ಬಿಗ್‌ಬಾಸ್‌ನಲ್ಲಿರುವ ಐಶ್ವರ್ಯಾ ಸಿಂಧೋಗಿ; 'ಭೈರವಿ' ಧಾರಾವಾಹಿಗೆ ಬಂದ ಈ ನಾಯಕಿ ಯಾರು?
ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಭೈರವಿ' ಕೂಡಾ ಒಂದು. 'ಭೈರವಿ' ಧಾರಾವಾಹಿಯಲ್ಲಿ ನಾಯಕಿ ಶಿವಗಾಮಿಯಾಗಿ ನಟಿಸಿ ತೆಲುಗು ಕಿರುತೆರೆ ವೀಕ್ಷಕರ ಮನ ಸೆಳೆದ ಕನ್ನಡತಿ ಹೆಸರು ಐಶ್ವರ್ಯ ಶಿಂಧೋಗಿ. ಅಂದ ಹಾಗೇ 'ಭೈರವಿ' ಧಾರಾವಾಹಿಯು ಉದಯ ವಾಹಿನಿಯಲ್ಲಿ 'ಶಾಂಭವಿ' ಹೆಸರಿನಲ್ಲಿ ಪ್ರಸಾರವಾಗುತ್ತಿದ್ದು, ಅದರಲ್ಲಿ ನಾಯಕಿ ಶಿವಗಾಮಿಯಾಗಿ ಐಶ್ವರ್ಯಾ ಶಿಂಧೋಗಿ ಅಭಿನಯಿಸುತ್ತಿದ್ದರು.
ಅಂದ ಹಾಗೇ ಐಶ್ವರ್ಯಾ ಶಿಂಧೋಗಿ ಅವರು ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 11'ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಅದೇ ಕಾರಣದಿಂದ ಆಕೆ 'ಶಾಂಭವಿ' ಹಾಗೂ 'ಭೈರವಿ' ಧಾರಾವಾಹಿಯಿಂದ ಐಶ್ವರ್ಯಾ ಶಿಂಧೋಗಿ ಹೊರ ಬರಬೇಕಾಯಿತು ಮಾತ್ರವಲ್ಲ ಪಾತ್ರದ ಬದಲಾವಣೆಯೂ ಆಯಿತು.

ಕನ್ನಡದ 'ಶಾಂಭವಿ' ಧಾರಾವಾಹಿಯಲ್ಲಿ ಐಶ್ವರ್ಯಾ ಶಿಂಧೋಗಿ ಅಭಿನಯಿಸುತ್ತಿದ್ದ ಪಾತ್ರಕ್ಕೆ ಮಾನಸ ಮನೋಹರ್ ಆಯ್ಕೆಯಾಗಿದ್ದರೆ. ತೆಲುಗಿನ 'ಭೈರವಿ' ಧಾರಾವಾಹಿಗೆ ಕನ್ನಡತಿ ಮಾನ್ಸಿ ಜೋಶಿ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ರಾಘವ್ ಅವರೊಡನೆ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಸಿಹಿ ಸುದ್ದಿ ನೀಡಿದ ಮಾನ್ಸಿ ಜೋಶಿ ಇದೀಗ 'ಭೈರವಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಮಗದೊಂದು ಸಿಹಿ ಸುದ್ದಿ ನೀಡಿದ್ದಾರೆ.
ಅಂದ ಹಾಗೇ ಮಾನ್ಸಿ ಜೋಶಿ ಅವರಿಗೆ ಪರಭಾಷೆಯ ಕಿರುತೆರೆ ಹೊಸದೇನಲ್ಲ. ಸದ್ಯ ಈಕೆ ಮಲಯಾಳಂನ 'ಚಂದ್ರಕಲಲೆಯುಮ್ ಚಂದ್ರಕಾಂತಮ್' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ 'ಭೈರವಿ' ಧಾರಾವಾಹಿಯಲ್ಲಿ ಈಕೆ ನಟಿಸಲಿದ್ದಾರೆ. ಮಾನ್ಸಿ ಜೋಶಿ ಅವರ ನಟನಾ ಪಯಣ ಶುರುವಾಗಿದ್ದು 'ಬಿಳಿ ಹೆಂಡ್ತಿ' ಧಾರಾವಾಹಿಯ ರಮ್ಯಾಳಾಗಿ.

ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಕಿರುತೆರೆಯಲ್ಲಿ ಅಬ್ಬರಿಸಿದ ಮಾನ್ಸಿ ಜೋಶಿ ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸಿದ್ದರು. ಅಂದ ಹಾಗೇ ಪಾಸಿಟಿವ್ ಪಾತ್ರದಲ್ಲಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಮಿಂಚಿದ ಈಕೆ ನಂತರ ಕಾಣಿಸಿಕೊಂಡಿದ್ದು ವಿಲನ್ ಆಗಿ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಯಕಿ' ಧಾರಾವಾಹಿಯಲ್ಲಿ ಸೌಜನ್ಯಾ ಎನ್ನುವ ಖಳನಾಯಕಿಯ ಪಾತ್ರಕ್ಕೆ ಜೀವ ತುಂಬಿದ್ದರು. ಮಾನ್ಸಿ ಜೋಶಿ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಧಾರಾವಾಹಿಯಲ್ಲಿಯೂ ವಿಲನ್ ಅನುಷ್ಕಾಳಾಗಿ ಮೋಡಿ ಮಾಡಿದರು. ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬೆಸ್ಟ್ ವಿಲನ್ ಪ್ರಶಸ್ತಿಯನ್ನು ಕೂಡಾ ಈಕೆ ಪಡೆದುಕೊಂಡಿದ್ದು, ಕಿರುತೆರೆ ವೀಕ್ಷಕರು ಈಕೆಯನ್ನು, ಈಕೆಯ ನಟನೆಯನ್ನು ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ.
ನಂತರ ಒಂದು ವರ್ಷಗಳ ಕಾಲ ಕಿರುತೆರೆಯಿಂದ ಕೊಂಚ ದೂರವಿದ್ದ ಮಾನ್ಸಿ ಜೋಶಿ 'ಅಣ್ಣ ತಂಗಿ' ಧಾರಾವಾಹಿಯ ಸಂಧ್ಯಾಳಾಗಿ ಕಿರುತೆರೆಗೆ ಮರಳಿದ್ದರು. ಜಿಲ್ಲಾಧಿಕಾರಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ ಮಾನ್ಸಿ ಜೋಶಿ ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ, ಪಾತ್ರದಿಂದ ಹೊರ ಬಂದಿದ್ದರು. ಒಟ್ಟಾರೆಯಾಗಿ ತನ್ನ ನಟನೆಯ ಮೂಲಕ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಮಾನ್ಸಿ ಜೋಶಿ ಮುಂದೊಂದು ದಿನ ಹಿರಿತೆರೆಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ.


Click it and Unblock the Notifications











