Meghana Shankarappa: 'ಸೀತಾ ರಾಮ' ಧಾರಾವಾಹಿಯ ನೇತ್ರಾ ಪಾತ್ರಧಾರಿ ಯಾರು..? ಇವರ ನಟನಾ ಜರ್ನಿ ಬಗ್ಗೆ ಗೊತ್ತಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಸೀತಾರಾಮ'ವೂ ಒಂದು. ನಾಯಕಿ ಸೀತಾ ಹಾಗೂ ನಾಯಕ ರಾಮ್ ಜೊತೆಗೆ ಮುದ್ದು ಪುಟಾಣಿ ಸಿಹಿಯೂ ಕೂಡಾ ಕಿರುತೆರೆ ವೀಕ್ಷಕರ ಮನಸ್ಸು ಕದ್ದು ಬಿಟ್ಟಿದ್ದಾರೆ. ಟಿ ಆರ್ ಪಿ ಯಲ್ಲೂ ಉತ್ತಮ ರೇಟಿಂಗ್ ಪಡೆಯುತ್ತಿರುವ 'ಸೀತಾರಾಮ' ಧಾರಾವಾಹಿಯ ಕತೆ ಮಾತ್ರವಲ್ಲದೇ ಪ್ರತಿಯೊಂದು ಪಾತ್ರವೂ ಕೂಡಾ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
'ಸೀತಾರಾಮ' ಧಾರಾವಾಹಿಯಲ್ಲಿ ನಾಯಕಿ ಸೀತಾಳ ಬೆಸ್ಟ್ ಫ್ರೆಂಡ್ ಪ್ರಿಯಾ ಆಗಿ ಅಭಿನಯಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಮೇಘನಾ ಶಂಕರಪ್ಪ. ಮಾತು ಜೋರು, ಮನಸ್ಸು ಮೃದು ಆಗಿರುವ ಪ್ರಿಯಾ ತನ್ನ ಮನೆಯ ಪರಿಸ್ಥಿತಿಯಿಂದಾಗಿ ಸಾಕಷ್ಟು ನೋವನ್ನು ಅನುಭವಿಸಿದ್ದಾಳೆ. ಸೀತಾಳ ಜೊತೆಗೆ ರಾಮ್‌ನ ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರಿಯಾಗೆ ಕೋಟ್ಯಾಧೀಶ ಹುಡುಗನ ಕೈ ಹಿಡಿಯುವ ಕನಸು. ಒಳ್ಳೆಯ ಬದುಕು ಕಟ್ಟಿಕೊಳ್ಳುವ ಬಯಕೆಯಿರುವ ಈ ಬೆಡಗಿ ಹಿಂದೆ ಮುಂದೆ ಆಲೋಚನೆ ಮಾಡದೇ ಮಾತಾಡಿ ಪಜೀತಿಗೆ ಒಳಗಾಗುವಾಕೆ - ಇದು ಪ್ರಿಯಾ ಪಾತ್ರದ ಸಂಕ್ಷಿಪ್ತ ಪರಿಚಯ.

ಕೊನೆಯದಾಗಿ ನಟಿಸಿದ್ದು ಖಳನಾಯಕಿಯಾಗಿ!
'ಸೀತಾರಾಮ' ಧಾರಾವಾಹಿಯ ಪ್ರಿಯಾ ಪಾತ್ರದ ಮೊದಲು ಮೇಘನಾ ಶಂಕರಪ್ಪ ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.
ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ
ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ.

ಯಾವ ಪಾತ್ರ ಕೊಟ್ಟರೂ ನಟಿಸಲು ಸಿದ್ಧ
ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಇರಾದೆ.


Click it and Unblock the Notifications











