'ಬ್ರಹ್ಮಗಂಟು' ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಪ್ರೀತಿ ಶ್ರೀನಿವಾಸ್
ವಿಭಿನ್ನ ರೀತಿಯ ಧಾರಾವಾಹಿಗಳ ಮೂಲಕ ಮನ ಸೆಳೆಯುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ ಮಗದೊಂದು ಹೊಸ ಧಾರಾವಾಹಿ ಶುರುವಾಗುತ್ತಿದೆ. ಹೌದು, 'ಬ್ರಹ್ಮಗಂಟು' ಹೆಸರಿನ ಧಾರಾವಾಹಿಯೊಂದು ಶೀಘ್ರದಲ್ಲಿ ಶುರುವಾಗಲಿದೆ. ಅಕ್ಕನಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿರುವ ತಂಗಿಯ ಕತೆ ಇದು. ಈ ಧಾರಾವಾಹಿಯಲ್ಲಿ ನಾಯಕನ ಅತ್ತಿಗೆಯಾಗಿ ನಟಿಸುತ್ತಿದ್ದಾರೆ ಪ್ರೀತಿ ಶ್ರೀನಿವಾಸ್. ಆ ಮೂಲಕ ಕಿರುತೆರೆಗೆ ಆಕೆ ಕಂಬ್ಯಾಕ್ ಆಗುತ್ತಿದ್ದಾರೆ.
ಈ ಹಿಂದೆ ಪ್ರೀತಿ ಶ್ರೀನಿವಾಸ್ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ಹಿರಿ ಸೊಸೆ ಸರಸ್ವತಿಯ ಪಾತ್ರಕ್ಕೆ ಜೀವ ತುಂಬಿದ್ದರು ಪ್ರೀತಿ ಶ್ರೀನಿವಾಸ್. 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ಅದ್ಭುತವಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಪ್ರೀತಿ ಶ್ರೀನಿವಾಸ್ ನಂತರ ನಿರೂಪಕಿಯಾಗಿಯೂ ಗಮನ ಸೆಳೆದಿದ್ದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುವರ್ಣ ಸಂಕಲ್ಪ' ಕಾರ್ಯಕ್ರಮದ ನಿರೂಪಕಿಯಾಗಿ ಈಕೆ ಕಾಣಿಸಿಕೊಂಡಿದ್ದರು. ನಂತರ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ ಪ್ರೀತಿ ಶ್ರೀನಿವಾಸ್ ಇದೀಗ 'ಬ್ರಹ್ಮಗಂಟು' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ.
'ಸರಸ್ವತಿ-ಲಕ್ಷ್ಮಿ ಪ್ರಿಯೆ' ಧಾರಾವಾಹಿಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಈಕೆ ಮುಂದೆ 'ಜೀವನ ಚೈತ್ರ' ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ಸರಸ್ವತಿ ಪಾತ್ರದಲ್ಲಿ ನಟಿಸುವ ಅವಕಾಶವನ್ನು ಈಕೆ ಪಡೆದುಕೊಂಡಿದ್ದು ಅಪ್ಪಟ ಹಳ್ಳಿ ಹುಡುಗಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದರು.

ಇನ್ನು ಪ್ರೀತಿ ಶ್ರೀನಿವಾಸ್ ಅವರು ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. 'ಗಣೇಶ ಮತ್ತೆ ಬಂದ' ಸಿನಿಮಾದಲ್ಲಿ ಅನಂತ್‌ನಾಗ್ ಮಗಳಾಗಿ ಈಕೆ ಕಾಣಿಸಿಕೊಂಡಿದ್ದರು. ತದ ನಂತರ ರೂಪ ಅಯ್ಯರ್ ನಿರ್ದೇಶನದ 'ಚಂದ್ರ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದ ಇವರು ನಾಯಕ ಪ್ರೇಮ್ ತಂಗಿಯಾಗಿ ಮೋಡಿ ಮಾಡಿದ್ದರು.
ಕನ್ನಡ ಕಿರುತೆರೆ ಜೊತೆಗೆ ತೆಲುಗಿನ 'ಅನ್ನಪೂರ್ಣ','ರಾಮ ಸೀತಾ ಎಕ್ಕಡ', 'ಗಂಗಮಂಗ' ತೆಲುಗು ಧಾರಾವಾಹಿಗಳಲ್ಲಿ ನಟಿಸಿರುವ ಪ್ರೀತಿ ಶ್ರೀನಿವಾಸ್ ಸದ್ಯ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜಗದ್ಧಾತ್ರಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











