"ನನ್ನ ಸನಾತನ ಧರ್ಮದ ಕಂಟೆಂಟ್ ಯಾರಿಗಾದರೂ ಉರಿದ್ರೆ, ಅನ್‌ಫಾಲೋ ಮಾಡಿ"; ಕಾವ್ಯಾ ಶಾಸ್ತ್ರೀ
ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ ಇತ್ತೀಚಿನ ವರ್ಷಗಳಲ್ಲಿ ಬಣ್ಣದಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ವೀಡಿಯೋಗಳನ್ನು ಮಾಡುತ್ತಾ ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ನೀಡುತ್ತಾ ಬರುತ್ತಿದ್ದಾರೆ.
ಕಾವ್ಯಾ ಶಾಸ್ತ್ರಿ ಇನ್‌ಸ್ಟಾ ರೀಲ್ಸ್ ಹಾಗೂ ವೀಡಿಯೋಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಆಧ್ಯಾತ್ಮದತ್ತ ಆಕೆ ಹೆಚ್ಚಿನ ಒಲವು ಬೆಳೆಸಿಕೊಂಡಿದ್ದಾರೆ. ಹಾಗಾಗಿ ಅಂತಹ ವಿಚಾರಗಳ ಬಗ್ಗೆ ಹೆಚ್ಚು ವೀಡಿಯೋ ಮಾಡುತ್ತಾರೆ. ಇನ್ನುಳಿದಂತೆ ಆರೋಗ್ಯ ಸಮಸ್ಯೆ, ಡಯೆಟ್, ಮ್ಯಾನಿಫೆಸ್ಟೇಷನ್ ರೀತಿಯ ಉಪಯುಕ್ತ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಕಾವ್ಯಾ ವೀಡಿಯೋಗಳಿಗಾಗಿ ಸಾಕಷ್ಟು ಜನ ಕಾಯುತ್ತಿರುತ್ತಾರೆ. ಇದೀತ ತಮ್ಮ ವೀಡಿಯೋಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಆಕೆ ತಿರುಗೇಟು ನೀಡಿದ್ದಾರೆ.

"ನನ್ನ ಅಕೌಂಟ್ ಅಲ್ಲಿ ನಾನು ಮಾತಾಡೋದೆ ದೇವರು- ಧರ್ಮ ಆಚರಣೆ- ಮಹತ್ವ ಇದರ ಬಗ್ಗೆ. ನನ್ನ ಸನಾತನ ಧರ್ಮದ ಕಂಟೆಂಟ್ ಯಾರಿಗಾದರೂ ಉರಿದ್ರೆ, ಅನ್‌ಫಾಲೋ ಮಾಡಿ. ನನ್ನ ರೀಲ್ ನೋಡಿ ಕಲಿಯೋ ಪ್ರೀತಿ ಹಂಚೋ ಸಾಕಷ್ಟು ಸನಾತನಿಗಳಿದ್ದಾರೆ. ಧರ್ಮ- ದೇವರು - ಅಚರಣೆಗಳ ಬಗ್ಗೆ ನಂಬಿಕೆ ಇಲ್ಲದೆ ಕೀಳಾಗಿ, ಅತೀ ಮೇಧಾವಿತನದಿಂದ ಮಾತಾಡುವವರಿಗೆ ನನ್ನ ಪ್ರೊಫೈಲ್ ಅಲ್ಲಿ ಕೆಲಸ ಇಲ್ಲ. ಎಲ್ಲರನ್ನೂ ಮೆಚ್ಚಿಸೋಕ್ಕೆ ನನ್ನ ಧರ್ಮ- ದೇಶ- ಭಾಷೆಯನ್ನ ಧೈರ್ಯವಾಗಿ ಬೆಂಬಲಿಸದೆ ಇರೋಕ್ಕೆ ನನಗಾಗಲ್ಲ. ವಂದೇ ಮಾತರಂ ಜೈ ಶ್ರೀ ರಾಮ ಜೈಭಾರತಾಂಬೆ" ಎಂದು ಕಾವ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾ ವರವೂ ಹೌದು, ಶಾಪವೂ ಹೌದು ಎನ್ನುವಂತಾಗಿದೆ. ಇದರಿಂದ ಸಾಕಷ್ಟು ಅನುಕೂಲಗಳು ಇವೆ, ಅನಾನುಕೂಲಗಳು ಇವೆ. ಕೆಲವರು ಸೋಶಿಯಲ್ ಮೀಡಿಯಾವನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನ ಇದರಿಂದ ಹಣ ಗಳಿಸುತ್ತಾರೆ. ಜನಪ್ರಿಯತೆ ಸಾಧಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಅದನ್ನು ಕೆಟ್ಟ ವಿಚಾರಕ್ಕೆ ಬಳಸಿಕೊಳ್ಳುತ್ತಾರೆ. ಮತ್ತೆ ಕೆಲವರು ಸುಖಾ ಸುಮ್ಮನೆ ಕಾಮೆಂಟ್ ಮಾಡಿ ಕಾಲೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ.

