"ನನ್ನ ಜಾಗಕ್ಕೆ ಹೊಸ ಗೌರಿ ಬರುತ್ತಿದ್ದಾಳೆ" ಎಂದು 'ಗೌರಿಶಂಕರ' ಧಾರಾವಾಹಿಯಿಂದ ಹೊರಬಂದ ಕೌಸ್ತುಭಮಣಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಗೌರಿಶಂಕರ'. ವಿಭಿನ್ನ ರೀತಿಯ ಕಥಾ ಹಂದರವನ್ನೊಳಗೊಂಡ ಆ ಧಾರಾವಾಹಿಯು ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇತ್ತೀಚೆಗಷ್ಟೇ ನಾಯಕಿ ಗೌರಿ ಹಾಗೂ ನಾಯಕ ಶಂಕರನ ಅದ್ಧೂರಿ ವಿವಾಹ ನೆರವೇರಿತ್ತು. ಇದೀಗ 'ಗೌರಿಶಂಕರ' ಧಾರಾವಾಹಿ ತಂಡದಿಂದ ಶಾಕಿಂಗ್ ಸಂಗತಿಯೊಂದು ಹೊರಬಿದ್ದಿದೆ. ಅರೇ! ಅದೇನು ಅಂತ ಅಂದುಕೊಳ್ತಿದ್ದೀರಾ? ಇಲ್ಲಿ ಕೇಳಿ. 'ಗೌರಿಶಂಕರ' ಧಾರಾವಾಹಿಯಲ್ಲಿ ನಾಯಕಿಯ ಬದಲಾವಣೆಯಾಗಿದೆ.
ಹೌದು, ನಾಯಕಿ ಗೌರಿಯಾಗಿ ಅಭಿನಯಿಸುತ್ತಿರುವ ಕೌಸ್ತುಭಮಣಿ ಅವರು ಇದೀಗ ಧಾರಾವಾಹಿಯಿಂದ ಹೊರಬಂದಿದ್ದಾರೆ. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ಕೌಸ್ತುಭಮಣಿ ತದ ನಂತರ ಕಿರುತೆರೆಯತ್ತ ಮುಖ ಮಾಡಿದ್ದು ಗೌರಿಯಾಗಿ. ಧಾರಾವಾಹಿ ಆರಂಭವಾಗಿ ಕೆಲವು ಸಂಚಿಕೆಗಳಷ್ಟೇ ಆಗಿದ್ದು, ಈ ಸಮಯದಲ್ಲಿ ಕೌಸ್ತಭಮಣಿ ಅವರು ಗೌರಿ ಪಾತ್ರಕ್ಕೆ ವಿದಾಯ ಹೇಳಿದ್ದು ಕಿರುತೆರೆ ವೀಕ್ಷಕರಿಗೆ ಬೇಸರ ತಂದಿದೆ.

