'ಕುಸುಮ' ಪಾತ್ರದ ಮೂಲಕ ಮತ್ತೆ ಕಿರುತೆರೆ ಜನಮನ ಗೆದ್ದ ನಟಿ ಪದ್ಮಜಾ ರಾವ್!
'ಮೂಡಲ ಮನೆ' ಖ್ಯಾತಿಯ ಪದ್ಮಜಾ ರಾವ್ ಯಾರಿಗೆ ಗೊತ್ತಿಲ್ಲ ಹೇಳಿ?! ಒಂದು ಕಾಲದಲ್ಲಿ ಬಹಳ ಫೇಮಸ್ ಆಗಿದ್ದಂತಹ 'ಮೂಡಲ ಮನೆ' ಧಾರಾವಾಹಿ ವೈಶಾಲಿ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಬಂದಿರುವ ವಿಚಾರ ಕಿರುತೆರೆ ಪ್ರಿಯರಿಗೆ ತಿಳಿದೇ ಇದೆ. ಅದರಲ್ಲೂ ಅತ್ತಿಗೆ ಪಾತ್ರ ಮಾಡಿದಂತಹ ಪದ್ಮಜಾ ರಾವ್ ಅವರಂತೂ ಎಲ್ಲರ ಮನ ಗೆದ್ದ ಕನ್ನಡದ ನಟಿಯಾಗಿದ್ದರು.
ತದನಂತರ 'ಮುಂಗಾರು ಮಳೆ' ಮುಂತಾದ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ, 'ಚಿ ಸೌ ಸಾವಿತ್ರಿ' ಅಂತಹ ಕೆಲವು ಅದ್ಭುತ ಧಾರಾವಾಹಿಗಳಲ್ಲೂ ನಟಿಸಿರುವ ಪದ್ಮಜಾ ರಾವ್ ಅವರು ಈಗ ಮತ್ತೆ ತಮ್ಮ ಉತ್ಕೃಷ್ಟ ನಟನೆಯೊಂದಿಗೆ ವಾಪಸ್ ಆಗಿದ್ದಾರೆ.ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಭಾಗ್ಯಲಕ್ಷ್ಮಿ'ಯಲ್ಲಿ ಭಾಗ್ಯನ ಅತ್ತೆ ಕುಸುಮಾ ಆಗಿ ಅಭಿನಯಿಸುತ್ತಿರುವ ಪದ್ಮಜಾ ರಾವ್ ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

ನನ್ನ ಪಾತ್ರಕ್ಕೆ ಹಲವು ಮುಖಗಳಿವೆ
ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ನಟಿ ಪದ್ಮಜಾ ರಾವ್ ಅವರು "ಮೊದಲಿಗೆ ನನಗೆ ಈ ಪಾತ್ರ ಅಷ್ಟೇನೂ ಹಿಡಿಸಲಿಲ್ಲ. ಯಾವುದೋ ಒಂದು ಪ್ರಾಜೆಕ್ಟ್ ನಲ್ಲಿ ಇರುವಂತಹ ತಾಯಿ ಪಾತ್ರವನ್ನು ಇದರಲ್ಲೂ ಕೊಟ್ಟಿದ್ದಾರೆ. ಹೊರತಾಗಿ ಬಹಳ ವಿಶೇಷವೇನಿಲ್ಲ ಎಂದೆ ಎನಿಸಿತು. ಆದರೆ ಪಾತ್ರದ ಶೂಟಿಂಗ್ ಶುರುವಾಗಿ 10 ದಿನಗಳ ನಂತರ ನನಗೆ ನಿಜವಾಗಿ ಈ ಪಾತ್ರದ ಪೊಟೆನ್ಶಿಯಲ್ ಏನೆಂದು ಅರ್ಥವಾಗುತ್ತಾ ಹೋಯಿತು. ಈ ಪಾತ್ರಕ್ಕೆ ಬಹಳಷ್ಟು ಬೇರೆ ಬೇರೆ ಮುಖಗಳಿವೆ, ಇದು ವಿಭಿನ್ನವಾಗಿದೆ ಎಂದು ನನಗೆ ನಿಧಾನಕ್ಕೆ ಅರ್ಥವಾಯಿತು" ಎಂದು ಹೇಳುತ್ತಾರೆ ಪದ್ಮಜಾ ರಾವ್.

ತಾಯಿಯಾಗಿ ಹೊಸ ಇಮೇಜ್ ಸಿಕ್ಕಿದೆ
ಸಾಮಾನ್ಯವಾಗಿ ಎಲ್ಲಾ ನಿರ್ದೇಶಕರು ನನಗೆ ಒಂದು ಒಳ್ಳೆಯ ತಾಯಿ ಪಾತ್ರವನ್ನು ಕೊಡುತ್ತಾರೆ. ಕಿರುತೆರೆಯಲಾಗಲೀ ಬೆಳ್ಳಿತೆರೆಯಲಾಗಲೀ ಪ್ರೇಕ್ಷಕರು ನನ್ನನ್ನು ಒಬ್ಬ ಪ್ರೀತಿ ಮಾಡುವ ಮುಗ್ಧ ಮನಸ್ಸಿನ ಸಾಧು ಸ್ವಭಾವದ ತಾಯಿಯಾಗಿ ನೋಡಿದ್ದಾರೆ. ಆದರೆ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ತಂಡ ನನಗೆ ತಾಯಿಯಾಗಿಯೇ ಇನ್ನೊಂದು ಹೊಸ ರೂಪವನ್ನು ಆವಿಷ್ಕರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಕುಸುಮ ಬಹಳ ಒರಟಾಗಿ ನಡೆಕೊಳ್ಳುವಂತಹ ತಾಯಿ. ಆದರೆ ಕೆಲಸ ಸನ್ನಿವೇಶಗಳಲ್ಲಿ ಆಕೆಯ ಮೃದುತ್ವ ಹೊರಗೆ ಬರುತ್ತದೆ. ನನಗೆ ಈ ಅಂಶ ಬಹಳ ಇಷ್ಟವಾಯಿತು. ಆಕೆಯ ಒರಟು ಸ್ವಭಾವಕ್ಕೂ ಒಂದಷ್ಟು ಕಾರಣಗಳಿರುತ್ತವೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು" ಎಂದಿದ್ದಾರೆ.

