ಮುಗ್ದತೆಯ ಪ್ರತಿರೂಪ ಗಿರಿಜಾ ಲೋಕೇಶ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರ..!
74 ವರ್ಷದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಹೊಟ್ಟೆ ಪಾಡಿಗಾಗಿ ಬಾಲ್ಯದಲ್ಲೇ ರಂಗಭೂಮಿಗೆ ಬಂದು ನಟಿಸಲು ಶುರು ಮಾಡಿದರು. ಆದರೆ ಇಂದು ಸತತವಾಗಿ ಆರು ದಶಕಗಳ ಕಾಲ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.74 ವರ್ಷವಾದರೂ ಕೂಡ ಆಕ್ಟೀವ್ ಆಗಿ ನಟಿಸಲು ಬಯಸುತ್ತಾರೆ. ಸುಮ್ಮನೆ ಕೂರುವುದಕ್ಕಿಂತ ಸದಾ ಆಕ್ಟೀವ್ ಆಗಿರುವುದು ಆರೋಗ್ಯಕ್ಕೂ ಒಳ್ಳೆಯದು, ಮನಸ್ಸಿಗೂ ಹಿತ ಎನ್ನುವ ಗಿರಿಜಾ ಲೋಕೇಶ್ ಅವರು ನಟನೆ ನನ್ನ ಜೀವಾಳ ಎಂದು ಈ ಹಿಂದೆಯೇ ಹೇಳಿದ್ದಾರೆ.
74ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ
ರಂಗಭೂಮಿಯಿಂದ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಇಂದಿಗೂ ನಟಿಸುತ್ತಿರುವ ಗಿರಿಜಾ ಲೋಕೇಶ್. ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದು, ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳದ ಗಿರಿಜಾ ಲೋಕೇಶ್ ಅವರು ಚಿಕ್ಕ ವಯಸ್ಸಿಗೆ ಕಷ್ಟದ ಜೀವನವನ್ನೂ ಎದುರಿಸಿದ್ದರು. ಕಷ್ಟ-ಸುಖ ಎರಡನ್ನೂ ಸವಿದ ಗಿರಿಜಮ್ಮನವರಿಗೆ ನಿನ್ನೆ [ಶುಕ್ರವಾರ] 74ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.ಈ ಹಿನ್ನೆಲೆ ಗಿರಿಜಮ್ಮಗೆ ಅವರ ಅನೇಕ ಕಲಾವಿದ ಸ್ನೇಹಿತರು, ಹಾಗೂ ಮಕ್ಕಳು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಸದ್ಯ ನಟಿ ಗಿರಿಜಾ ಲೋಕೇಶ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನೂರು ಜನ್ಮಕೂ ಧಾರಾವಾಹಿಯಲ್ಲಿ ನಾಯಕ ಚಿರು ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲ್ಯದಲ್ಲೇ ನಟನೆ ಆರಂಭ
ಬಾಲ್ಯದಿಂದಲೇ ನಟನೆಯನ್ನು ರೂಢಿಸಿಕೊಂಡ ನಟಿ ಗಿರಿಜಾ ಅವರು ಸುಭದ್ರೆ, ದ್ರೌಪದಿ ಪಾತ್ರಗಳಲ್ಲಿ ಅಭಿನಯಿಸಿ ಮಿಂಚಿದರು. ನಾಟಕಗಳಲ್ಲಿ ನಟಿಸುವಾಗ ಗಿರಿಜಾ ಲೋಕೇಶ್ ಅವರು ತುಂಬಾ ಕಷ್ಟಪಟ್ಟಿದ್ದಾರೆ. ಒಂದೊಂದು ತುತ್ತು ಅನ್ನಕ್ಕೂ ಪರದಾಡಿದ್ದಾರೆ. ಗಿರಿಜಾ ಅವರ ತಾಯಿ ಹಾಡು ಹೇಳುವುದನ್ನು, ಡ್ಯಾನ್ಸ್ ಮಾಡುವುದನ್ನು ಕಲಿಸಿದರಂತೆ. ಗಿರಿಜಾ ಅವರು ಕಲಿಯದಿದ್ದಾಗ ಹೊಡೆಯುತ್ತಿದ್ದರಂತೆ. ಅಂದು ಕಲಿತ ಪಾಠವೇ ನನ್ನನ್ನು ಇಂದು ಈ ಮಟ್ಟದಲ್ಲಿ ತಂದು ನಿಲ್ಲಿಸಿದೆ ಎನ್ನುತ್ತಾರೆ ಗಿರಿಜಾ ಅವರು. ಭರತನಾಟ್ಯದಲ್ಲಿ ಪರಿಣಿತಿ ಪಡೆದ ಗಿರಿಜಾ ಲೋಕೇಶ್ ಅವರು ನಟಿಸಿದ ಮೊದಲ ನಾಟಕ ಸಾಮ್ರಾಟ್ ಅಶೋಕ್ ಕುಮಾರ್'. ಈ ಸಂದರ್ಭದಲ್ಲೇ ನಟ ಲೋಕೇಶ್ ಅವರ ಪರಿಚಯವಾಯಿತು. ಹಲವು ನಾಟಕಗಳಲ್ಲಿ ಜೊತೆಯಾಗಿ ನಟಿಸುತ್ತಿದ್ದ ಲೋಕೇಶರ ಜೊತೆ ಪ್ರೇಮಾಂಕುರವಾಗಿ ನಂತರ ಈ ಜೋಡಿ ಮದುವೆಯಾಯಿತು.
