'ರವಿಕೆ ಪ್ರಸಂಗ' ಹೇಳಲು ಸಜ್ಜಾಗಿರೋ ಗೀತಾ ಭಾರತಿ ಭಟ್; ಈ ನಟಿಯ ಮೊದಲ ಸಿನಿಮಾ ಯಾವುದು?
ಗೀತಾ ಭಾರತಿ ಭಟ್.. ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಹೆಸರು. 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿ ಗುಂಡಮ್ಮ ಆಲಿಯಾಸ್ ಗೀತಾ ಆಗಿ ನಟಿಸಿದ್ದ ಗೀತಾ ಭಾರತಿ ಭಟ್ ಇದೀಗ ಮಗದೊಮ್ಮೆ ವೀಕ್ಷಕರನ್ನು ರಂಜಿಸಲಿದ್ದಾರೆ. ಆದರೆ, ಈ ಬಾರಿ ಆಕೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನು ಉಣಬಡಿಸುತ್ತಿರುವುದು ಕಿರುತೆರೆಯಲ್ಲಲ್ಲ. ಬದಲಿಗೆ ಹಿರಿತೆರೆಯಲ್ಲಿ.
ಹೌದು, ಸಂತೋಷ್ ಕೊಡೆಂಕೇರಿ ನಿರ್ದೇಶನದ 'ರವಿಕೆ ಪ್ರಸಂಗ' ಸಿನಿಮಾ ಮುಂದಿನ ಶುಕ್ರವಾರ ಬಿಡುಗಡೆಯಾಗಲಿದೆ. ಅದರಲ್ಲಿ ನಾಯಕಿ ಸಾನ್ವಿ ಸಂಪಾಜೆಯಾಗಿ ಅಭಿನಯಿಸಿದ್ದಾರೆ ಗೀತಾ ಭಾರತಿ ಭಟ್. "ದಕ್ಷಿಣ ಕನ್ನಡದ ಒಂದು ಹಳ್ಳಿಯಲ್ಲಿ ನಡೆಯುವ ಕತೆಯೇ ರವಿಕೆ ಪ್ರಸಂಗ ಸಿನಿಮಾದ ಕಥಾ ಹಂದರ. ನಾಯಕಿ ಸಾನ್ವಿಗೆ 28ರ ಹರೆಯ. ಮದುವೆಯ ವಯಸ್ಸಾಗಿದ್ದರೂ ಆಕೆಗೆ ಮದುವೆಯಾಗಿರುವುದಿಲ್ಲ. ಈಗಾಗಲೇ ಸಾನ್ವಿಗೆ ಹಲವು ಮದುವೆ ಸಂಬಂಧಗಳು ಬಂದಿದ್ದರೂ, ಅವಳಿಗೆ ಯಾವ ಸಂಬಂಧವೂ ಸರಿಯಾಗುವುದಿಲ್ಲ. ನಾಯಕಿ ಸಾನ್ವಿ ಒಬ್ಬ ಸುಂದರವಾದ ಹುಡುಗನನ್ನು ಮದುವೆಯಾಗಲು ಹುಡುಕುತ್ತಿರುತ್ತಾಳೆ. ಇನ್ನು ಆಕೆಯ ಮನೆಯವರಿಗೂ ಅವಳ ಮದುವೆಯದ್ದೇ ಯೋಚನೆ" ಎಂದು ಪ್ರೆಸ್ ಮೀಟ್‌ವೊಂದರಲ್ಲಿ ಗೀತಾ ಭಾರತಿ ಭಟ್ ಹೇಳಿಕೊಂಡಿದ್ದರು.

ಪ್ರೆಸ್ ಮೀಟ್ ಒಂದರಲ್ಲಿ ಮಾತನಾಡಿದ ಗೀತಾಭಾರತಿ ಭಟ್ ಅವರು "ಸುಮಾರು ಸಂಬಂಧಗಳು ಕೈ ತಪ್ಪಿ ಹೋದ ಮೇಲೆ ಕೊನೆಗೆ ವಿದೇಶಿ ವರನ ಕಡೆಯಿಂದ ಆಕೆಗೆ ಪ್ರಪೋಸಲ್ ಬರುತ್ತದೆ. ಈ ವೇಳೆ ರವಿಕೆ ಹೊಲಿಯಲು ಆಕೆ ಕೊಡುತ್ತಾಳೆ. ಅಲ್ಲಿಂದ ಸಿನಿಮಾ ಆರಂಭಗೊಳ್ಳುತ್ತದೆ. ಮುಂದೆ ಅದು ಕೋರ್ಟ್ ಮೆಟ್ಟಿಲು ಹತ್ತುವವರೆಗೂ ಸಾಗುತ್ತದೆ. ಕೊನೆಯಲ್ಲಿ ಒಂದು ಉತ್ತಮ ಸಂದೇಶದೊಂದಿಗೆ ಸಿನಿಮಾ ಕೊನೆಯಾಗುತ್ತದೆ" ಎಂದು ಹೇಳಿಕೊಂಡಿದ್ದಾರೆ.
ಅಂದ ಹಾಗೇ ಮನೋ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಗೀತಾಭಾರತಿ ಅವರಿಗೆ 'ರವಿಕೆ ಪ್ರಸಂಗ' ಮೊದಲ ಸಿನಿಮಾವಲ್ಲ. ಅವರ ಸಿನಿಮಾ ಪಯಣ ಶುರುವಾಗಿದ್ದು 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಮೂಲಕ. 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ನಾಯಕಿಯ ವಯಸ್ಸಿನ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ 'ಲವ್ ಮಾಕ್ಟೈಲ್'ನಲ್ಲಿ ನಾಯಕ ಆದಿ ಗೆಳತಿ ರೀಮಾ ಪಾತ್ರದಲ್ಲಿ ಗೀತಾ ಬಣ್ಣ ಹಚ್ಚಿದ್ದರು.

ಆಶ್ಚರ್ಯಕರ ಸಂಗತಿಯೆಂದರೆ 'ಲವ್ ಮಾಕ್ಟೈಲ್' ಸಿನಿಮಾ ತೆಲುಗಿಗೆ ರಿಮೇಕ್ ಆಗಿದ್ದು ಅಲ್ಲಿಯೂ ರೀಮಾ ಪಾತ್ರದಲ್ಲಿ ಸ್ವತಃ ಗೀತಾಭಾರತಿ ಅವರು ಮೋಡಿ ಮಾಡಿದ್ದರು. ಮುಂದೆ 'ಮಂಕು ಬಾಯ್ ಫ್ಯಾಕ್ಸಿ ರಾಣಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ 'ರವಿಕೆ ಪ್ರಸಂಗ'ದ ಮೂಲಕ ಮತ್ತೊಮ್ಮೆ ಸಿನಿಮಾ ಪ್ರಿಯರನ್ನು ರಂಜಿಸಿರುವ ಗೀತಾಭಾರತಿ ಭಟ್ ಸಖತ್ ಖುಷಿಯಲ್ಲಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 8'ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಗೀತಾಭಾರತಿ ಭಟ್ ಸೂಪರ್ ಕ್ವೀನ್ ಆಗಿ ಮಿಂಚಿದ ಪ್ರತಿಭೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೂಪರ್ ಕ್ವೀನ್' ರಿಯಾಲಿಟಿ ಶೋವಿನಲ್ಲೂ ಈಕೆ ಭಾಗವಹಿಸಿದ್ದರು.


Click it and Unblock the Notifications











