'ಶಾಂತಿ ನಿವಾಸ'ದ ಶಾಂತಿಯಾದ ನಿತ್ಯಾ ರಾಮ್; ಮತ್ತೆ ಕಿರುತೆರೆಯಲ್ಲಿ ಡಿಂಪಲ್ ಸಿಸ್ಟರ್
ಭಾರತೀಯ ನಟನಾ ರಂಗಕ್ಕೆ ಚಿರಪರಿಚಿತ ನಿತ್ಯಾ ರಾಮ್ ಅವರು ಪ್ರಧಾನವಾಗಿ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡ ನಟಿ ರಚಿತಾ ರಾಮ್ ಅವರ ಅಕ್ಕನೂ ಆಗಿರುವ ನಿತ್ಯಾ ತಮ್ಮದೇ ಆದ ಪ್ರೇಕ್ಷಕ ಬಳಗವನ್ನು ಹೊಂದಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬೆಂಕಿಯಲ್ಲಿ ಅರಳಿದ ಹೂವಿನ ಮುಖಾಂತರ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದ ನಿತ್ಯಾ ರಾಮ್ ಕನ್ನಡ ಪ್ರೇಕ್ಷಕರಿಂದ ಸಾಕಷ್ಟು ಜನ ಮನ್ನಣೆಯನ್ನು ಗಳಿಸಿದ್ದರು. ಅಲ್ಲದೆ ತಮಿಳು ಧಾರಾವಾಹಿ ನಂದಿನಿಯಿಂದಾಗಿ ಇನ್ನಷ್ಟು ಜನಪ್ರಿಯರಾಗಿದ್ದರು. ಆದರೆ ಮದುವೆಯ ನಂತರ ನಟನೆಯಿಂದ ದೂರ ಉಳಿದಿದ್ದ ನಟಿ ಇದೀಗ ಹೊಸ ಧಾರಾವಾಹಿ ಶಾಂತಿ ನಿವಾಸದ ಮೂಲಕ ಕಿರುತೆರೆಗೆ ಮರಳಿದ್ದಾರೆ.

ಜುಲೈ 22 ಅಂದರೆ ಇದೇ ಸೋಮವಾರದಿಂದ ರಾತ್ರಿ 8:30 ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಶಾಂತಿನಿವಾಸ' ಧಾರಾವಾಹಿಯಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಂತೆ ಸಣ್ಣದೊಂದು ಪರಿಚಯ ಇಲ್ಲಿದೆ ನೋಡಿ.
ಮುಖ್ಯಮಂತ್ರಿ ಚಂದ್ರು, ನಿತ್ಯಾ ರಾಮ್ ,ಚಂದ್ರಕಲಾ ಮೋಹನ್, ಪ್ರಿಯಾಂಕಾ, ಅರ್ಜುನ್ ಯೋಗಿ, ವಿಶ್ವಾಸ್ ಭಾರಾದ್ವಾಜ್, ಇಳಾ ವಿಟ್ಲ,ಕೀರ್ತಿ ವೆಂಕಟೇಶ್, ಶಿವಾನಿ ಹೀಗೆ ಬಹುದೊಡ್ಡ ತಾರಾಗಣ ಶಾಂತಿನಿವಾಸದಲ್ಲಿ ಕಾಣಿಸಿಕೊಳ್ಳಲಿದೆ. ವಿಶೇಷವೆಂದರೆ ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸಿ ನಟನೆಯಿಂದ ಹೊರ ಹೋಗಿದ್ದ ಕೆಲ ಕಲಾವಿದರು ಈ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡಲಿದ್ದಾರೆ.
ಅಂದ ಹಾಗೆ ನಿತ್ಯಾ ರಾಮ್ ಶಾಂತಿ ನಿವಾಸದ ಯಜಮಾನ ಗೋವರ್ಧನರಾಯರ ಮನಮೆಚ್ಚಿದ ಮುದ್ದಿನ ಸೊಸೆಯಾಗುವುದರೊಂದಿಗೆ ಇಡೀ ಮನೆಯನ್ನು ಸಂಭ್ರಮದಿಂದ ಇರುವ ಹಾಗೆ ನೋಡಿಕೊಳ್ಳುವ ಕಥಾನಾಯಕಿ ಶಾಂತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮನೆಯ ಒಳಗೂ ಹೊರಗೂ ದುಡಿಯುವ ಇವರ ಪಾತ್ರವು ನಮ್ಮ ಸಮಾಜದ ಗೃಹಿಣಿಯರ ಪ್ರತಿಬಿಂಬದಂತಿದೆ.

ಆದರೆ, ಎಲ್ಲರಿಗೂ ಖುಷಿಯನ್ನು ಹಂಚುವ 'ಶಾಂತಿ'ಗೆ ವಿಲನ್ ಕ್ಯಾರೆಕ್ಟರ್ ಆಗಿ 'ಮಂತ್ರ' ಎಂಬ ಪಾತ್ರ ಕಾಣಿಸಿಕೊಳ್ಳಲಿದೆ. ಸಮಾಧಾನ, ಕಷ್ಟ, ಹಗೆತನ, ಸೋಲು-ಗೆಲುವು ಎಲ್ಲವನ್ನೂ ಉಳಿದ ಧಾರಾವಾಹಿಗಳಂತೆ ಪ್ರಸ್ತುತ ಪಡಿಸಲಿರುವ 'ಶಾಂತಿ ನಿವಾಸ' ವಿಭಿನ್ನ ಕಥಾ ಹಂದರದ ಮೂಲಕ ಗಮನ ಸೆಳೆಯುವ ನಿರೀಕ್ಷೆ ಇದೆ.
ಎಸ್. ಗೋವಿಂದ್ ಅವರ ನಿರ್ದೇಶನ ಮತ್ತು ನಿರ್ಮಾಣ ಈ ಧಾರಾವಾಹಿಗಿದೆ. ಕತೆ ಹಾಗೂ ಚಿತ್ರಕತೆಯನ್ನು ಮುತ್ತು ಸೆಲ್ವಮ್ ಬರೆದಿದ್ದಾರೆ. ಶ್ರೀಕಾಂತ್ ಅವರ ಸಂಭಾಷಣೆ, ರುದ್ರಮುನಿ ಬೆಳೆಗೆರೆಯವರ ಛಾಯಾಗ್ರಹಣ, ಅಂಬರೀಶ್ ಲೋನಾರಿ ಅವರ ಸಂಕಲನದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ ಪ್ರೇಕ್ಷಕರ ಮನಗೆಲ್ಲುತ್ತಾ ನೋಡಬೇಕಿದೆ.


Click it and Unblock the Notifications











