ಮತ್ತೊಂದು ಧಾರಾವಾಹಿಯಲ್ಲಿ ನಾಯಕಿಯಾಗಿ ಎಂಟ್ರಿ ಕೊಡಲಿರುವ ನಟಿ ಕೌಸ್ತುಭಾ ಮಣಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ 'ಅವನು ಮತ್ತೆ ಶ್ರಾವಣಿ' ಧಾರಾವಾಹಿ ಶುರುವಾಗಿದೆ. ಅದಾಗಲೇ ಈಗ ಮತ್ತೊಂದು ಧಾರಾವಾಹಿಯ ಪ್ರೋಮೋ ಪ್ರಸಾರ ಮಾಡಿದೆ. ಹೊಸ ಸೀರಿಯಲ್ ನ ಪ್ರೋಮೋವನ್ನು ಸ್ಟಾರ್ ಸುವರ್ಣ ವಾಹಿನಿಯು ಪ್ರಸಾರ ಮಾಡಿದ್ದು, ಅತಿ ಶೀಘ್ರದಲ್ಲಿ ಧಾರಾವಾಹಿ ಮೂಡಿಬರಲಿದೆ ಎಂದು ತಿಳಿಸಿದೆ.
ಪ್ರೋಮೋ ನೋಡಿದ ವೀಕ್ಷಕರೂ ಕೂಡ ಖುಷಿಪಟ್ಟಿದ್ದಾರೆ. ಧಾರಾವಾಹಿಯ ನಾಯಕ ಮತ್ತು ನಾಯಕಿಯ ಪ್ರೀತಿಕಂಡು ಪ್ರೇಕ್ಷಕರು ಸಂತಸ ಪಟ್ಟಿದ್ದಾರೆ. ಈ ಹೊಸ ಧಾರಾವಾಹಿಯಲ್ಲಿ ಬೆಂಕಿ ಜೊತೆಗೆ ಬಿರುಗಾಳಿಯ ಪ್ರೀತಿ ಕಥೆ ಗೌರಿ ಶಂಕರ ನಿಮ್ಮ ಮುಂದೆ ಪ್ರಸಾರವಾಗಲಿದೆ ಎಂದು ಸ್ಟಾರ್ ಸುವರ್ಣ ವಾಹಿನಿ ಹೇಳಿದೆ.

ಇನ್ನು ಈ ಧಾರಾವಾಹಿಯಲ್ಲಿ ಹೆಣ್ಣು ಯಾವತ್ತಿದ್ದರೂ ಗಂಡಿನ ಹಿಂದೆ ಬರಬೇಕು. ಯಾವತ್ತೂ ಗಂಡಸು, ಹೆಂಗಸರ ಹಿಂದೆ ಹೋಗಬಾರದು ಎಂದು ರೌಡಿ ರೀತಿ ಇರುವ ನಾಯಕ ಮಾರ್ಕೆಟ್‌ನಲ್ಲಿ ನಾಯಕಿಯನ್ನು ನೋಡಿ ಫಿದಾ ಆಗುತ್ತಾನೆ.
ಮತ್ತೊಂದು ಪ್ರೇಮ ಕಥೆ
ನಾಯಕಿಯ ಹಿಂದೆ ಸುತ್ತಾಡಿ ಪ್ರಪೋಸ್ ಕೂಡ ಮಾಡುತ್ತಾನೆ. ಆದರೆ ನಾಯಕಿ ನೀವ್ಯಾರೂ ಅಂತಾನೇ ಗೊತ್ತಿಲ್ಲ. ನಾನು ಹೇಗೆ ನಿಮ್ಮನ್ನು ಒಪ್ಪಿಕೊಳ್ಳಲಿ ಎಂದು ಪ್ರಶ್ನೆ ಮಾಡುತ್ತಾಳೆ. ನಾಯಕ ಕೊಟ್ಟ ಹೂಗುಚ್ಛವನ್ನು ಬಿಸಾಡಿ ಹೋಗುತ್ತಾಳೆ. ಆದರೆ, ನಾಯಕ ಸ್ವಲ್ಪ ದಿನ ನಿನಗೆ ನಾನ್ಯಾರು? ಅಂತಲೂ ಗೊತ್ತಾಗುತ್ತೆ. ನೀನು ನನ್ನನ್ನು ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತೀಯಾ. ಏನೇ ಆಗಲಿ ನೀನು ನನ್ನವಳೇ ಎಂದು ಹೇಳುತ್ತಾನೆ.
ನಾಯಕ-ನಾಯಕಿಯ ಪಾತ್ರ
ಈ ಧಾರಾವಾಹಿ ಯಾವಾಗ ಪ್ರಸಾರವಾಗುತ್ತೋ ಗೊತ್ತಿಲ್ಲ. ಆದರೆ, ನಾಯಕನ ಪಾತ್ರದಲ್ಲಿ ನಟ ಯಶವಂತ್ ಬೆಟ್ಟಸ್ವಾಮಿ ಕಾಣಿಸಿಕೊಂಡಿದ್ದಾರೆ. ಬಹಳ ಸಮಯದ ಬಳಿಕ ಮತ್ತೆ ಕಿರುತೆರೆಯಲ್ಲಿ ಯಶವಂತ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಟ ಯಶವಂತ್ ಬೆಟ್ಟಸ್ವಾಮಿ ಅವರು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದು, ನಟನಾಗುವ ಆಸೆಯಿಂದ ಕಿರುತೆರೆಗೆ ಎಂಟ್ರಿಕೊಟ್ಟರು. ಅರಮನೆ ಗಿಳಿ, ಸುಜಾತ ಹಾಗೂ ಹೂ ಮಳೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗು ಕಿರುತೆರೆಗೂ ಎಂಟ್ರಿಕೊಟ್ಟಿದ್ದು, ಅಲ್ಲೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೆ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ.