'ಈ ಪಾತ್ರಕ್ಕೆ ಒಗ್ಗಿಕೊಳ್ಳಲು ಬಹಳಷ್ಟು ಶ್ರಮ ಪಟ್ಟಿದ್ದೇನೆ'
"ನಾನು ನನ್ನ ಇಡೀ ಜನ್ಮದಲ್ಲಿ ಈವರೆಗೂ ಕುಸುಮ ಪಾತ್ರದ ರೀತಿಯ ಯಾವುದೇ ವ್ಯಕ್ತಿಯನ್ನು ಭೇಟಿಯಾಗಿಲ್ಲ! ಅಷ್ಟು ಒರಟಾಗಿ ನಡೆದುಕೊಳ್ಳುವವರನ್ನು ನಾನು ಇದುವರೆಗೂ ನೋಡೇ ಇಲ್ಲ. ಹಾಗಾಗಿ ಮೊದಲಿಗೆ ನನಗೆ ಕುಸುಮ ಪಾತ್ರ ಬಹಳ ಕಷ್ಟವಾಯಿತು. ಈ ರೀತಿಯೂ ಜನ ಇರ್ತಾರ? ಎಂಬುದೇ ನನಗೆ ದೊಡ್ಡ ಪ್ರಶ್ನೆಯಾಗಿತ್ತು. ಕ್ರಮೇಣ ನಾನು ಹಾಕಿದ ಶ್ರಮ ನನಗೆ ಫಲ ಕೊಡುತ್ತಾ ಬಂತು. ಜನರು ನನ್ನನ್ನು ಕುಸುಮ ಪಾತ್ರದಲ್ಲಿ ಉತ್ತಮವಾಗಿ ಒಪ್ಪಿಕೊಂಡರು. ಬಹುಶಃ ಇವಾಗ ನನಗೆ ಸಿಗುತ್ತಿರುವಂತಹ ಪ್ರಶಂಸೆಯನ್ನು ಖಂಡಿತವಾಗಿಯೂ ನಾನು ಒಪ್ಪಿಕೊಳ್ಳಲೇಬೇಕು. ಯಾಕೆಂದರೆ ನಾನು ಈ ಪಾತ್ರಕ್ಕೆ ಹೊಂದಿಕೊಳ್ಳಲು ಬಹಳಷ್ಟು ಶ್ರಮ ಪಟ್ಟಿದ್ದೇನೆ" ಎಂದು ತಮ್ಮ ಸಂತೃಪ್ತಿ ವ್ಯಕ್ತಪಡಿಸಿದರು.

'ಭಾಗ್ಯಲಕ್ಷ್ಮಿ' ತಂಡಕ್ಕೆ ನಾನು ಬಹಳ ಋಣಿ
"ಒಟ್ಟಿನಲ್ಲಿ ಹೇಳುವುದಾದರೆ ಪ್ರೇಕ್ಷಕರೇ ನಮಗೆ ನಿಜವಾದ ವಿಮರ್ಶಕರು. ಅವರು ಹೇಗೆ ನಮ್ಮನ್ನು ಒಪ್ಪಿಕೊಳ್ಳುತ್ತಾರೆ ಹಾಗೂ ಅವರು ಹೇಗೆ ನಮ್ಮನ್ನು ವಿಮರ್ಶಿಸುತ್ತಾರೆ ಎನ್ನುವುದರ ಮೇಲೆ ಆ ಪಾತ್ರದ ಬೆಲೆ ನಿಂತಿರುತ್ತದೆ. ಈವರೆಗೂ ಮಾಡಿರದಂತಹ ಒಂದು ಅದ್ಭುತ ಪಾತ್ರವನ್ನು ನನಗೆ ನೀಡಿದ 'ಭಾಗ್ಯಲಕ್ಷ್ಮಿ' ತಂಡಕ್ಕೆ ನಾನು ಬಹಳ ಋಣಿಯಾಗಿದ್ದೇನೆ. ಈ ಪಾತ್ರವನ್ನು ಇನ್ನಷ್ಟು ಎಕ್ಸ್ಪ್ಲೋರ್ ಮಾಡೋದಿಕ್ಕೆ ಇಷ್ಟಪಡುತ್ತೇನೆ. ಎಲ್ಲರೂ ಇದೇ ರೀತಿ ಸಹಕರಿಸುತ್ತಾರೆ ಎಂದು ನಂಬಿದ್ದೇನೆ" ಎಂದು ಪ್ರೇಕ್ಷಕರ ಬಗ್ಗೆ ತಮ್ಮ ಮಾತುಗಳನ್ನಾಡಿದ್ದಾರೆ ನಟಿ ಪದ್ಮಜಾ ರಾವ್.


Click it and Unblock the Notifications