ಯಾರು ಏನೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರೂ ಅದನ್ನು ಟೀಕಿಸಿ, ವ್ಯಂಗ್ಯ ಮಾಡಿ ಕಾಮೆಂಟ್ ಮಾಡುವವರು ಹೆಚ್ಚಾಗುತ್ತಿದ್ದಾರೆ. ಸೆಲೆಬ್ರೆಟಿಗಳಿಗೂ ಇಂತಹ ಕಹಿ ಅನುಭವ, ಕಿರಿಕಿರಿ, ಮಾನಸಿಕ ಕಿರುಕುಳ ಎದುರಾಗುತ್ತದೆ. ಇದೇ ಕಾರಣಕ್ಕೆ ಕೆಲ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾ ಸಹವಾಸವೇ ಬೇಡ ಎನ್ನುತ್ತಾರೆ. ಮತ್ತೆ ಕೆಲವರು ಸೋಶಿಯಲ್ ಮೀಡಿಯಾ ಅಕೌಂಟ್ ನೋಡಿಕೊಳ್ಳಲು ಬೇರೆಯವರನ್ನು ನೇಮಿಸಿಕೊಳ್ಳುತ್ತಾರೆ. ಇನ್ನು ಪೋಸ್ಟ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಕಾವ್ಯಾ ಕೂಡ ಇದೇ ವಿಚಾರಕ್ಕೆ ಇದೀಗ ಬೇಸರ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ನನ್ನ ಸನಾತನ ಧರ್ಮದ ಕಂಟೆಂಟ್ ಯಾರಿದಾದರೂ ಅಸಮಾಧಾನ ತಂದಿದ್ದರೆ ಅನ್‌ಫಾಲೋ ಮಾಡಿ ಸುಮ್ಮನಾಗಿ ಎಂದು ಖಡಕ್ ಆಗಿಯೇ ಹೇಳಿದ್ದಾರೆ. "ಎಲ್ಲರನ್ನೂ ಮೆಚ್ಚಿಸೋಕ್ಕೆ ನನ್ನ ಧರ್ಮ- ದೇಶ- ಭಾಷೆಯನ್ನ ಧೈರ್ಯವಾಗಿ ಬೆಂಬಲಿಸದೆ ಇರೋಕ್ಕೆ ನನಗಾಗಲ್ಲ" ಎಂದು ಬರೆದುಕೊಂಡಿದ್ದಾರೆ.
ಉದಯ ಮ್ಯೂಸಿಕ್ ವಾಹಿನಿ ನಿರೂಪಕಿಯಾಗಿದ್ದ ಕಾವ್ಯಾ ಶಾಸ್ತ್ರೀ ಬಳಿಕ ಕೆಲ ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚಿದ್ದರು. ಬಿಗ್ ಬಾಸ್ ಸೀಸನ್ 4ರಲ್ಲಿ ಕಾವ್ಯ ಶಾಸ್ತ್ರಿ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು.


Click it and Unblock the Notifications











