'ನವರಸ ಕಲಾವಿದೆ','ಅಭಿನಯ ಕಿಶೋರಿ','ಅಭಿನಯ ರಾಣಿ' ಬಿರುದು ಪಡೆದಿರೋ ಈ ನಟಿ ಯಾರು ಗೊತ್ತಾ?
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ' ತನ್ನ ಪ್ರಸಾರ ನಿಲ್ಲಿಸಿದೆ. ಬರೋಬ್ಬರಿ 1243 ಸಂಚಿಕೆಗಳು ಪ್ರಸಾರವಾಗಿದ್ದ ಈ ಧಾರಾವಾಹಿ ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡಿದೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯಾ ತಂಗಿ ಅಂಜಲಿಯಾಗಿ ಅಭಿನಯಿಸುತ್ತಿದ್ದ ಚೆಂದುಳ್ಳಿ ಚೆಲುವೆಯ ಹೆಸರು ಮಹತಿ ವೈಷ್ಣವಿ. ಮಲೆನಾಡ ಕುವರಿ ಮಹತಿ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಈಕೆ ಗುರುತಿಸಿಕೊಂಡಿದ್ದಾರೆ.
ಅಂಜಲಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಮಹತಿ ವೈಷ್ಣವಿ ಅವರ ನಟನಾ ಪಯಣ ಶುರುವಾಗಿದ್ದು ರಿಯಾಲಿಟಿ ಶೋ ಮೂಲಕ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಮಕ್ಕಳ ರಿಯಾಲಿಟಿ ಶೋ 'ಡ್ರಾಮಾ ಜ್ಯೂನಿಯರ್ಸ್' ಸೀಸನ್ 1 ರ ಸ್ಪರ್ಧಿಯಾಗಿ ಈಕೆ ಕಾಣಿಸಿಕೊಂಡಿದ್ದರು. ತಮ್ಮ ಸಹಜ ಅಭಿನಯದ ಮೂಲಕ ತೀರ್ಪುಗಾರರ ಹಾಗೂ ಕಿರುತೆರೆ ವೀಕ್ಷಕರ ಮೆಚ್ಚುಗೆಗೂ ಕೂಡಾ ಈಕೆ ಪಾತ್ರರಾಗಿದ್ದರು.

ಮುಂದೆ 'ಸಿಂಧೂರ' ಧಾರಾವಾಹಿಯ ಅಂಜಲಿಯಾಗಿ ಕಿರುಪರದೆ ಮೇಲೆ ಕಾಣಿಸಿಕೊಂಡ ಮಹತಿ ವೈಷ್ಣವಿ ನಂತರ ಬದಲಾದುದು 'ಗಟ್ಟಿಮೇಳ' ಧಾರಾವಾಹಿಯ ಅಂಜಲಿಯಾಗಿ. ಅಮೋಘ ನಟನೆಯ ಮೂಲಕ ಮೋಡಿ ಮಾಡಿದ ಮಹತಿ ಬಹು ಕಡಿಮೆ ಅವಧಿಯಲ್ಲಿಯೇ ಸೀರಿಯಲ್ ಪ್ರಿಯರ ಮನೆ ಮನ ಸೆಳೆದುಬಿಟ್ಟಿದ್ದರು. ಮಾತ್ರವಲ್ಲ ಜೀ ಕುಟುಂಬ ಅವಾರ್ಡ್ಸ್ ನಲ್ಲಿ 'ಉತ್ತಮ ಸಹೋದರಿ' ಪ್ರಶಸ್ತಿಯನ್ನೂ ಈಕೆ ಪಡೆದುಕೊಂಡಿದ್ದಾರೆ.
'ನಾವು ಎಳೆಯರು ನಾವು ಗೆಳೆಯರು' ಸಿನಿಮಾ ಮೂಲಕ ಹಿರಿತೆರೆಗೆ ಹಾರಿದ ಮಹತಿ ವೈಷ್ಣವ್ ಕಳೆದ ವರ್ಷ ತೆರೆ ಕಂಡ 'ತತ್ಸಮ ತದ್ಭವ' ಸಿನಿಮಾದಲ್ಲಿ ನಟಿಸಿದ್ದಾರೆ. 'ತತ್ಸಮ ತದ್ಭವ' ಸಿನಿಮಾದಲ್ಲಿ ಮೇಘನಾರಾಜ್ ಮಗಳು ನಿಧಿಯಾಗಿ ಅಭಿನಯಿಸಿರುವ ಮಹತಿ ವೈಷ್ಣವ್ ಅವರು ಛೋಟಾ ರಿಪೋರ್ಟರ್ ಆಗಿಯೂ ಗಮನಸೆಳೆದಾಕೆ.
ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಛೋಟಾ ರಿಪೋರ್ಟರ್' ಎನ್ನುವ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಮಹತಿ ಅಲ್ಲಿಯೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿರುವ ಬೆಡಗಿ. ಇನ್ನು ನಟನೆಯ ಹೊರತಾಗಿ ಈಕೆ ಸಂಗೀತಗಾರ್ತಿಯೂ ಹೌದು. ತಮ್ಮ ಅಮ್ಮ ಸುಚಿತ್ರಾ ಅವರ ಬಳಿಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದಾರೆ ಮಹತಿ.

ಸಣ್ಣ ವಯಸ್ಸಿನಲ್ಲಿಯೇ 'ನವರಸ ಕಲಾವಿದೆ' ಬಿರುದು ಪಡೆದುಕೊಂಡಿದ್ದಾರೆ ಮಹತಿ ವೈಷ್ಣವಿ. ಇದರ ಜೊತೆಗೆ ರಂಭಾಪುರಿ ಶ್ರೀಗಳಿಂದ 'ಅಭಿನಯ ಕಿಶೋರಿ', ಹಿರೇಮಗಳೂರು ಕಣ್ಣನ್ ಅವರಿಂದ 'ಅಭಿನಯ ರಾಣಿ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಚೆಲುವೆ. ಅಂದ ಹಾಗೇ ಈಕೆ ಅಭಿನಯದ ಗಟ್ಟಿಮೇಳ ಧಾರಾವಾಹಿಯು ಕಳೆದ ವಾರವಷ್ಟೇ ತನ್ನ ಪ್ರಸಾರ ನಿಲ್ಲಿಸಿದೆ. ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಮಹತಿ ಮುಂದಿನ ದಿನಗಳಲ್ಲಿ ನಾಯಕಿಯಾಗಿ ಕಮಾಲ್ ಮಾಡಿದರೆ ಆಶ್ಚರ್ಯವಿಲ್ಲ.


Click it and Unblock the Notifications











