'ಗೌರಿಶಂಕರ'ನ ಜೊತೆ ಮತ್ತೆ ಕಿರುತೆರೆಗೆ ಮರಳಿದ ಕಿರುತೆರೆ ನಟಿ ಕಾವ್ಯಾ ರಮೇಶ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಗೌರಿಶಂಕರ'. ಈ ಸೀರಿಯಲ್‌ನಲ್ಲಿ ಗ್ರೀಷ್ಮಾ ಪಾತ್ರದಲ್ಲಿ ಕಾವ್ಯಾ ರಮೇಶ್ ನಟಿಸುತ್ತಿದ್ದಾರೆ. ಚಿಕ್ಕದೊಂದು ಗ್ಯಾಪ್‌ನ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೀತಾವಲ್ಲಭ' ಧಾರಾವಾಹಿಯಲ್ಲಿ ನಾಯಕ ಆರ್ಯನ ತಂಗಿ ಅದಿತಿಯಾಗಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದ ಕಾವ್ಯಾ ರಮೇಶ್ ತದ ನಂತರ ಕಾಣಿಸಿಕೊಂಡಿದ್ದು ಸಿನಿಮಾಗಳಲ್ಲಿ.
'ಚೌಕಾಬಾರ' ಸಿನಿಮಾದ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಹಾರಿದ ಕಾವ್ಯಾ ರಮೇಶ್ ಅದರಲ್ಲಿ ಎರಡನೇ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಮುಂದೆ 'ಗುಳ್ಟು' ಸಿನಿಮಾ ಖ್ಯಾತಿಯ ನವೀನ್ ಶಂಕರ್ ನಟನೆಯ 'ಮೂಲತಃ ನಮ್ಮವರೇ' ಸಿನಿಮಾದಲ್ಲಿಯೂ ಎರಡನೇ ನಾಯಕಿಯಾಗಿ ಕಾಣಿಸಿಕೊಂಡ ಕಾವ್ಯಾ ರಮೇಶ್ 'ನೋಟದ ಪುಟಗಳು' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

'ಶಭಾಷ್ ಬಡ್ಡಿಮಗ್ನೇ' ಸಿನಿಮಾದಲ್ಲಿಯೂ ನಟಿಸುವ ಅವಕಾಶ ಪಡೆದುಕೊಂಡಿದ್ದ ಕಾವ್ಯಾ ರಮೇಶ್ 'ನಚ್ಚಿನಾವುಡು' ಎನ್ನುವ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಸಿನಿಮಾ ರಂಗದಲ್ಲಿ ನಟನಾ ಕಂಪನ್ನು ಪಸರಿಸಿದ ಬೆಡಗಿ. ಇದೀಗ ಗ್ರೀಷ್ಮಾ ಆಗಿ ಕಿರುತೆರೆಗೆ ಮರಳಿರುವ ಕಾವ್ಯಾ ರಮೇಶ್ ಅವರಂತೂ ಸಕತ್ ಖುಷಿಯಲ್ಲಿದ್ದಾರೆ. "ಗ್ರೀಷ್ಮಾ ಪಾತ್ರ ತುಂಬಾ ಒಳ್ಳೆಯ ಪಾತ್ರ" ಎಂದು ಹೇಳುತ್ತಾರೆ ಕಾವ್ಯಾ ರಮೇಶ್.
ಫಿಲ್ಮಿಬೀಟ್ ಜೊತೆಗೆ ಮಾತನಾಡಿರುವ ಕಾವ್ಯ ರಮೇಶ್ "ಗೌರಿಶಂಕರದಲ್ಲಿ ನನ್ನದು ತುಂಬಾ ತಲೆಹರಟೆಯ ಪಾತ್ರ. ಚಿನಕುರುಳಿ ಪಾತ್ರ ಎಂದೇ ಹೇಳಬಹುದು. ಸಂಪ್ರದಾಯಸ್ಥ, ವಿದ್ಯಾವಂತ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಗ್ರೀಷ್ಮಾ ಲೈಫ್‌ನಲ್ಲಿ ಅವಳಿಗೆ ಇಷ್ಟ ಬಂದ ಹಾಗೆ ಇರ್ತಾಳೆ. ಜೊತೆಗೆ ಏನಾದ್ರೂ ಸಾಧನೆ ಮಾಡಬೇಕು ಎಂಬ ಬಯಕೆಯೂ ಆಕೆಗಿದೆ. ಮುಂದಿನ ದಿನಗಳಲ್ಲಿ ಗ್ರೀಷ್ಮಾ ಪಾತ್ರ ಉತ್ತಮ ತಿರುವು ಪಡೆದುಕೊಳ್ಳುತ್ತಾ ಹೋಗುತ್ತದೆ" ಎಂದು ಹೇಳಿಕೊಂಡಿದ್ದಾರೆ.

