"ಅಂದು ಬೇಕಂತೆಲೇ ಫೋನ್ ಪಿಕ್ ಮಾಡಿರಲಿಲ್ಲ"; ಅಗಲಿದ ಗೆಳತಿ ನೆನೆದ ಕಾವ್ಯಾ ಶೈವ!
'ಕೆಂಡಸಂಪಿಗೆ' ಧಾರಾವಾಹಿಯ ನಾಯಕ ನಟಿ ಕಾವ್ಯಾ ಶೈವ ತಮ್ಮ ಗೆಳತಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಕೆಂಡಸಂಪಿಗೆ' ಧಾರಾವಾಹಿಯ ನಟಿ, ಜೀವನದಲ್ಲಿ ಸ್ನೇಹಿತರು ಎಷ್ಟು ಮುಖ್ಯ ಎಂಬ ಪ್ರಶ್ನೆಗೆ ಉತ್ತರಿಸುವಾಗ ಗಳಗಳನೆ ಅತ್ತಿದ್ದಾರೆ.
"ಜೀವನದಲ್ಲಿ ಗೆಳೆಯರು ಬಹಳಷ್ಟು ಮುಖ್ಯ ಯಾವುದೇ ಕೆಲಸದಲ್ಲಿ ಬ್ಯುಸಿ ಇದ್ದರೂ, ಗೆಳೆಯರ ಬಗ್ಗೆ ಗಮನ ಕೊಡುವುದನ್ನು ಎಂದಿಗೂ ಮರೆಯಬೇಡಿ" ಎಂದಿದ್ದಾರೆ.

"ನಾವು ಐದು ಜನ ಬಹಳ ಆಪ್ತ ಗೆಳೆಯರಿದ್ದೆವು. ಅದರಲ್ಲೂ ಒಬ್ಬಳು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಳು. ನಾವು ಪ್ರತಿದಿನವೂ ನಮ್ಮ ಆಗು ಹೋಗುಗಳನ್ನು ಫೋನ್ ಮೂಲಕ ಶೇರ್ ಮಾಡುತ್ತಿದ್ದೆವು. ಅದೊಂದು ದಿನ ಅವಳು ಪದೇ ಪದೆ ಬಹಳಷ್ಟು ಸಾರಿ ಫೋನ್ ಮಾಡಿದಳು. ನಾನು ಹೈದ್ರಾಬಾದ್‌ನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದೆ. ಬೇಕು ಬೇಕಂತಲೇ ಫೋನ್ ಪಿಕ್ ಮಾಡದೇ ಇದ್ದೆ. ಹಾಗಂತ ಅಲ್ಲಿ ಯಾರೂ ಫೋನ್ ಪಿಕ್ ಮಾಡಬೇಡಿ ಎಂದು ಹೇಳಿರಲಿಲ್ಲ. ಆದರೆ, ಯಾಕೋ ಗೊತ್ತಿಲ್ಲ ಅಂದು ನಾನು ಫೋನ್ ಪಿಕ್ ಮಾಡಲೇ ಇಲ್ಲ. " ಅಂದಿನ ಘಟನೆಯನ್ನು ನೆನೆದಿದ್ದಾರೆ.