ನಾಯಕಿ ಗೌರಿ ಯಾರು ಗೊತ್ತಾ..?
ನಾಯಕಿ ಪಾತ್ರದಲ್ಲಿ ನಟಿ ಕೌಸ್ತುಭಮಣಿ ಇದ್ದಾರೆ. 'ನನ್ನರಸಿ ರಾಧೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ಕೌಸ್ತುಭ ಮಣಿ ಹೆಚ್ಚು ಕಾಣಿಸಿಕೊಂಡಿದ್ದು, ಟ್ರೆಡಿಷನಲ್ ಉಡುಗೆಯಲ್ಲೇ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಕಲರ್ಸ್ ಕನ್ನಡದ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ಗೆದ್ದಿರುವವರು. ಎರಡು ವರ್ಷ ಪ್ರಸಾರವಾದ ಈ ಧಾರಾವಾಹಿಯಲ್ಲಿ ಕೌಸ್ತುಭ ಮಣಿ ಮುದ್ದು ಮುಖವನ್ನು ನೋಡುವುದಕ್ಕೆ ಜನ ಇಷ್ಟಪಡುತ್ತಿದ್ದರು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಯ ಸಂಚಿಕೆ ಪ್ರಸಾರವಾಗಿತ್ತು.
ವೀಕ್ಷಕರ ಆಸೆ ಈಡೇರಿಸಿದ ನಟಿ
ಇದಾದ ಬಳಿಕ ತೆಲುಗು ಕಿರುತೆರೆಗೆ ಕೌಸ್ತುಭ ಮಣಿ ಪಾದಾರ್ಪಣೆ ಮಾಡಿದರು. ತೆಲುಗಿನ 'ಕೋಡಲು ಮೀಕು ಜೋಹರ್ಲು' ಎಂಬ ಧಾರಾವಾಹಿಯಲ್ಲಿ ನಟಿಸಿದರು. ಕೌಸ್ತುಭ ಮಣಿ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದು, 'ರಾಮಾಚಾರಿ 2.0' ಚಿತ್ರದಲ್ಲಿ ಕೌಸ್ತುಭ ಮಣಿ ನಾಯಕಿಯಾಗಿ ನಟಿಸಿದ್ದರು. ಇನ್ನು ಕೌಸ್ತುಭಮಣಿ ನಟನೆಗೆ ಫಿದಾ ಆಗದ ವೀಕ್ಷಕರಿಲ್ಲ. ತೆಲುಗಿಗೆ ಕೌಸ್ತುಭ ಹಾರಿದ ಮೇಲೆ ಮತ್ತೆ ಕನ್ನಡ ಕಿರುತೆರೆಗೆ ಮರಳಿ ಬರಲಿ ಎಂಬ ವೀಕ್ಷಕರ ಆಸೆಯನ್ನು 'ಗೌರಿಶಂಕರ' ಧಾರಾವಾಹಿಯ ಮೂಲಕ ಈಡೇರಿಸುತ್ತಿದ್ದಾರೆ.


Click it and Unblock the Notifications











