ಕಿರುತೆರೆ, ಸಿನಿಮಾನೂ ಆಯ್ತು.. ಈಗ ಜಾಹೀರಾತಿನಲ್ಲಿ ನಟನೆ; "ಇದು ನನ್ನ ಬದುಕಿನ ಅತ್ಯಂತ ಹೆಮ್ಮೆಯ ಕ್ಷಣ" ಎಂದ ಕೃತಿಕಾ ರವೀಂದ್ರ
ತಮ್ಮ ನಟನೆಯಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿಯರ ಪೈಕಿ ಕೃತಿಕಾ ರವೀಂದ್ರ ಕೂಡಾ ಒಬ್ಬರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ನಾಯಕಿ ಗಿರಿಜಾ ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು ಕೃತಿಕಾ ರವೀಂದ್ರ. ಗಿರಿಜಾ ಎನ್ನುವ ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಕಳೆದ ವರ್ಷದ ಜೀ ಕುಟುಂಬ ಅವಾರ್ಡ್ಸ್ ನಲ್ಲಿ 'ನೆಚ್ಚಿನ ನಟಿ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
'ಭೂಮಿಗೆ ಬಂದ ಭಗವಂತ' ಧಾರಾವಾಹಿ ಇತ್ತೀಚೆಗಷ್ಟೇ ಸುಖಾಂತ್ಯ ಕಾಣುವ ಮೂಲಕ ಮುಕ್ತಾಯ ಕಂಡಿತ್ತು. ಅದರ ಬೆನ್ನಲ್ಲೇ ಮಗದೊಂದು ಸಂತಸದ ಸುದ್ದಿಯನ್ನು ಕೃತಿಕಾ ರವೀಂದ್ರ ಹಂಚಿಕೊಂಡಿದ್ದಾರೆ. ಸದ್ಯ ಕಿರುತೆರೆ ಹಾಗೂ ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟಿರುವ ಈ ನಟಿ ಈ ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಸ್ಪರ್ ಇಂಡಿಯಾದ ಕರ್ನಾಟಕದ ಬ್ರಾಂಡ್ ಅಂಬಾಸಿಡರ್ ಆಗಿ ಈಕೆ ಆಯ್ಕೆಯಾಗಿದ್ದು, ಈಗಾಗಲೇ ಇದರ ಜಾಹೀರಾತಿನ ಶೂಟಿಂಗ್ ಕೂಡಾ ನಡೆದಿದೆ. ಜಾಹೀರಾತಿನಲ್ಲಿ ಇವರಿಗೆ ನಟಿಸಬೇಕು ಎಂಬ ಆಸೆಯಿತ್ತು. ಅದನ್ನು ಈಗ ಈಡೇರಿಸಿಕೊಂಡಿದ್ದಾರೆ.

