ನಟಿ ಇಶಿತಾ ವರ್ಷಾ ಆಫ್ರಿಕಾ ಫೋಟೋಗಳು ವೈರಲ್ ಆಗಲು ಕಾರಣವೇನು?
ನಟಿ ಇಶಿತಾ ವರ್ಷ ಅವರು ಕಿರುತೆರೆಗೆ ಹೊಸಬರೇನು ಅಲ್ಲ ಆದರೆ, ಕೆಲವೇ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಬ್ರೇಕ್ ತೆಗೆದುಕೊಂಡವರು ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮಾಯಾ ಪಾತ್ರದ ಮೂಲಕ ಚಿರಪರಿಚಿತರಾಗಿದ್ದ ಇಶಿತಾ ವರ್ಷ ಅವರು ಮೊದಲು 'ಸರಸು' ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದರು. ಬಳಿಕ ನಟಿಸಿದ 'ಅಗ್ನಿಸಾಕ್ಷಿ' ಧಾರಾವಾಹಿಯ ಮೂಲಕ ವೀಕ್ಷಕರಿಗೆ ಚಿರಪರಿಚಿತರಾದರು.

ಡ್ಯಾನ್ಸ್ ಶೋ ಒಂದರಲ್ಲಿ ಕಾಣಿಸಿಕೊಂಡ ಇಶಿತಾ ಅವರಿಗೆ ಮುರುಘನ್ ಕೊರಿಯೋಗ್ರಫಿ ಮಾಡುತ್ತಿದ್ದರು. ಡ್ಯಾನ್ಸ್ ಕಲಿಸಿಕೊಟ್ಟ ಹುಡುಗನಿಗೆ ಇಶಿತಾ ಅವರು ತಮ್ಮ ಹೃದಯವನ್ನೇ ಗುರು ಕಾಣಿಕೆಯಾಗಿ ನೀಡಿ ಆರು ವರ್ಷಗಳ ಕಾಲ ಪ್ರೀತಿಸಿ, ಏಳನೇ ವರ್ಷ ಸಪ್ತಪದಿ ತುಳಿದರು.
2019ರಲ್ಲಿ ಇಶಿತಾ ಮತ್ತು ಮುರುಘನ್ ವಿವಾಹವಾದರು. ಬಳಿಕ ಕಿರುತೆರೆಯಿಂದ ಕೊಂಚ ದೂರ ಉಳಿದರೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಜೊತೆಗೆ ಸೋಶಿಯಲ್ ಮೀಡಿಯಾದಿಂದ ಕೊಂಚವೂ ದೂರ ಸರಿಯಲಿಲ್ಲ.
ಇಶಿತಾ ಬಣ್ಣದ ಪಯಣ
ನಟಿ ಇಶಿತಾ ವರ್ಷ ಅವರು ಮದುವೆಗೂ ಮುನ್ನ 'ಕೃಷ್ಣ ರುಕ್ಮಿಣಿ', 'ತಂಗಾಳಿ', 'ಮನಸು ಮಮತಾ' ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದರು. ಅಲ್ಲದೇ, ಪರಭಾಷೆಯಲ್ಲೂ ಕಾಣಿಸಿಕೊಂಡ ಇವರು, 'ಕಲ್ಯಾಣವೀಡು', 'ಕುಲದೈವಂ' ಎಂಬ ಧಾರಾವಾಹಿಗಳಿಗೂ ಬಣ್ಣ ಹಚ್ಚಿದರು. ಮದುವೆಯಾದ ಬಳಿ 'ರಾಜಾ-ರಾಣಿ ಸೀಸನ್ 1' ರಲ್ಲಿ ಪತಿ ಮುರುಘನ್ ಜೊತೆಗೆ ಇಶಿತಾ ಅವರು ಭಾಗವಹಿಸಿದರು. ಇದರಲ್ಲಿ ರನ್ನರಪ್ ಆಗಿ ಹೊರ ಹೊಮ್ಮಿ, 'ಕಿರಿಕ್ ವಿಥ್ ಕುಕ್ಕು', 'ಡ್ಯಾನ್ಸಿಂಗ್ ಚಾಂಪಿಯನ್' ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡರು. ಅಲ್ಲದೇ, ಇಶಿತಾ ವರ್ಷ ಅವರು 'ಸ್ವಾರ್ಥರತ್ನ' ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ತೆಲುಗಿನ ಅನ್ಯುಡು ಎಂಬ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಇದೀಗ 'ಅಮೃತಧಾರೆ' ಧಾರಾವಾಹಿಯಲ್ಲಿ ಮಹಿಮಾ ಪಾತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಆಫ್ರಿಕಾದಲ್ಲಿ ಕಂಡ ಜೋಡಿಗಳು
