9 ವರ್ಷ ಗ್ಯಾಪ್ ಕೊಟ್ಟು ಬಂದ 'ಕೃಷ್ಣಲೀಲಾ'; ಮಯೂರಿ ಕ್ಯಾತರಿ ಹಳ್ಳಿ ಹುಡುಗಿ ಲುಕ್‌ಗೆ ಕ್ಲೀನ್ ಬೋಲ್ಡ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ನನ್ನ ದೇವ್ರು' ಕೂಡಾ ಒಂದು. ದಶಕಗಳ ಹಿಂದೆ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ನಾಯಕಿ ಅಶ್ವಿನಿಯಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಮಯೂರಿ ಕ್ಯಾತರಿ ಇದೀಗ ಮತ್ತೆ ಕಿರುತೆರೆಗೆ ಮರಳಲಿದ್ದಾರೆ.
ಮೊದಲ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಮಯೂರಿ ತದ ನಂತರ ಕಾಣಿಸಿಕೊಂಡಿದ್ದು ಹಿರಿತೆರೆಯಲ್ಲಿ. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಅಭಿನಯಿಸಿ, ಸಿನಿಪ್ರಿಯರ ಮನ ಸೆಳೆದಿರುವ ಮಯೂರಿ ಕ್ಯಾತರಿ ಮುಂದೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ.

ಮುಂದೆ ಕೃಷ್ಣಲೀಲಾ' ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದ್ದರು ಈಕೆ. ಸಂತೋಷದ ಸಂಗತಿಯೆಂದರೆ ಈಕೆಯ ನಟನೆಯ ಮೊದಲ ಸಿನಿಮಾ ಯಶಸ್ವಿ ನೂರು ದಿನಗಳನ್ನು ಪೂರೈಸಿತ್ತು. ನಂತರ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಷ್ಟಕಾಮ್ಯ' ಸಿನಿಮಾದಲ್ಲಿ ನಾಯಕಿ ಅಚ್ಚರಿಯಾಗಿ ನಟಿಸಿರುವ ಈಕೆ ಕಿರಿತೆರೆ ನಟ ವಿಜಯ್ ಸೂರ್ಯ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಂತರ 'ನಟರಾಜ ಸರ್ವೀಸ್', 'ಕರಿಯಾ 2', 'ವೀಲ್ ಚೇರ್ ರೊಮಿಯೋ' ಹೀಗೆ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು ಮಯೂರಿ. ಈಕೆ ಅಭಿನಯದ 'ಕರಿಯಾ 2' ಹಿಂದಿಗೂ ಡಬ್ ಆಗಿತ್ತು.
ಇದೀಗ 'ನನ್ನ ದೇವ್ರು' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿರುವ ಈಕೆ ತಮ್ಮ ಮುದ್ದಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದಾರೆ. ಧಾರಾವಾಹಿಯಲ್ಲಿಯೂ ಮಯೂರಿ ಎನ್ನುವ ಪಾತ್ರಕ್ಕೆ ಜೀವ ತುಂಬುತ್ತಿರುವ ಈಕೆ ಅಪ್ಪಟ ಹಳ್ಳಿ ಹುಡುಗಿಯಾಗಿ ತೆರೆ ಮೇಲೆ ಮೋಡಿ ಮಾಡುತ್ತಿದ್ದಾರೆ. ಬಡ ಕುಟುಂಬದಲ್ಲಿ ಬೆಳೆಯುತ್ತಿರುವ ಈಕೆ ಅನಾಥೆಯೂ ಹೌದು. ಸ್ವಾಭಿಮಾನಿಯಾಗಿರುವ ಈಕೆ ಏನೇ ತಪ್ಪುಗಳು ನಡೆದರೂ ಅದನ್ನು ಧೈರ್ಯದಿಂದ ಪ್ರಶ್ನಿಸುವಷ್ಟು ದಿಟ್ಟೆ. ಊರನ್ನು ಕಾಯುವ, ಕಾಪಾಡುವ ಧಣಿಗಳು ಎಂದರೆ ಆಕೆಗೆ ತುಂಬಾ ಗೌರವ.

ಸಹಜ ನಟನೆಯಿಂದ ಮಯೂರಿ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ನಟಿ ತನ್ನ ವಯಸ್ಸಿಗಿಂತಲೂ ಸಣ್ಣವಾಗಿರುವಂತಹ ಪಾತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ. 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ನಾಯಕಿಯಾಗಿ ನಾನು ಕಿರುತೆರೆಗೆ ಕಾಲಿಟ್ಟಾಗ ಜನ ನನ್ನನ್ನು ಮೆಚ್ಚಿ ಪ್ರೋತ್ಸಾಹಿಸಿದ್ದರು. ಇದೀಗ ಒಂಭತ್ತು ವರ್ಷಗಳ ನಂತರ ಮತ್ತೆ 'ನನ್ನ ದೇವ್ರು' ಧಾರಾವಾಹಿಯ ನಾಯಕಿಯಾಗಿ ನಾನು ಕಿರುತೆರೆಗೆ ಮರಳಿದ್ದೇನೆ. ಈಗಲೂ ಜನ ಅದೇ ಪ್ರೀತಿಯಿಂದ ನೋಡುತ್ತಿದ್ದಾರೆ, ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳುತ್ತಾರೆ ಮಯೂರಿ ಕ್ಯಾತರಿ.
ಸಿನಿಮಾ, ಸೀರಿಯಲ್ ಹೊರತಾಗಿ ರಿಯಾಲಿಟಿ ಶೋವಿನಲ್ಲಿಯೂ ಕಮಾಲ್ ಮಾಡಿದ್ದಾರೆ ಮಯೂರಿ ಕ್ಯಾತರಿ. ಹೌದು, ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ಈಕೆ ಭಾಗವಹಿಸಿದ್ದಾರೆ. 'ಬಿಗ್ ಬಾಸ್ ಸೀಸನ್ 9'ರ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದ ಮಯೂರಿ ಕೇವಲ 28 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು. ಅಂದ ಹಾಗೇ ಬಿಗ್ ಬಾಸ್ ಮನೆಯಲ್ಲಿದ್ದ ಆ 28 ದಿನಗಳು ಆಕೆಯ ಪಾಲಿಗೆ ಕಷ್ಟ ಮಾತ್ರವಲ್ಲ, ಭಾವುಕವಾಗಿತ್ತು ಎಂದು ಆಕೆ ಈ ಹಿಂದೆ ಹೇಳಿಕೊಂಡಿದ್ದರು.


Click it and Unblock the Notifications