ಸಿನಿಮಾ, ಧಾರಾವಾಹಿಗಳಲ್ಲಿ ಗಿರಿಜಾ ಅವರು ಬ್ಯುಸಿ
ಈ ಮೂಲಕ ಮದುವೆಯಾದ ರಾತ್ರಿಯೇ ಕಾಕನಕೋಟೆ' ನಾಟಕದಲ್ಲಿ ನಟಿಸಬೇಕಿತ್ತು. ಸುಬ್ಬಯ್ಯ ನಾಯ್ಡು ಕುಟುಂಬದ ಸೊಸೆಯಾದರು. ನಾಟಕಗಳಲ್ಲಿ ಮಾಡುತ್ತಾ ಬಳೀಕ ಸಿನಿಮಾ ಕ್ಷೇತ್ರಕ್ಕೂ ಈ ಜೋಡಿ ಎಂಟ್ರಿ ಕೊಟ್ಟಿತು. ಸಿನಿಮಾ ಕ್ಷೇತ್ರದಲ್ಲಿ ಲೋಕೇಶ್ ಅವರ ಸಾಧನೆಯ ಬಗ್ಗೆ ಮಾತನಾಡುವಂತಿಲ್ಲ. ಇಂದಿಗೂ ಜನ ಲೋಕೇಶ್ ಅವರನ್ನು ಮರೆತಿಲ್ಲ. ಗಿರಿಜಾ ಲೋಕೇಶ್ ಕನ್ನಡ ಚಿತ್ರರಂಗದ ಕಲಾತ್ಮಕ ನಟಿ ಮತ್ತು ರಂಗಭೂಮಿ ಕಲಾವಿದೆ. ಇವರು ನಟಿಸಿದ ಭುಜಂಗಯ್ಯನ ದಶಾವತಾರಗಳು' ಮತ್ತು ಸಿದ್ಲಿಂಗು' ಚಿತ್ರಗಳಿಗೆ ಕರ್ನಾಟಕ ರಾಜ್ಯದ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿವೆ.
ಆಕ್ಟೀವ್ ಆಗಿರುವ ನಟಿ ಗಿರಿಜಾ ಲೋಕೇಶ್
ಸದ್ಯ ನಟಿ ಗಿರಿಜಾ ಲೋಕೇಶ್ ಅವರು ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಕ್ರೇಜಿ ಕರ್ನಲ್, ಮುತ್ತಿನ ತೋರಣ ಇವರು ನಟಿಸಿದ ಪ್ರಮುಖ ಟೆಲಿ ಸೀರಿಯಲ್ ಗಳು. ಇಷ್ಟೇ ಅಲ್ಲದೇ, ಇದೀಗ ನೂರು ಜನ್ಮಕೂ ಎಂಬ ಧಾರಾವಾಹಿಯಲ್ಲಿ ಗಿರಿಜಾ ಲೋಕೇಶ್ ಅವರು ನಟಿಸುತ್ತಿದ್ದಾರೆ. 74 ವರ್ಷ ವಯಸ್ಸಾದರೂ ಎಲ್ಲಾ ಪಾತ್ರಕ್ಕೂ ಸೈ ಎನ್ನುವ ಗಿರಿಜಮ್ಮ ಅವರು ತುಂಬಾ ಆಕ್ಟೀವ್ ಆಗಿರುತ್ತಾರೆ. ಸೀರಿಯಲ್ ಅಷ್ಟೇ ಅಲ್ಲದೇ, ಅಡುಗೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಾರೆ.ಇಂಥಾ ಗಿರಿಜಾ ಲೋಕೇಶ್ ಅವರಿಗೆ ನಮ್ಮ ಕಡೆಯಿಂದ ಕೂಡ ಹುಟ್ಟುಹಬ್ಬದ ಶುಭಾಶಯಗಳು.


Click it and Unblock the Notifications