ಮದುವೆಯಾದ ಬಳಿಕ ಪತಿ ಮುರುಘನ್ ಜೊತೆಗೆ ಹೆಚ್ಚಾಗಿ ಪ್ರವಾಸ ಮಾಡುತ್ತಿದ್ದ ಇಶಿತಾ ಅವರು ಜಂಗಲ್ ಸಫಾರಿ, ವೈಲ್ಡ್ ಲೈಫ್ ಫೋಟೋಗ್ರಫಿ ಎಂದು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದರು. ಆಫ್ರಿಕಾದಲ್ಲಿ ಬುಡಕಟ್ಟು ಜನಾಂಗದವರ ಜೊತೆಗೆ ಬೆರೆತ ಇಶಿತಾ ಸಾಕಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಮದುವೆಯಾದ ಬಳಿಕ ಬೋಲ್ಡ್ ಆಗಿರುವ ನಟಿ ಇಶಿತಾ ಅವರು ಮಾಡ್ರನ್ ಲುಕ್ ನಲ್ಲಿ ಆಗಾಗ ಫೋಟೋಶೂಟ್ ಮಾಡಿಸುತ್ತಲ್ಲೇ ಇರುತ್ತಾರೆ. ಕಳೆದ ಬಾರಿ ಆಫ್ರಿಕಾದ ಕೀನ್ಯಾಗೆ ತೆರಳಿದ ನಟಿ ಇಶಿತಾ ಸಾಕಷ್ಟು ಫೋಟೋಗಳಿಗೆ ಪೋಸ್ ಕೊಟ್ಟಿದ್ದರು.
ಮಸಾಯ್ ಮಾರಾದಲ್ಲಿ ಫೋಟೋಗಳು
ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಪ್ರವಾಸದ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಲೇ ಇದ್ದರು. ಇದೀಗ ನಟಿ ಕೀನ್ಯಾದಲ್ಲಿನ ಮಸಾಯ್ ಮಾರಾ ನ್ಯಾಶನಲ್ ಪಾರ್ಕ್‌ನಲ್ಲಿ ಮಸಾಯ್ ಮಾರಾ ಜನಾಂದವರ ಜೊತೆಗೆ ತೆಗೆಸಿಕೊಂಡ ಫೋಟೋಗಳು ವೈರಲ್ ಆಗುತ್ತಿವೆ. ಆಫ್ರಿಕಾದಲ್ಲಿ ವಿವಿಧ ಜನಾಂಗದವರು ಇದ್ದಾರೆ. ಮಸಾಯ್ ಜನಾಂಗ ಕೆಂಪು ಬಟ್ಟೆಯನ್ನು ಸುತ್ತಿಕೊಂಡು ಬಗೆ ಬಗೆಯ ಸರಗಳನ್ನು ಕುತ್ತಿಗೆಗೆ ಧರಿಸಿರುತ್ತಾರೆ. ಅಲ್ಲದೇ ಕೈಯ್ಲಲಿ ಯಾವಾಗಲೂ ಭೇಟೆಯಾಡಲು ಅಗತ್ಯ ಎಂಬಂತೆ ಚೂಪಾದ ಉದ್ದದ ಶಸ್ತ್ರಗಳನ್ನು ಹಿಡಿದಿರುತ್ತಾರೆ.
ಲಂಗ-ದಾವಣಿಯಲ್ಲಿ ಇಶಿತಾ
ಅಲ್ಲಿನ ಜನರ ಜೊತೆಗೆ ನಟಿ ಇಶಿತಾ ಅವರು ನಮ್ಮ ಕರ್ನಾಟಕದ ಸಂಸ್ಕೃತಿಯಂತೆ ಲಂಗ-ದಾವಣಿಯನ್ನು ಧರಿಸಿದ್ದು, ಎರಡೂ ಸಂಪ್ರದಾಯವನ್ನು ತೋರಿಸುವಂತೆ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಯಾವ ಮಾಡೆಲ್‌ಗಳು ಕೂಡ ತೆಗೆಸಿಕೊಳ್ಳದಂತಹ ರೀತಿಯಲ್ಲಿ ಪೋಸ್ ಕೊಟ್ಟಿದ್ದು, ಇಶಿತಾ ಅವರ ಈ ಫೋಟೋಗಳು ಎಲ್ಲರನ್ನು ಸೆಳೆಯುತ್ತಿದೆ. ಸದ್ಯ ಈ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ.


Click it and Unblock the Notifications











