲಿಯೇ ಇದೆ ಎಂಬುದು ದಿಶಾ ಮದನ್ ಅವರ ಅಭಿಪ್ರಾಯ.
ಇನ್ನು ದಿಶಾ ಮದನ್ ಅವರು ಭಾವನಾ ಪಾತ್ರದ ಕುರಿತು ಸಂಪೂರ್ಣ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆಯಂತೆ. ಧರಿಸುವ ಸೀರೆ, ತೊಡುವ ಆಭರಣ ಹೀಗೆ ಪ್ರತಿಯೊಂದು ವಿಚಾರದ ಮೇಲೆಯೂ ಸೂಕ್ಷ್ಮವಾಗಿ ಗಮನಹರಿಸುತ್ತಾರೆ ಅಂತೆ. 10 ವರ್ಷಗಳ ಹಿಂದೆ ಶೂಟಿಂಗ್‌ಗಾಗಿ ದಿಶಾ ಶಾಪಿಂಗ್ ಮಾಡುತ್ತಿದ್ದರು. ಈಗ ಮತ್ತೆ ಎರಡು ವಾರಕ್ಕೆ ಒಮ್ಮೆ ಸೀರೆ ಶಾಪಿಂಗ್ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಆಕೆ ಖಾಸಗಿ ವಾಹಿನಿಯಲ್ಲಿ ಹೇಳಿಕೊಂಡಿದ್ದಾರೆ.

ಸದ್ಯ ಧಾರಾವಾಹಿಯಲ್ಲಿ ಸಿಂಗಲ್ ಆಗಿರುವ ನಾಯಕಿ ದಿಶಾ ಮದನ್ ನಿಜ ಜೀವನದಲ್ಲಿ ಸಿಂಗಲ್ ಅಲ್ಲ. ಇಬ್ಬರು ಮಕ್ಕಳ ತಾಯಿಯಾಗಿರುವ ಇವರಿಗೆ ಕಿರುತೆರೆಗೆ ಕಮ್‌ಬ್ಯಾಕ್ ಮಾಡಲು ಕುಟುಂಬದವರು ನೀಡುತ್ತಿರುವ ಸಹಕಾರವೇ ಕಾರಣ ಎಂದು ನೆನಪಿಸಿಕೊಳ್ಳುತ್ತಾರೆ. ದಿಶಾ ಮದನ್ ಶೂಟಿಂಗ್‌ಗೆ ಹೋದಾಗ ಮಕ್ಕಳಿಬ್ಬರೂ ಅಪ್ಪ-ಅಮ್ಮನ ಜೊತೆ ಇರುತ್ತಾರೆ ಅಂತೆ. ಹಾಗೆಯೇ ಅವರ ಗಂಡ ಶಶಾಂಕ್ ವಾಸುಕಿ ಕೆಲಸ ಮುಗಿಸಿಕೊಂಡು ಬೇಗ ಬರುತ್ತಾರೆ. ಒಂದು ವೇಳೆ ಇಡೀ ದಿನ ಚಿತ್ರೀಕರಣ ಇದ್ದರಂತೂ ಮನೆಯಿಂದಲೇ ಆಕೆಯ ಗಂಡ ಕೆಲಸ ಮಾಡುತ್ತಾರೆಯಂತೆ.
ಇನ್ನು ದಿಶಾ ಮದನ್ ಅವರು ಲಕ್ಷ್ಮಿ ನಿವಾಸ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಮೊದಲು ಅವರಿಗೆ ನಿಜವಾಗಿಯೂ ಕುಟುಂಬದ ಬಗ್ಗೆ ಆತಂಕ ಇತ್ತಂತೆ. ಆದರೆ, ಈಗ ಆಕೆಯ ಈ ದಿನಚರಿ ಅವರಿಗೆ ಮಾತ್ರವಲ್ಲ ಅವರ ಮಕ್ಕಳಿಗೂ ಅಭ್ಯಾಸ ಆಗಿದೆಯೆಂದು ಖುಷಿಯಿಂದ ಹೇಳಿದ್ದಾರೆ. 'ಕುಲವಧು' ಧಾರಾವಾಹಿಯ ವಚನಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ದಿಶಾ ಮದನ್ ಮುಂದೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಇದೀಗ ಹತ್ತು ವರ್ಷಗಳ ನಂತರ ಆಕೆ ಮರಳಿದ್ದು ಮತ್ತೊಮ್ಮೆ ವೀಕ್ಷಕರ ಮನ ಸೆಳೆಯಲಿದ್ದಾರೆ.


Click it and Unblock the Notifications











