ನಟನೆಯಷ್ಟೇ ಅಲ್ಲ ಹೋಟೆಲ್ ಉದ್ಯಮಿಯೂ ಆಗಿರುವ ಈ ನಟಿಯ ಯಾರು? ಹಿನ್ನೆಲೆಯೇನು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕೆಂಡಸಂಪಿಗೆ' ಧಾರಾವಾಹಿ ಕಿರುತೆರೆ ವೀಕ್ಷಕರಿಗೆ ಬಹಳಷ್ಟು ಚಿರಪರಿಚಿತ. ವಿಶಿಷ್ಟವಾದ ಕಥಾ ಹಂದರದಿಂದ ಎಲ್ಲರ ಗಮನವನ್ನು ಸೆಳೆದಿರುವ ಈ ಧಾರಾವಾಹಿಗೆ ಸಾಕಷ್ಟು ಪ್ರೇಕ್ಷಕರಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ನಾಯಕಿಯ ಪಾತ್ರ ಬದಲಾಗಿರುವುದು ಎಲ್ಲರಿಗೂ ಗೊತ್ತೇ ಇದೆ.
'ಕೆಂಡಸಂಪಿಗೆ' ಸೀರಿಯಲ್‌ನಲ್ಲಿ ಕಥಾನಾಯಕಿಯಾದ ಸುಮನಾ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಕಾವ್ಯಾ ಶೈವ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು. ಆದರೆ, ಇತ್ತೀಚೆಗೆ ಕಾವ್ಯಾ ಶೈವ ಬದಲಾದ ಮೇಲೆ ಸುಮನಾ ಪಾತ್ರಕ್ಕೆ ಮಧುಮಿತಾ ಎಂಬ ನಟಿ ಜೀವ ತುಂಬುತ್ತಿದ್ದಾರೆ. ಕನ್ನಡ ಕಿರುತೆರೆಗೆ ಹೊಸ ಪರಿಚಯವಾದ ಈ ನಟಿಯ ಕುರಿತು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ಬನ್ನಿ.

ಇವರು ಮೂಲತಃ ಬೆಂಗಳೂರಿನವರು. ನಟಿ ಮಧುಮಿತಾ ಹುಟ್ಟಿದ್ದು, ಬೆಳೆದಿದ್ದು, ವಿದ್ಯಾಭ್ಯಾಸ ಮಾಡಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ ಆದ ಕಾರಣ ಬೆಂಗಳೂರಿನೊಂದಿಗೆ ಇವರಿಗೆ ವಿಶಿಷ್ಟ ನಂಟಿದೆ. ಅಂದಹಾಗೆ ಇವರ ನಟನೆಯ ಕನಸು ಇಂದು ನಿನ್ನೆಯದಲ್ಲ. 9ನೇ ತರಗತಿಯಲ್ಲಿರುವಾಗಲೇ ಮಧುಮಿತಾಗೆ ಕಲಾವಿದೆಯಾಗಬೇಕೆಂಬ ಬಯಕೆಯಿತ್ತಂತೆ. ಹಾಗೇ ಅದು ಬರಿ ಇವರ ಕನಸು ಮಾತ್ರವಲ್ಲ. ಮಧುಮಿತಾ ಅವರ ತಾತ ವೀರಣ್ಣಯ್ಯ ಗುಬ್ಬಿ ವೀರಣ್ಣ ಕಂಪನಿಯಲ್ಲಿದ್ದವರು.
ಮಧುಮಿತಾ ಅವರ ತಾಯಿಯನ್ನು ನಟಿಯಾಗಿಸಬೇಕು ಎಂಬುದು ಅವರ ತಾತನ ಕನಸಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ .ಹಾಗಾಗಿ ಮಧುಮಿತಾ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಆಡಿಷನ್ಸ್ ಕೊಡಲು ಆರಂಭಿಸಿದರು. ಜೊತೆಗೆ ನಟನಾ ತರಬೇತಿಯನ್ನೂ ಪಡೆದು ಅವಕಾಶ ಗಿಟ್ಟಿಸಿಕೊಂಡರು. ತಾತನ ಕನಸು ಮೊಮ್ಮಗಳ ಮುಖಾಂತರ ನನಸಾಯಿತು. ಇದೀಗ ನಟಿಯಾಗಿ ತಾತನ ಆಸೆಯನ್ನು ಮಧುಮಿತಾ ಈಡೇರಿಸಿದ್ದಾರೆ.

ನಟಿ ಮಧುಮಿತಾ ಈ ಧಾರಾವಾಹಿಗೂ ಮುಂಚೆಯೇ ಕನ್ನಡಿಗರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾದವರು. ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಸಿನಿಮಾದಲ್ಲಿ ಮಧುಮಿತಾ ಅಭಿನಯಿಸಿದ್ದರು. ಜೊತೆಗೆ, ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರಿಗೆ ಸಹಾಯಕ ನಿರ್ದೇಶಕಿಯಾಗಿಯೂ ಮಧುಮಿತಾ ಕೆಲಸ ಮಾಡಿದ್ದಾರೆ.
ಇನ್ನು ಇವರಿಗೆ ನಟನೆಯ ಬದುಕನ್ನು ಹೊರತುಪಡಿಸಿ ಇನ್ನೊಂದು ಜೀವನ ವಿಧಾನವೂ ಇದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಬಳಿ 'ಅಮ್ಮನ ಸ್ವಾದ' ಎಂಬ ಚಿಕ್ಕ ಹೋಟೆಲ್ ಒಂದನ್ನು ಕುಟುಂಬಸ್ಥರೊಂದಿಗೆ ಸೇರಿ ನಟಿ ನಡೆಸುತ್ತಿದ್ದಾರೆ. ಚಿಕ್ಕದಾಗಿ ಚೊಕ್ಕವಾಗಿರುವ ಮಧುಮಿತಾರವರ ಜೀವನ ನಿಜಕ್ಕೂ ಪ್ರೇರಣೆಯಿಂದ ಕೂಡಿದೆ.


Click it and Unblock the Notifications