"ಆಕೆಗೆ ಅದೇನು ಹೇಳಿಕೊಳ್ಳಬೇಕಿತ್ತೋ ಗೊತ್ತಿಲ್ಲ. ಅಂದು ಶೂಟಿಂಗ್ ಮುಗಿಸಿ ಸಂಜೆ ಮನೆಯಲ್ಲಿ ರೆಸ್ಟ್ ಮಾಡಿದೆ. ಮರುದಿನ ಬೆಳಿಗ್ಗೆ ಗೆಳೆಯರೊಬ್ಬರಿಂದ ಫೋನ್ ಕರೆ ಬಂತು. ನನ್ನ ಆ ಗೆಳತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ತಿಳಿಯಿತು. ಈ ಘಟನೆ ನನ್ನ ಮನಸ್ಸಿಗೆ ಬಹಳ ದೊಡ್ಡ ಆಘಾತ ಮಾಡಿದೆ. ಆಕೆ ಹಿಂದಿನ ದಿನ ಅದೆಷ್ಟು ಸಾರಿ ಕಾಲ್ ಮಾಡಿದರೂ, ನಾನು ಯಾಕೆ ಪಿಕ್ ಮಾಡಲಿಲ್ಲ ಎಂದು ನನಗೆ ಇನ್ನೂ ಗೊತ್ತಿಲ್ಲ. ಬಹುಶಃ ಅವತ್ತು ನಾನು ಮಾತಾಡಿದ್ದರೆ ಅವಳು ಉಳಿಯುತ್ತಿದ್ದಳು. ಅವಳ ಮನಸ್ಸಿನ ಬೇಸರವನ್ನು ಹೇಳಿಕೊಳ್ಳುತ್ತಿದ್ದಳು ಎಂದು ನನಗೆ ಆಗಾಗ ಕಾಡುತ್ತಲೇ ಇರುತ್ತದೆ " ಎಂದು ಹೇಳುತ್ತಾ ಮನಸ್ಸಿನ ನೋವನ್ನು ಹೊರ ಹಾಕಿದ್ದಾರೆ ನಟಿ ಕಾವ್ಯಾ ಶೈವ.
ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರೆಲ್ಲರೂ ತಮ್ಮ ಗೆಳೆಯರನ್ನು ನೆನೆಸಿಕೊಂಡು ಅತ್ತಿದ್ದಾರೆ. ಹಲವಾರು ಜನ ತಮ್ಮ ಜೀವನದಲ್ಲಿ ನಡೆದು ಹೋದ ದುರಂತ ಘಟನೆಗಳನ್ನು ಕಾಮೆಂಟ್ ಸೆಕ್ಷನ್‌ನಲ್ಲಿ ಬರೆದುಕೊಂಡು ನೋವನ್ನು ಹಂಚಿಕೊಂಡಿದ್ದಾರೆ. ಗೆಳೆಯರು ಜೀವನಕ್ಕೆ ಸದಾ ಬೇಕು ಅವರನ್ನು ಎಂದೂ ನಿರ್ಲಕ್ಷಿಸಬಾರದು ಎಂದೆಲ್ಲ ಹಲವಾರು ಜನ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ 'ಕೆಂಡಸಂಪಿಗೆ' ಧಾರಾವಾಹಿಯ ಸುಮನಾ ಆಗಿ ನಟಿಸುತ್ತಿರುವ ಕಾವ್ಯಾ ಶೈವ ಮೊದಲು ನಟಿಸಿದ್ದು ಪೋಷಕ ಪಾತ್ರದಲ್ಲಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭೂಮಿ ತಾಯಾಣೆ' ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಮುಂದೆ ಪರಭಾಷೆಯ ಕಿರುತೆರೆಗೆ ಹಾರಿದ ಈಕೆ ಅಲ್ಲೂ ತಮ್ಮ ಸಹಜ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ತೆಲುಗಿನ 'ಹಂಸಗೀತಂ' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಕಾವ್ಯಾ ಶೈವ ಮುಸ್ಲಿಂ ಹುಡುಗಿಯಾಗಿ ಅಭಿನಯಿಸಿದ್ದರು. ವಿಶೇಷವೆಂದರೆ ಆ ತೆಲುಗು ಧಾರಾವಾಹಿಯಲ್ಲಿ ನಾಯಕನಾಗಿ 'ಮನೆದೇವ್ರು' ಧಾರಾವಾಹಿಯ ಖ್ಯಾತಿಯ ಜಯ್ ಡಿಸೋಜಾ ನಟಿಸಿದ್ದರು.


Click it and Unblock the Notifications