"ಯಾವಾಗಿನಿಂದಲೂ ನಾನು ಜಾಹೀರಾತಿನಲ್ಲಿ ನಟಿಸಬೇಕೆಂದು ಅಂದುಕೊಳ್ಳುತ್ತಿದ್ದೆ. ನಾನು ನನ್ನ ಧಾರಾವಾಹಿ ಸೆಟ್ ನಲ್ಲೂ ಈ ವಿಷಯ ಹೇಳ್ತಾ ಇರ್ತಿದ್ದೆ. ಆ್ಯಡ್ ಶ್ಯೂಟ್ ಮಾಡ್ಬೇಕು, ಆ್ಯಡ್ ಶೂಟ್ ಎಂದ್ರೆ ನನಗಿಷ್ಟ. ಇದು ನನ್ನ ವೃತ್ತಿ ಬದುಕಿಗೆ ಮೈಲ್ ಸ್ಟೋನ್ ಅಂತ ಹೇಳ್ಬಹುದು. ಖುಷಿಯಿದೆ ನನಗೆ. ಈ ಬ್ರಾಂಡ್‌ಗೆ ಕರ್ನಾಟಕವನ್ನು ರೆಪ್ರೆಸೆಂಟ್ ಮಾಡ್ತಿದ್ದೀನಿ. ಅದೇ ಹೆಮ್ಮೆಯ ವಿಷಯ" ಅಂತ ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಕೃತಿಕಾ ರವೀಂದ್ರ.
"ನನಗಿಂತಲೂ ಜಾಸ್ತಿ ನನ್ನ ಅಮ್ಮ ಖುಷಿಯಲ್ಲಿದ್ದಾರೆ. ಇನ್ನು ಮುಂದೆಯೂ ಅಷ್ಟೆ ಒಳ್ಳೊಳ್ಳೆಯ ಪ್ರಾಡಕ್ಟ್ ಗಳಿಗೆ ಆ್ಯಡ್ ಮಾಡ್ಬೇಕು ಎನ್ನುವುದು ಇದೆ. ದೇವರ ದಯೆ ಇದ್ರೆ ಅದು ಕೂಡಾ ಆಗುತ್ತೆ. ಎಲ್ಲಾ ದೈವೇಚ್ಛೆ ಎಂದೇ ನಾನು ಯಾವತ್ತಿಗೂ ಹೇಳೋದು. ಇದು ಕೂಡಾ ಹಾರ್ಡ್ ವರ್ಕ್ ಮತ್ತೆ ದೈವೇಚ್ಛೆ" ಎಂದು ಸಂತಸದಿಂದ ಹೇಳುತ್ತಾರೆ ಕೃತಿಕಾ ರವೀಂದ್ರ.
ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ಕೃತಿಕಾ "ಎಲ್ಲರಿಗೂ ನಮಸ್ಕಾರ. ನಾನು ಕರ್ನಾಟಕದಲ್ಲಿ ವಿಸ್ಪರ್ ಇಂಡಿಯಾ ಹಾಗೂ ಪ್ರೊಕ್ಟೆರ್‌ಗ್ಯಾಂಬಲ್‌ನ ಮುಖ ಎಂದು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ಇದು ಅದ್ಭುತ ಅನುಭವವಾಗಿದೆ. ಮತ್ತು ನೀವು ಶೀಘ್ರದಲ್ಲೇ ಈ ಜಾಹೀರಾತನ್ನು ಅನ್ನು ನೋಡುತ್ತೀರಿ ಅಂತ ಹೇಳುವುದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ." ಎಂದು ಆಕೆ ಬರೆದುಕೊಂಡಿದ್ದಾರೆ.

"ವಿಸ್ಪರ್ ಇಂಡಿಯಾ ಏನಿದೆ ಅದರ ಕರ್ನಾಟಕದ ಫೇಸ್ ನಾನು. ಮೊದಲ ಬಾರಿ ನನಗೆ ಕಾಲ್ ಬಂದಾಗ ಓಹ್! ಹೌದಾ? ನನಗೆ ಆಫರ್ ಬರ್ತಿದೆಯಾ ಅಂತಾನೇ ನನಗನ್ನಸಿತ್ತು. ಈ ಜಾಹೀರಾತಿನ ಶೂಟಿಂಗ್ ಮುಂಬೈನಲ್ಲಿತ್ತು. ಪಿಎನ್ ಜಿ ಬ್ರಾಂಡ್ ನವರದ್ದು ಇದು. ಶೂಟಿಂಗ್ ತುಂಬಾ ಚೆನ್ನಾಗಿ ಆಯ್ತು. ನನ್ನ ಬದುಕಿನ ಹೆಮ್ಮೆಯ ಕ್ಷಣ ಇದು. ನನ್ನ ಜೀವನದ ಒಂದು ಕನಸು ನನಸಾಯಿತು" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ ಕೃತಿಕಾ ರವೀಂದ್ರ.
ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಾ ಆಗಿ ಅಭಿನಯಸಿದ್ದ ಕೃತಿಕಾ ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಮುಂದೆ ಹಿರಿತೆರೆಗೆ ಹಾರಿದ ಈಕೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಿಜಯದಶಮಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಈಕೆ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯ ಗಿರಿಜಾ ಆಗಿ ಪ್ರೇಕ್ಷಕರನ್ನು ರಂಜಿಸಿದ್ದರು.


Click it and Unblock the Notifications











