ಪ್ರೇಮಸೌಧದ ಎದುರು ತಾಯಿ ಹಾಗೂ ತಂಗಿ ಜೊತೆ ಮಾನ್ಸಿ ಜೋಷಿ ಮುಗುಳುನಗೆ
'ಬಿಳಿ ಹೆಂಡ್ತಿ' ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮಾನ್ಸಿ ಜೋಷಿ ಅವರು ಪರಭಾಷೆಗಳಲ್ಲೂ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಈಕೆಯನ್ನು ಹುಡುಕಿ ಬರುತ್ತಿದೆ.
ಯೂಟ್ಯೂಬ್ ವೆಬ್ ಸಿರೀಸ್ ಮೂಲಕ ಹಿಟ್ ಆಗಿದ್ದ ನಟಿ ಮಾನ್ಸಿ ಬಳಿಕ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ದೊರಕಿತ್ತು. ಉಷಾ ಭಂಡಾರಿಯವರ ಗರಡಿಯಲ್ಲಿ ಆಕೆ ನಟನೆಯ ಪಟ್ಟುಗಳನ್ನು ಕಲಿತಿದ್ದಾರೆ.
ಕಳೆದ ನಾಲ್ಕೈದು ವರ್ಷದಿಂದ ಕಿರುತೆರೆಯಲ್ಲಿರುವ ಮಾನ್ಸಿ ಜೋಷಿ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಪಾತ್ರಗಳಲ್ಲಿ ನಟಿಸಿದ್ದಾರೆ. ಭರತನಾಟ್ಯ ಡ್ಯಾನ್ಸರ್ ಆಗಿರುವ ಮಾನ್ಸಿ ಜೋಷಿಗೆ ಹಲವು ಕನಸುಗಳಿವೆ.

ಭರತನಾಟ್ಯ ಕಲಾವಿದೆ ಮಾನ್ಸಿ
ಧಾರಾವಾಡದ ಪೇಡದಂತಿರುವ ಮಾನ್ಸಿ ಜೋಷಿ ತಂದೆಯ ಹೆಸರು ಸುಹಾಸ್ ಪಿ ಜೋಷಿ. ಮೂಲತಃ ಧಾರಾವಾಡದವರು. ಇನ್ನು ತಾಯಿ ಜ್ಯೋಷಿ ಕುಂದಾಪುರದವರು. ಆದರೆ ಮದುವೆಯಾದ ಮೇಲೆ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದು, ಮಾನ್ಸಿ ಹುಟ್ಟಿ ಬೆಳೆದಿದ್ದೆಲ್ಲವೂ ಇಲ್ಲೇ. ಮಾನ್ಸಿ ಜೋಷಿ ಅವರಿಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಭರತನಾಟ್ಯ ಕಲಿತಿರುವ ಮಾನ್ಸಿ ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ.
ಡ್ಯಾನ್ಸ್ ಶಾಲೆ ತೆರೆಯುವ ಕನಸು
ಬರೋಬ್ಬರಿ 250ಕ್ಕೂ ಹೆಚ್ಚು ಡ್ಯಾನ್ಸ್ ಶೋಗಳನ್ನು ಮಾನ್ಸಿ ನೀಡಿದ್ದು ಡ್ಯಾನ್ಸ್ ಅಂದರೆ ಪಂಚಪ್ರಾಣ. ಮಾನ್ಸಿಗೆ ತಮ್ಮದೇ ಆದ ಒಂದು ಡ್ಯಾನ್ಸ್ ಸ್ಕೂಲ್ ಅನ್ನು ತೆರೆಯಬೇಕು. ಹಲವರಿಗೆ ಡ್ಯಾನ್ಸ್ ಹೇಳಿಕೊಡಬೇಕು ಎಂಬ ಕನಸಿದೆ. ಈ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲೇ ಹೆಜ್ಜೆ ಹಾಕಿದ್ದಾರೆ.
ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ನಟಿ
ಮಾನ್ಸಿ 'ರಾಧಾ ರಮಣ' ಧಾರಾವಾಹಿಯಲ್ಲಿ ರಮಣನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡರು. ತುಂಬಾ ಸೌಮ್ಯದ ಪಾತ್ರದಲ್ಲಿ ನಟಿಸಿದ್ದ ಮಾನ್ಸಿ ನಂತರ 'ಪಾರು' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ನಟಿಸಿದ್ದರು. ಇಷ್ಟೇ ಅಲ್ಲದೇ, 'ನಾಯ'ಕಿ ಎಂಬ ಧಾರಾವಾಹಿಯಲ್ಲೂ ಬಣ್ಣ ಹಚ್ಚಿದ್ದಾರೆ. ಕನ್ನಡದ 'ಕಸ್ತೂರಿ ನಿವಾಸ' ಧಾರಾವಾಹಿಯ ರೀಮೇಕ್ ತೆಲುಗಿನಲ್ಲಿ ಮೂಡಿ ಬಂದಿತ್ತು. ಇದರಲ್ಲಿ ಮಾನ್ಸಿ ನಟಿಸಿದ್ದರು. ಇನ್ನು ತಮಿಳಿನ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಕೊರೊನಾ ಕಾರಣದಿಂದ ಅರ್ಧಕ್ಕೆ ಕೈ ಬಿಡಬೇಕಾಯ್ತು.

ಧಾರಾವಾಹಗಳಲ್ಲಿ ನಟಿಸುತ್ತಿರುವ ಮಾನ್ಸಿ
ತೆಲುಗಿನಲ್ಲಿ ಮೂಡಿ ಬಂದ 'ಆಕಾಸಮಂತ' ಧಾರಾವಾಹಿಯು ಈಗ ಕನ್ನಡದಲ್ಲೂ ರಿಮೇಕ್ ಆಗಿದೆ. ಅದೇ 'ಅಣ್ಣ ತಂಗಿ'. ಬಾಳೆ ಕುಮಾರ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಮಾನ್ಸಿ ಜೋಷಿ ಕೂಡ ಬಣ್ಣ ಹಚ್ಚಿದ್ದಾರೆ. ಸದ್ಯ 'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಆಗಿ ನಟಿಸುತ್ತಿದ್ದಾರೆ. ಆಕೆ ಹೆಚ್ಚಾಗಿ ತಮ್ಮ ಸಹೋದರಿಯ ಜೊತೆಗೆ ರೀಲ್ಸ್ ಮಾಡುವುದು, ಟ್ರಾವೆಲ್ ಮಾಡಿ ಎಂಜಾಯ್ ಮಾಡುತ್ತಿರುತ್ತಾರೆ.
ತಾಜ್ ಮಹಲ್ ಅಂಗಳದಲ್ಲಿ ಅಕ್ಕ-ತಂಗಿ
ಮಾನ್ಸಿ ಜೋಷಿ ಸಹೋದರಿ ಇಂಚರಾ ಜೋಷಿ. ಆಕೆ ಕೂಡ ಕಿರುತೆರೆ ನಟಿ. 'ಸರಸು', 'ರಂಗನಾಯಕಿ', 'ಮರಳಿ ಬಂದಳು ಸೀತೆ', 'ಅರವಿಂದ ಸಮೇತ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಸಹನಾ ಆಗಿ ನಟಿಸುತ್ತಿದ್ದಾರೆ. ಅಕ್ಕ-ತಂಗಿಯರಿಬ್ಬರೂ ಕಳೆದ ತಿಂಗಳು ದುಬೈಗೆ ಹೋಗಿ ಬಂದಿದ್ದರು. ಇದೀಗ ತಾಯಿಯ ಜೊತೆಗೆ ಪ್ರೇಮಸೌಧಕ್ಕೆ ಭೇಟಿ ಕೊಟ್ಟಿದ್ದಾರೆ. ತಾಜ್ ಮಹಲ್ ಅಂಗಳದಲ್ಲಿ ಮೂವರು ಫೋಟೋ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











