"ನೀನು ನನಗೆ ದೇವರು ಕೊಟ್ಟ ಮಗಳು" ಎಂದು ನಟಿ ಕೃತಿಕಾ ರವೀಂದ್ರ; ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭೂಮಿಗೆ ಬಂದ ಭಗವಂತ' ಧಾರಾವಾಹಿ ಬಹಳ ವಿಭಿನ್ನವಾದ ಕಥಾಹಂದರವನ್ನು ಹೊಂದಿದೆ. ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿರುವ ಈ ಧಾರಾವಾಹಿ ದೈನಂದಿನ ಆಗುಹೋಗುಗಳ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ತನ್ನ ಕಥೆಯ ಒಡಲಲ್ಲಿಟ್ಟುಕೊಂಡು ಸಾಗುತ್ತಿದೆ. ಇದರಲ್ಲಿ ನಾಯಕ ನಟಿಯಾಗಿ ನಟಿಸುತ್ತಿರುವ ನಟಿ ಕೃತಿಕಾ ರವೀಂದ್ರ ಅವರು ಇತ್ತೀಚಿಗೆ ಅಷ್ಟೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಧಾರಾವಾಹಿಯಲ್ಲಿ ಅವರ ಮಗಳ ಪಾತ್ರವನ್ನು ಮಾಡುವ ಬಾಲನಟಿ ಕೃತಿಕಾ ರವೀಂದ್ರ ಅವರಿಗೆ ಹುಟ್ಟುಹಬ್ಬದ ಪ್ರಯುಕ್ತ ಒಂದು ಪತ್ರವನ್ನು ಬರೆದು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಓದಿದೊಡನೆ ಗಳನೆ ಅತ್ತ ನಟಿ ಕೃತಿಕಾ ರವೀಂದ್ರ, ಆ ಬಾಲ ನಟಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.

ಅಂದ ಹಾಗೇ ಕೃತಿಕಾ ರವೀಂದ್ರ ಅವರು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಾತ್ರದಲ್ಲದೇ ಕೃತಿಕಾ ರವೀಂದ್ರ ಅವರು "ನೀನು ನನಗೆ ದೇವರು ಕೊಟ್ಟ ಮಗಳು" ಎಂದು ಬರೆದುಕೊಂಡಿದ್ದಾರೆ.
"ನಾವು ಕಲಾವಿದರು. ನಮ್ಮ ಸೌಭಾಗ್ಯವಿದು. ನಮ್ಮ ಜೀವನದ ಹೆಚ್ಚಿನ ಭಾಗವನ್ನು ರಿಯಲ್ ಫ್ಯಾಮಿಲಿ ಜೊತೆ ಕಳೆಯುವ ಬದಲು ರೀಲ್ ಫ್ಯಾಮಿಲಿಯೊಂದಿಗೆ ಕಳೆಯುತ್ತೇವೆ. ಧಾರಾವಾಹಿಯ ಸಹಕಲಾವಿದರೊಂದಿಗೆ ಕಳೆದ ಈ ಸುಂದರ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ನಡುವೆ ಬೆಳೆದಿರುವ ಈ ಸುಂದರ ಬಾಂಧವ್ಯದ ಕುರುಹು ಈ ಪತ್ರ. ಇದು ನನ್ನ ಹುಟ್ಟು ಹಬ್ಬದ ಬೆಸ್ಟ್ ಗಿಫ್ಟ್" ಎಂದು ಭಾವನಾತ್ಮಕವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ಗೆ ಬಹಳಷ್ಟು ಕಮೆಂಟ್‌ಗಳು ಬಂದಿದ್ದು ಪ್ರೇಕ್ಷಕರು, ಫಾಲೋವರ್ಸ್ ಹಾಗೂ ಈ ಧಾರಾವಾಹಿಯ ಅಭಿಮಾನಿಗಳು ತಮ್ಮ ಮೆಚ್ಚುಗೆ ಹಾಗೂ ಅನಿಸಿಕೆಗಳನ್ನು ಕಾಮೆಂಟ್ ಸೆಕ್ಷನ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು 'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ಗಿರಿಜಾ ಎನ್ನುವ ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಕೃತಿಕಾ ರವೀಂದ್ರ.

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಂತಹ ಒಂದು ಅದ್ಭುತವಾದ ಪ್ರಾಜೆಕ್ಟ್‌ನ ಭಾಗವಾಗಿರುವುದಕ್ಕೆ ನನಗೆ ಖುಷಿಯಿದೆ. ಅದರಲ್ಲೂ ನಾನು ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಮಾಡುತ್ತಿರುವುದಕ್ಕೆ ಸಂತಸವಿದೆ. ಜೊತೆಗೆ ಗಿರಿಜಾ ಪಾತ್ರ ನೆಮ್ಮದಿಯನ್ನು ನೀಡಿದೆ' ಎಂದು ಕೃತಿಕಾ ರವೀಂದ್ರ ಹೇಳಿದ್ದಾರೆ.
ದಶಕಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಾಳಾಗಿ ಕಾಣಿಸಿಕೊಂಡ ಈಕೆ ನಂತರ ನಟನೆಯಲ್ಲಿ ಕಂಡಿದ್ದು ತೀರಾ ಕಡಿಮೆ. ಈಗ ಗಿರಿಜಾ ಆಗಿ ಕಿರುತೆರೆಗೆ ಮರಳಿರುವ ಕೃತಿಕಾ ರವೀಂದ್ರ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











