ಒಂದೇ ಧಾರಾವಾಹಿಯಲ್ಲಿ ಎರಡು ಪಾತ್ರಗಳಲ್ಲಿ ರಂಜಿಸಿದ ಈ ಕಾವ್ಯಾ ಶಾಸ್ತ್ರಿ; ಈ ನಟಿಯ ಹಿನ್ನೆಲೆಯೇನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಜಾನಕಿ ಸಂಸಾರ'. ಸೂರಜ್ ಹೊಳಲು ಮತ್ತು ಅಂಜನಾ ಶ್ರೀನಿವಾಸ್ ನಾಯಕ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುತ್ತಿದ್ದಾರೆ ನಟಿ ಕಾವ್ಯಾ ಶಾಸ್ತ್ರಿ. 'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ಅನಾಮಿಕ ಪಾತ್ರಕ್ಕೆ ಜೀವ ತುಂಬುತ್ತಿರುವ ಕಾವ್ಯಾ ಶಾಸ್ತ್ರಿ ನೆಗೆಟಿವ್ ಪಾತ್ರದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
ನಾಯಕಿ ಜಾನಕಿಯದ್ದು ತುಂಬು ಕುಟುಂಬ. ಮನೆಯ ಹಿರಿಸೊಸೆಯಾಗಿರುವ ಜಾನಕಿ ಇಡೀ ಕುಟುಂಬದ ಹೊಣೆ ಹೊತ್ತವಳು. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರಾದರೆ ಅದನ್ನು ಧೈರ್ಯದಿಂದ ಎದುರಿಸುವ ಗಟ್ಟಿಗಿತ್ತಿ ಜಾನಕಿ.

ಇದರ ಜೊತೆಗೆ ವಿದ್ಯಾವಂತೆಯಾಗಿರುವ ಜಾನಕಿ ಸಂಸಾರ ಮತ್ತು ಉದ್ಯೋಗವನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಚಾಲಾಕಿ. ತನ್ನ ಮನೆಯನ್ನು, ಮನೆ ಮಂದಿಯನ್ನು ಸದಾ ಕಾಲ ಒಗಟ್ಟಿನಲ್ಲಿ ಇರುವಂತೆ ಬಯಸುವ ಜಾನಕಿಯ ಸಂಸಾರಕ್ಕೆ ಮನೆಯೊಡೆಯುವ ವ್ಯಕ್ತಿಯಾಗಿ ಆಗಮಿಸಿರುವುದೇ ಈ ಅನಾಮಿಕ. ಮನೆಮಂದಿಯ ಎದುರು ತೀರಾ ಒಳ್ಳೆಯವಳಂತೆ ನಟಿಸಿ, ಮನೆ ಒಡೆಯುವ ದೃಢಸಂಕಲ್ಪ ಮಾಡಿರುವ ಹೆಣ್ಣು ಮಗಳು ಅನಾಮಿಕಳಾಗಿ ನಟಿ ಕಾವ್ಯ ಶಾಸ್ತ್ರಿ ನಟಿಸುತ್ತಿದ್ದಾರೆ.
ದುನಿಯಾ ವಿಜಯ್ ನಟನೆಯ 'ಯುಗ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಟನೆಗೆ ಪಾದಾರ್ಪಣೆ ಕಾವ್ಯಾ ಶಾಸ್ತ್ರಿ ಮಾಡಿದರು. ತೆಲುಗಿನ 'ರಾಣಿವಾಸಂ' ಧಾರಾವಾಹಿಯ ಮೂಲಕ ಕಿರುತೆರೆಯತ್ತ ಮುಖ ಮಾಡಿದ ಕಾವ್ಯಾ ನಂತರ ಕಾಣಿಸಿಕೊಂಡಿದ್ದು, ಕನ್ನಡ ಕಿರುತೆರೆಯಲ್ಲಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶುಭವಿವಾಹ' ಧಾರಾವಾಹಿಯಲ್ಲಿ ನಾಯಕಿ ಶ್ರದ್ಧಾಳಾಗಿ ನಟಿಸಿದ ಈಕೆ ನಿರೂಪಕಿಯಾಗಿ ಗಮನ ಸೆಳೆದ ಬೆಡಗಿ.

ಸುವರ್ಣ ವಾಹಿನಿಯ 'ಸ್ಟಾರ್ ಸಿಂಗರ್'ನ ನಿರೂಪಕಿಯಾಗಿ ಸೈ ಎನಿಸಿಕೊಂಡಿದ್ದ ಕಾವ್ಯಾ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ವಾಸ್ ಸೀಸನ್ 4ರ ಸ್ಪರ್ಧಿಯಾಗಿ ಮಿಂಚಿದ್ದರು. ದೊಡ್ಮನೆಯೊಳಗೆ ಕಾಲಿಟ್ಟಿದ್ದ ನಟಿ ತಮ್ಮ ನಡೆ, ನುಡಿಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಮುಂದೆ 'ಪತ್ತೇದಾರಿ ಪ್ರತಿಭಾ' ಧಾರಾವಾಹಿಯಲ್ಲಿ ನಟಿಸಿದ್ದ ಈಕೆ ತಮಿಳಿನ 'ಮಹಾಲಕ್ಷ್ಮಿ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿಯಲ್ಲಿ ದೇವಸೇನಾಳಾಗಿ ಕಾಣಿಸಿಕೊಂಡಿದ್ದರು ಕಾವ್ಯಾ. ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದಿದ್ದ ಈಕೆ ನಂತರ ಅದೇ ಧಾರಾವಾಹಿಯಲ್ಲಿನ ಹೊಸದೊಂದು ಅಧ್ಯಾಯದಲ್ಲಿ 'ತ್ರಿಶಲಾ' ಆಗಿ ನಟಿಸಿದ್ದರು. ಅಂದ್ಹಾಗೆ ಇವರು ನಟಿಸುತ್ತಿರುವ ಧಾರಾವಾಹಿಯಿಂದ ಹೊರಬಂದು ನಂತರ ಅದೇ ಧಾರಾವಾಹಿಯಲ್ಲಿ ಮಗದೊಂದು ಪಾತ್ರದ ಮೂಲಕ ನಟಿಸುವ ಅವಕಾಶ ಪಡೆದುಕೊಂಡಿರುವ ಏಕೈಕ ನಟಿ. ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯ ಶಾಸ್ತ್ರಿ ಇದೀಗ ಅನಾಮಿಕಳಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











