ಪ್ರತಿ ತಿಂಗಳ 17ಕ್ಕೆ ಪುನೀತ್ ಹುಟ್ಟುಹಬ್ಬ ಮಾಡಲು ನಿರ್ಧರಿಸಿದ ನಮ್ರತಾ ಗೌಡ; ಅಪ್ಪು ಫ್ಯಾನ್ಸ್ ಏನಂದ್ರು?
ನಟಿ ನಮ್ರತಾ ಗೌಡ ಗೊತ್ತಿಲ್ಲದವರಾರು ಹೇಳಿ? 'ಪುಟ್ಟ ಗೌರಿ ಮದುವೆ' ಧಾರಾವಾಹಿಯ ಹಿಮಾ ಆಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ನಮ್ರತಾ ಗೌಡ ಮುಂದೆ ಕಾಣಿಸಿಕೊಂಡಿದ್ದು ಇಚ್ಛಾಧಾರಿಣಿ ನಾಗಿಣಿಯಾಗಿ. 'ನಾಗಿಣಿ 2' ಧಾರಾವಾಹಿಯಲ್ಲಿ ಇಚ್ಛಾಧಾರಿಣಿ ನಾಗಿಣಿ ಶಿವಾನಿಯಾಗಿ ಕಾಣಿಸಿಕೊಂಡ ನಮ್ರತಾ ಗೌಡ ಬಿಗ್ ಬಾಸ್ ಮನೆಗೆ ಹೋದ ಮೇಲೆ ಮತ್ತಷ್ಟು ಫೇಮ್ ಪಡೆದಿದ್ದಾರೆ.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರಲ್ಲಿ ತಮ್ಮ ಖಡಕ್ ಪರ್ಸನಾಲಿಟಿಯನ್ನು ತೋರಿಸಿದ ನಮ್ರತಾ ಗೌಡ ಹಲವಾರು ಜನರಿಗೆ ಸ್ಪೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲ್ಲ. ಇದೀಗ ಕನ್ನಡದ ಪವರ್ ಸ್ಟಾರ್ ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದಂದು ಸಮಾಜ ಸೇವೆಗೆ ನಿಂತಿರುವ ನಮ್ರತಾ ಬಗ್ಗೆ ನೆಟ್ಟಿಗರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು, ಮಾರ್ಚ್ 17ನೇ ತಾರೀಕು ಅಪ್ಪು ಅವರ ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳು ಹಲವಾರು ರೀತಿಯಲ್ಲಿ ಈ ದಿನವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಅಪ್ಪು ಮಾಡಿದ ಸಮಾಜಮುಖಿ ಕೆಲಸಗಳನ್ನು ಅವರ ಅಭಿಮಾನಿಗಳು ಮುಂದುವರೆಸಿದ್ದಾರೆ. ಕಿರುತೆರೆ ನಟಿ ನಮೃತಾ ಗೌಡ ಕೂಡ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅಪ್ಪು ಹುಟ್ಟುಹಬ್ಬದ ದಿನ ಅಂದ್ರೆ ನಿನ್ನೆ (ಮಾರ್ಚ್ 17) ಸಹಾಯಕರಿಗೆ ಆಹಾರ ವಿತರಣೆ ಮಾಡಿ ಖುಷಿ ಪಟ್ಟಿದ್ದಾರೆ.
