ಕಿರುತೆರೆಯ ಸ್ಟೈಲಿಶ್ ವಿಲನ್ ಝಾನ್ಸಿ ಕಾವೇರಪ್ಪ ಜೀವನಕಥೆ!
'ಮನೆಯೊಂದು ಮೂರು ಬಾಗಿಲು' ಧಾರಾವಾಹಿ ಪ್ರಸಾರವಾಗಿ ಸುಮಾರು ವರ್ಷಗಳೇ ಕಳೆದು ಹೋಗಿದೆ. ಆದರೂ ಈ ಧಾರಾವಾಹಿಯನ್ನು ಇನ್ನೂ ಯಾರೂ ಮರೆತಿಲ್ಲ. ಈ ಧಾರಾವಾಹಿಯಲ್ಲಿ ಬಂದ ಪಾತ್ರಗಳನ್ನು ಜನ ಇಂದಿಗೂ ನೆನಪಿಟ್ಟುಕೊಂಡಿದ್ದಾರೆ.
ಮನೆಯೊಂದು ಮೂರು ಬಾಗಿಲು ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರ ಮಾಡಿದವರು ಇಂದಿಗೂ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರೇ ಸ್ಟೈಲಿಶ್ ವಿಲನ್ ಝಾನ್ಸಿ ಕಾವೇರಪ್ಪ ಅಲಿಯಾಸ್ ಝಾನ್ಸಿ ಸುಬ್ಬಯ್ಯ. ಈಗ ಅವರು ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿಯಲು ಮುಂದೆ ಓದಿ...
ಝಾನ್ಸಿ ಕಾವೇರಪ್ಪ ಅವರು ಸಿನಿಮಾ ಕ್ಷೇತ್ರದಿಂದ ಕಿರುತೆರೆಗೆ ಬಂದವರು. ಕಿರುತೆರೆಯಲ್ಲಿ ದಶಕಗಳಿಂದ ಮಿಂಚಿದ ಸ್ಟೈಲಿಶ್ ವಿಲನ್. ಮನೆಯೊಂದು ಮೂರು ಬಾಗಿಲು ಧಾರಾವಾಹಿಯಲ್ಲಿ ಸುಪ್ರಿಯಾ ಪಾತ್ರವನ್ನು ನಿರ್ವಹಿಸಿ ಜನರ ಮೆಚ್ಚುಗೆ ಪಡೆದವರು.

ಕೆಲಸ ಬಿಟ್ಟು ಮಾಡೆಲಿಂಗ್ ಗೆ ಬಂದ ನಟಿ!
ಝಾನ್ಸಿ ಕಾವೇರಪ್ಪ ಅವರು, ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 1996 ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೂ ಎಂಟ್ರಿಕೊಟ್ಟರು. ಮಾಡೆಲಿಂಗ್‌ನಲ್ಲಿ ಇರುವಾಗಲೇ ಕೆಲ ಜಾಹೀರಾತುಗಳಲ್ಲಿ ನಟಿಸುತ್ತಿದ್ದರು. ಹೀಗೆ ಆಡಿಶನ್ ಕೊಡುತ್ತಿರುವಾಗ ' ಪ್ರೀತಿ ಮಾಡೋ ಹುಡುಗರಿಗೆಲ್ಲಾ' ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆದರೆ, ಝಾನ್ಸಿ ನಟಿಸುವುದು ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಆದರೂ ಬಲವಂತವಾಗಿ ತಾಯಿಯನ್ನು ಕರೆದುಕೊಂಡು ಶೂಟಿಂಗ್ ಸೆಟ್ ಹೋಗುತ್ತಿದ್ದರಂತೆ.

ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡಿದ ಝಾನ್ಸಿ!
ತೆಲುಗಿನ ಆನಂದಂ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಯ್ತು. ಆಗ ರಾಜೇಶ್ ಅವರ ಜೊತೆಗೆ ಝಾನ್ಸಿ ಅವರು ನಟಿಸಿದ್ದರು. ಬಳಿಕ ಸಿನಿಮಾಗಳಲ್ಲಿ ನಟನೆಗಿಂತಲೂ ಹೆಚ್ಚು ಡ್ಯಾನ್ಸ್ ಮಾಡುತ್ತಿದ್ದ ಝಾನ್ಸಿ ಧಾರಾವಾಹಿಗಳಿಗೆ ಎಂಟ್ರಿ ಕೊಟ್ಟರು. ಕ್ಷಣ ಕ್ಷಣ ಚಿತ್ರದಲ್ಲಿ ಡ್ಯಾನ್ಸ್ ಮಾಡಿದ್ದ ಸೀನ್ ತೆಗೆದು ಹಾಕಿದರಂತೆ. ಇದರಿಂದ ಝಾನ್ಸಿ ಅವರಿಗೆ ತುಂಬಾ ಬೇಸರವಾಯ್ತಂತೆ. ಕೊಡಗಿನವರಾದ ಝಾನ್ಸಿ ಅವರಿಗೆ ಮೊದ ಮೊದಲು ಭಾಷೆಯ ಸಮಸ್ಯೆ ಎದುರಿಸಿದ್ದರಂತೆ. ಈ ಕಾರಣಕ್ಕೆ ಅದೆಷ್ಟೋ ಸಿನಿಮಾಗಳಲ್ಲಿ ನಾಯಕಿ ಪಾತ್ರಕ್ಕೆ ಆಯ್ಕೆಯಾದರೂ ಕೊನೆ ಕ್ಷಣದಲ್ಲಿ ಬದಲಾಗಿಸಲಾಗಿತ್ತಂತೆ. ಈ ಎಲ್ಲಾ ಸಮಸ್ಯೆಗಳಿಂದ ಝಾನ್ಸಿ ಅವರು ಸಿನಿಮಾ ಬಿಟ್ಟು ಕಿರುತೆರೆಗೆ ಬಂದಿದ್ದಾರೆ.