"ವರ್ಷಗಳ ನಂತರ ಮತ್ತೆ ಕಿರುತೆರೆಗೆ ಮರಳಿದ್ದೇನೆ. ನಾನಂತೂ ಸಿಕ್ಕಾಪಟ್ಟೆ ಖುಷಿಯಲ್ಲಿದ್ದೇನೆ. ಸಿನಿಮಾ ಶೂಟಿಂಗ್ ಆದರೆ ಪ್ರತಿದಿನವೂ ಇರುವುದಿಲ್ಲ. ಸೀರಿಯಲ್ ಶೂಟಿಂಗ್ ಹಾಗಲ್ಲ, ಪ್ರತಿದಿನವೂ ಶೂಟಿಂಗ್ ಇರುತ್ತದೆ. ದಿನವೂ ನಮ್ಮನ್ನು ನಾವು ಬ್ಯುಸಿಯಾಗಿರುವಂತೆ ಸೀರಿಯಲ್ ಮಾಡುತ್ತದೆ. ಅಂದ ಹಾಗೇ ನಮ್ಮ ಧಾರಾವಾಹಿಯ ಶೂಟಿಂಗ್ ಸಕಲೇಶಪುರದಲ್ಲಿ ನಡೆಯುತ್ತಿದೆ. ಸ್ಪಲ್ಪ ಕಷ್ಟ ಪಟ್ಟು ತುಂಬಾ ಇಷ್ಟಪಟ್ಟು ಎಲ್ಲಾ ಕಲಾವಿದರು ನಟಿಸ್ತಾ ಇದ್ದೇವೆ" ಎಂದು ಫಿಲ್ಮಿಬೀಟ್ ಜೊತೆಗೆ ಸಂತಸ ಹಂಚಿಕೊಂಡಿದ್ದಾರೆ.
"ಗೌರಿಶಂಕರ ಧಾರಾವಾಹಿ ಆರಂಭವಾಗಿ ಕೆಲವೇ ದಿನಗಳು ಆಗಿದೆಯಷ್ಟೆ. ಈಗಾಗಲೇ ಗ್ರೀಷ್ಮಾ ಪಾತ್ರಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಬರುತ್ತಿದೆ. ಸೀತಾವಲ್ಲಭ ಧಾರಾವಾಹಿಯ ನಂತರ ನಾನು ಕೊಂಚ ಗ್ಯಾಪ್‌ನ ನಂತರ ನಟನೆಗೆ ಮರಳಿದ್ದು. ಆದರೂ ವೀಕ್ಷಕರು ನನ್ನನ್ನು ಮೆಚ್ಚಿಕೊಂಡಿರುವುದು ನನಗೆ ತುಂಬಾನೇ ಸಂತಸ ತಂದಿದೆ. ಜನರು ನನ್ನನ್ನು ಮರೆತಿಲ್ಲ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಫಿಲ್ಮಿಬೀಟ್ ಜೊತೆಗೆ ಕಾವ್ಯಾ ರಮೇಶ್ ಹೇಳಿಕೊಂಡಿದ್ದಾರೆ.


Click it and Unblock the Notifications











