'ಬಾಹುಬಲಿ' ಪ್ರಭಾಸ್ ಅಂತ ಆನೆ ಏರಿದ ನಟಿ ದಿವ್ಯಾ ಉರುಡುಗ: ವಿಡಿಯೋ ನೋಡಿ
ನಟಿ ದಿವ್ಯಾ ಉರುಡುಗ ಯಾರಿಗೆ ಗೊತ್ತಿಲ್ಲ ಹೇಳಿ? ಹಲವಾರು ಧಾರಾವಾಹಿಗಳಲ್ಲಿ ನಟಿಸಿದ ನಂತರ ಬಿಗ್ ಬಾಸ್‌ನಿಂದ ಬಹಳಷ್ಟು ಖ್ಯಾತಿ ಪಡೆದ ಈಕೆ ತಮ್ಮ ಗೆಳೆಯ ಅರವಿಂದ್ ಕೆಪಿ ಅವರೊಂದಿಗೆ 'ಅರ್ಧಂಬರ್ಧ ಪ್ರೇಮ ಕಥೆ' ಅನ್ನುವ ಸಿನಿಮಾದಲ್ಲಿಯೂ ನಟಿಸಿದರು. ಇದೀಗ ಮತ್ತೆ ಧಾರಾವಾಹಿ ಕಡೆಗೆ ವಾಪಸ್ ಆಗಿದ್ದಾರೆ.
ಹೌದು, ಮತ್ತೆ ಕಿರುತೆರೆಗೆ ವಾಪಸ್ ಆಗಿರುವ ನಟಿ ದಿವ್ಯಾ ಉರುಡುಗ 'ನಿನಗಾಗಿ' ಎಂಬ ಧಾರಾವಾಹಿಯ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಗೊತ್ತೇ ಇದೆ. ಅಂದಹಾಗೆ ಈ ಧಾರಾವಾಹಿ ಪ್ರೊಮೋ ಕೂಡ ಈಗಾಗಲೇ ಬಿಡುಗಡೆಯಾಗಿದ್ದು, ಕಿರುತೆರೆ ವೀಕ್ಷಕರಿಗೆ ಇಷ್ಟನೂ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿ ಪ್ರಸಾರಕ್ಕೂ ಮೊದಲೇ ಕಿರುತೆರೆ ವೀಕ್ಷಕರಲ್ಲಿ ಕುತೂಹಲ ಮೂಡಿಸುವಂತೆ ಮಾಡಿದೆ.

ರಚನಾ ಎಂಬ ಸಿನಿಮಾ ನಟಿಯ ಕಥೆಯೇ 'ನಿನಗಾಗಿ' ಧಾರಾವಾಹಿ ಅನ್ನೋದು ಪ್ರೋಮೊದಿಂದ ಗೊತ್ತಾಗುತ್ತೆ. ತಾಯಿಯ ಆಸೆಯಂತೆ ಸಿನಿಮಾ ನಟಿಯಾಗಿರುವ ರಚನಾ, ತಾಯಿ ಪ್ರೀತಿಗೆ ಪ್ರತಿಕ್ಷಣವೂ ಹಂಬಲಿಸುತ್ತಿರುತ್ತಾಳೆ. ಆದರೆ, ಆಕೆಗೆ ತಾಯಿ ಪ್ರೀತಿ ಸಿಗುತ್ತದೆಯೋ? ಆಕೆಯ ಜೀವನದ ಸುಖ ದುಃಖಗಳೇನು? ಎಂಬುದೇ ಈ ಧಾರಾವಾಹಿಯ ಕಥಾವಸ್ತು.