ತಾವು ಧಾರಾವಾಹಿಯಿಂದ ಹೊರಬರುತ್ತಿರುವ ವಿಚಾರವನ್ನು ಸ್ವತಃ ಕೌಸ್ತಭಮಣಿ ಅವರೇ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಹಾಯ್., ನಾನು ನಿಮ್ಮ ಪ್ರೀತಿಯ ಗೌರಿ. ಕೆಲವೊಂದು ವೈಯಕ್ತಿಕ ಕಾರಣಗಳಿಂದ ಇನ್ನು ಮುಂದೆ ನಾನು ಗೌರಿಶಂಕರ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಆಗುತ್ತಿಲ್ಲ. ನನ್ನ ಜಾಗಕ್ಕೆ ಹೊಸ ಗೌರಿ ಬರುತ್ತಿದ್ದಾಳೆ. ನನಗೆ ಕೊಟ್ಟಷ್ಟೇ ಪ್ರೀತಿ ಅವಳಿಗೂ ಕೊಟ್ಟು ಸಪೋರ್ಟ್ ಮಾಡಿ, ಹರಸಿ, ಹಾರೈಸಿ. ಥ್ಯಾಂಕ್ಯೂ" ಎಂದು ಆಕೆ ಹೇಳಿಕೊಂಡಿದ್ದಾರೆ.
ಮೊದಲ ಧಾರಾವಾಹಿ 'ನನ್ನರಸಿ ರಾಧೆ'ಯಲ್ಲಿ ನಾಯಕಿಯಾಗಿ ನಟಿಸುವ ಸುವರ್ಣವಕಾಶ ಪಡೆದುಕೊಂಡಿದ್ದ ಕೌಸ್ತಭಮಣಿ ಇಂಚರಾ ಪಾತ್ರದಲ್ಲಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಮುಂದೆ ತೆಲುಗಿನ 'ಕೋಡಲು ಮೀಕು ಜೋಹರ್ಲು'ವಿನಲ್ಲಿ ನಾಯಕಿಯಾಗಿ ಕಮಾಲ್ ಮಾಡಿದ ಈಕೆ ತದ ನಂತರ ಹಾರಿದ್ದು ಹಿರಿತೆರೆಯುತ್ತ. ತೇಜ್ ನಿರ್ದೇಶಿಸಿ, ನಟಿಸಿರುವ 'ರಾಮಚಾರಿ 2.0'ವಿನಲ್ಲಿ ನಾಯಕಿಯಾಗಿ ಈಕೆ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಅರ್ಜುನ್ ಜನ್ಯ ನಿರ್ದೇಶನದ '45' ಎನ್ನುವ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸುವ ಅವಕಾಶನ್ನು ಕೂಡಾ ಆಕೆ ಪಡೆದುಕೊಂಡಿದ್ದರು. '45' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶದೊಂದಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅದೃಷ್ಟ ಪಡೆದ ಬೆಡಗಿ ಈಕೆ.

ಇನ್ನು ಸಿನಿಮಾದ ನಂತರ ಮತ್ತೆ 'ಗೌರಿಶಂಕರ' ಧಾರಾವಾಹಿಯಲ್ಲಿ ನಾಯಕಿಯಾಗಿ ಆಯ್ಕೆಯಾದಾಗ ಆ ಖುಷಿಯ ವಿಚಾರವನ್ನು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಕೌಸ್ತುಭಮಣಿ. ಧಾರಾವಾಹಿಯ ಪ್ರೋಮೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಈಕೆ 'ಇದು ಮುಂದಿನ ಅಧ್ಯಾಯದ ಸಮಯ.. ಗೌರಿಶಂಕರ.. ನಿಮ್ಮ ಪ್ರೀತಿ ಆಶೀರ್ವಾದ ಹೀಗೆ ನನ್ನ ಮೇಲಿರಲಿ" ಎಂದು ಬರೆದುಕೊಂಡಿದ್ದರು. ಜೊತೆಗೆ ಗೌರಿಯಾಗಿ ಕಿರುತೆರೆಗೆ ಕಾಲಿಟ್ಟು ತಮ್ಮ ಸಹಜ ನಟನೆಯಿಂದ ಕಿರುತೆರೆಯಲ್ಲಿ ಮೋಡಿ ಮಾಡಿದ ಕೌಸ್ತುಭಮಣಿ ಧಾರಾವಾಹಿಯಿಂದ, ಪಾತ್ರದಿಂದ ಹೊರಬಂದಿದ್ದು ಕಿರುತೆರೆ ವೀಕ್ಷಕರಿಗೆ ಬೇಸರ ತಂದಿದೆ. ಸದ್ಯ ಬ್ರೇಕ್ ಪಡೆದಿರುವ ಈಕೆ ಮತ್ತೆ ಕಿರುತೆರೆಗೆ ಮರಳುತ್ತಾರಾ? ಎಂದು ಮುಂದಿನ ದಿನದಲ್ಲಿ ತಿಳಿಯಬೇಕಾಗಿದೆ.


Click it and Unblock the Notifications