ವಿಶೇಷವೆಂದರೆ, ಅವರು ತಯಾರಿಸಿರುವ ಊಟದ ಮೇಲೆ "ನಿಮ್ಮ ಜೀವನದಲ್ಲಿ ದೀಪಾವಳಿ ಬಂದೇ ಬರುತ್ತೆ, ಪಟಾಕಿ ಯಾರದ್ದೆ ಆಗಿರಲಿ. ಹಚ್ಚೋರು ನೀವಾಗಿರಬೇಕು" ಎಂದು ಬರೆದು "ಪಿಆರ್ಕೆ" ಎಂಬ ಸ್ಟಿಕ್ಕಿ ನೋಟ್ ಹಾಕಲಾಗಿದೆ. ಈ ವಿಡಿಯೋವನ್ನು ನಮ್ರತಾ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಹಾಗೂ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಇನ್ನು ನಟಿ ನಮ್ರತಾ ಗೌಡ ಅಪ್ಪು ಹುಟ್ಟುಹಬ್ಬದ ದಿನ ವಿಡಿಯೋ ಮಾಡಿ, ಪ್ರತಿ ತಿಂಗಳ 17ನೇ ತಾರೀಖಿನಂದು ಇದೇ ರೀತಿ ಅಸಹಾಯಕರಿಗೆ ಆಹಾರ ಹಂಚುವ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಅಭಿಮಾನಿಯಾಗಿ ನಮ್ರತಾ ಗೌಡ ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
"ಇವತ್ತು ಮಾರ್ಚ್ 17, ನನ್ನ ಬಾಸ್, ಪುನೀತ್ ರಾಜ್‌ಕುಮಾರ್ ಸರ್ ಬರ್ತ್ಡೇ. ಇವತ್ತು ನನ್ನ ಕೈಲಾದಷ್ಟು ಸಹಾಯ ನಾನು ಮಾಡುತ್ತಿದ್ದೇನೆ. ಅಂದ ಹಾಗೇ ಇದನ್ನು ನಾನು ಪ್ರತಿ ತಿಂಗಳು 17ರಂದು ಕಂಟಿನ್ಯೂ ಮಾಡೋಣ ಎನ್ನುವ ನಿರ್ಧಾರ ಮಾಡಿದ್ದೇನೆ" ಎಂದು ಅವರು ವಿಡಿಯೋ ಪೋಸ್ಟ್‌ನಲ್ಲಿ ಕೂಡ ಹೇಳಿಕೊಂಡಿದ್ದಾರೆ.
ಜೊತೆಗೆ ನಟಿ ನಮ್ರತಾ ಗೌಡ ಕೈಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಹೆಸರಿನ ಟ್ಯಾಟು ಇದ್ದು ಅಭಿಮಾನಿಗಳಂತೂ ಆಶ್ಚರ್ಯಗೊಂಡಿದ್ದಾರೆ. ಈ ವಿಚಾರ ನಮಗೆ ಮೊದಲೇ ಗೊತ್ತಿರಲಿಲ್ಲ. ನೀವು ಅಪ್ಪು ಸರ್ ಅಭಿಮಾನಿ ಎಂಬ ವಿಷಯ ನಮಗೆ ಮೊದಲೇ ತಿಳಿದಿದ್ದರೆ, ನಿಮಗೆ ಬಿಗ್ ಬಾಸ್ ಮನೆಯಲ್ಲಿ ಇನ್ನೂ ಹೆಚ್ಚಿನ ವೋಟ್‌ಗಳು ಬರುತ್ತಿದ್ದವು ಎಂಬೆಲ್ಲ ಮಾತುಗಳು ಬಂದಿವೆ.
ಎಷ್ಟೋ ಜನ ಫೇಮ್‌ಗಾಗಿ ಅಪ್ಪು ಸರ್ ಅಭಿಮಾನಿ ಎಂದು ತೋರಿಸಿಕೊಳ್ಳುವುದುಂಟು. ಆದರೆ, ನೀವು ನಿಜವಾದ ಅಪ್ಪು ಅಭಿಮಾನಿ, ನಮ್ಮ ಪ್ರೀತಿಯ ಹಾಗೂ ಸಹಕಾರ ನಿಮ್ಮೊಂದಿಗೆ ಸದಾ ಇದೆ ಎಂದು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಹಾಗೂ ನಮ್ರತಾ ಗೌಡ ಅವರ ಫಾಲೋವರ್ಸ್ ಪೋಸ್ಟ್‌ನ ಕಮೆಂಟ್ ಬಾಕ್ಸ್‌ನಲ್ಲಿ ಶುಭ ಹಾರೈಸಿದ್ದಾರೆ.


Click it and Unblock the Notifications