ಧಾರಾವಾಹಿಗಳಲ್ಲಿ ಮಿಂಚಿದ ಕಾವೇರಪ್ಪ!
ಕನ್ನಡ ಮಾತ್ರವಲ್ಲದೇ, ತೆಲುಗಿನಲ್ಲೂ ನಟಿಸಿದ ಝಾನ್ಸಿ ಅವರು ಸ್ಟೈಲಿಶ್ ವಿಲನ್ ಎಂದೇ ಖ್ಯಾತಿಯನ್ನು ಪಡೆದಿದ್ದಾರೆ. ಝಾನ್ಸಿ ಅವರು ಧರಿಸುತ್ತಿದ್ದ ಸೀರೆ, ಚಪ್ಪಲಿ, ಬಳೆ, ಓಲೆ, ಸರ, ಬಿಂದಿ ಎಲ್ಲವೂ ಟ್ರೆಂಡ್ ಆದವು. ಧಾರಾವಾಹಿಯಲ್ಲಿ ಸ್ಲೀವ್ ಲೆಸ್ ಬ್ಲೌಸ್ ತೊಟ್ಟವರು ಝಾನ್ಸಿ ಮೊದಲಿಗರು. ಸುಪ್ರಿಯಾ ಬಿಂದಿ, ಬಳೆ, ಸೀರೆ ಎಂದೇ ಮಾರ್ಕೆಟ್ ನಲ್ಲಿ ಖ್ಯಾತಿ ಪಡೆಯಿತು. ಮಾವಯ್ಯನ ಮೋಡಿ, ಕ್ಷಣ ಕ್ಷಣ, ಕನಕ, ಕಲ್ಯಾಣಿ, ಮನೆಯೊಂದು ಮೂರುಬಾಗಿಲು, ಕನ್ಯಾದಾನ, ಕನ್ನಡಿ, ಸೂರ್ಯವಂಶಂ, ಪ್ರೀತಿ ಇಲ್ಲದ ಮೇಲೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಲ್ಲಾ ಧಾರಾವಾಹಿಗಳಲ್ಲೂ ಝಾನ್ಸಿ ಅವರು ವಿಲನ್ ಪಾತ್ರಗಳಲ್ಲೇ ಮಿಂಚಿದ್ದಾರೆ. ಇಂದಿಗೂ ಝಾನ್ಸಿ ಅವರನ್ನು ಮನೆಯೊಂದು ಮೂರು ಬಾಗಿಲು ಸೀರಿಯಲ್‌ನ ಸುಪ್ರಿಯಾ ಪಾತ್ರದಿಂದಲೇ ಜನ ಗುರುತಿಸುತ್ತಾರಂತೆ.

ಕಿರುತೆರೆಗೆ ರೀ ಎಂಟ್ರಿ!
ಗರ್ಭಿಣಿಯಾದ ಕಾರಣ ನಟನೆಯಿಂದ ಬ್ರೇಕ್ ಪಡೆದ ಝಾನ್ಸಿ ಅವರು ಮತ್ತೆ ಹತ್ತು ವರ್ಷಗಳ ಬಳಿಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಇಬ್ಬರು ಮಕ್ಕಳ ತಾಯಿಯಾಗಿದ್ದು, 'ಸೀತಾ ವಲ್ಲಭ' ಧಾರಾವಾಹಿಯ ಕಥೆಯನ್ನು ಇಷ್ಟಪಟ್ಟ ಝಾನ್ಸಿ ಅವರು ಕಿರುತೆರೆಗೆ ಮರಳಿದರು. ಇನ್ನು ಒಂದಾದ ಮೇಲೆ ಒಂದು ಧಾರಾವಾಹಿಗಳಲ್ಲಿ ನಟಿಸುತ್ತಿರುವ ಝಾನ್ಸಿ ಅವರು ಸದ್ಯ 'ರಾಮಾಚಾರಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾವನ್ನು ಹೆಚ್ಚು ಬಳಸದ ಝಾನ್ಸಿ ಅವರಿಗೆ ಫ್ಯಾನ್ ಪೇಜ್ ಗಳು ಸಾಕಷ್ಟಿವೆ. ಇಂದಿಗೂ ಸ್ಟೈಲಿಶ್ ವಿಲನ್ ಆಗಿ ಝಾನ್ಸಿ ಕಾವೇರಪ್ಪ ಅವರು ಮಿಂಚುತ್ತಿದ್ದಾರೆ.


Click it and Unblock the Notifications