ಅಂದಹಾಗೆ ಈ ಧಾರಾವಾಹಿಯ ಎರಡನೇ ಪ್ರೋಮೋ ಹೊರಬಂದಿದ್ದು, ಅದರಲ್ಲಿ ಒಂದು ಆನೆಯನ್ನೇರಿ ರಾಜಕುಮಾರಿಯಂತೆ ಪೋಸ್ ಕೊಟ್ಟಿದ್ದಾರೆ ನಟಿ ದಿವ್ಯಾ ಉರುಡುಗ. ಇದರ ಜೊತೆಗೆ ತಾವು ಆನೆಯೇರುತ್ತಿರುವ ವಿಡಿಯೋದ ತುಣುಕೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡಿಕೊಂಡಿರುವ ಅವರು "ಅಂಬಿಕಾ ಎನ್ನುವ ಈ ಆನೆಗೆ 50 ವರ್ಷ ವಯಸ್ಸು. ಕೇರಳದ ಕುಮಿಲಿ ಎಂಬ ಜಾಗದ ಆನೆ ಇದಾಗಿದ್ದು ಬಹಳ ಗ್ರೇಸ್‌ಫುಲ್ ಆಗಿದೆ. ಚಿಕ್ಕಂದಿನಲ್ಲಿ ಮರ ಹತ್ತಿದ ಅಭ್ಯಾಸವಿದ್ದುದರಿಂದ ಆನೆ ಏರಲು ಸಹಾಯವಾಯಿತು" ಎಂದು ತಮ್ಮ ಹೊಸ ಅನುಭವದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಅಂದ ಹಾಗೆ ಸಿನಿಮಾ ನಟರಿಗೂ ಸಿಗದ ಆನೆ ಏರುವ ಸೌಭಾಗ್ಯ ದಿವ್ಯಾ ಉರುಡುಗ ಅವರಿಗೆ ಧಾರಾವಾಹಿ ಮೂಲಕ ಸಿಕ್ಕಿದ್ದು ಈ ಬಗ್ಗೆ ನಟಿಗೆ ಬಹಳ ಸಂತೋಷವಿರುವುದನ್ನು ನೋಡಬಹುದು. ದಿವ್ಯಾ ಉರುಡುಗ ಅವರ ಫಾಲೋವರ್ಸ್ ಹಾಗೂ ಅಭಿಮಾನಿಗಳು ಈ ದೃಶ್ಯವನ್ನು ನೋಡಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಅಂದ ಹಾಗೇ 'ನಿನಗಾಗಿ' ಧಾರಾವಾಹಿ ತಂಡದಿಂದ ಮೊದಲ ಪ್ರೋಮೋ ಹೊರಬಿದ್ದಾಗ ಕಿರುತೆರೆ ವೀಕ್ಷಕರು ಫುಲ್ ಖುಷಿಯಾಗಿದ್ದರು. ಮತ್ತೆ ಎರಡನೇ ಪ್ರೋಮೋ ಬಂದಾಗಲಂತೂ ಧಾರಾವಾಹಿ ಯಾವಾಗ ಆರಂಭವಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿತ್ತು. ಆ ಎಲ್ಲಾ ಕುತೂಹಲಕ್ಕೆ ಧಾರಾವಾಹಿ ತಂಡ, ಕಲರ್ಸ್ ಕನ್ನಡ ವಾಹಿನಿ ಫುಲ್ ಸ್ಟಾಪ್ ಹಾಕಿದೆ. ಇದೇ ತಿಂಗಳ 27ರಿಂದ 'ನಿನಗಾಗಿ' ಧಾರಾವಾಹಿ ಪ್ರಸಾರವಾಗಲಿದೆ.
ಅಂದ ಹಾಗೇ 'ನಿನಗಾಗಿ' ಧಾರಾವಾಹಿಯು ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದ್ದು, ಕಲರ್ಸ್ ಕನ್ನಡ ವಾಹಿನಿಯ ಯಾವ ಧಾರಾವಾಹಿಯು ಮುಕ್ತಾಯವಾಗಲಿದೆ ಎಂಬ ಚಿಂತೆಯೂ ಪ್ರೇಕ್ಷಕರನ್ನು ಕಾಡುತ್ತಿದೆ.


Click it and Unblock the Notifications











