Priyanka Chincholi: ಬೀದಿ ನಾಯಿಗಳ ಕಂಡು ಮರುಗಿದ ನಟಿ: ಆರೈಕೆ ಬಗ್ಗೆ ಜಾಗೃತಿ
ಸೋಶಿಯಲ್ ಮೀಡಿಯಾ ಇಂದು ಬರೀ ಫೋಟೋ ಶೇರ್ ಅಷ್ಟೇ ಅಲ್ಲದೆ ಬಹಳಷ್ಟು ಸಮಾಜ ಜಾಗೃತಿ ಕಾರ್ಯಕ್ರಮಗಳಿಗೂ ಅವಕಾಶ ಮಾಡಿಕೊಡುತ್ತಿದೆ. ಫೇಸ್ ಬುಕ್, ಇನ್‌ಸ್ಟಾಗ್ರಾಂ ಇತ್ಯಾದಿ ಆಪ್‌ಗಳ ಮೂಲಕ ತಮ್ಮ ತಮ್ಮ ಅಕೌಂಟ್‌ಗಳಲ್ಲಿ ಬಹಳಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಜನರು ಪರಸ್ಪರ ಹಲವಾರು ವಿಷಯಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಂತೆಯೇ ನಟಿ ಪ್ರಿಯಾಂಕಾ ಚಿಂಚೋಳಿಯವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬೀದಿ ನಾಯಿಗಳ ಬಗ್ಗೆ ಮಾತನಾಡಿದ್ದು ಇದೀಗ ನೆಟ್ಟಿಗರಿಂದ ಬಹಳ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ನಟಿ ಪ್ರಿಯಾಂಕ ಚಿಂಚೋಳಿಯವರು ತಮ್ಮ ಶೂಟಿಂಗ್ ಸ್ಪಾಟ್ ಬಳಿಯಲ್ಲಿ ಒಂದು ನಾಯಿಮರಿಯನ್ನು ನೋಡಿದ್ದರಂತೆ. ಒಂದು ಮರಕ್ಕೆ ಕಟ್ಟಿ ಹಾಕಿದ್ದ ಆರು ತಿಂಗಳ ನಾಯಿಮರಿಯನ್ನು ಯಾರೂ ಏನೂ ವಿಚಾರಿಸದ್ದನ್ನು ನೋಡಿ ಮನಕಲುಕಿದ ನಟಿ ಪ್ರಿಯಾಂಕ ಚಿಂಚೋಳಿ ಅವರು ಅಕ್ಕ ಪಕ್ಕದ ಮನೆಗಳಲ್ಲಿ ನಾಯಿಯ ಬಗ್ಗೆ ವಿಚಾರಿಸಿದ್ದಾರೆ. ಆದರೆ ಯಾರೂ ಅದರ ಜವಾಬ್ದಾರಿ ತೆಗೆದುಕೊಳ್ಳದ ಕಾರಣ ನಟಿ ಈ ಬಗ್ಗೆ ನೊಂದಿದ್ದಾರೆ.

ಬೀದಿ ನಾಯಿಗಳಿಗೂ ಮನಸ್ಸಿದೆ ಎಂದ ಪ್ರಿಯಾಂಕಾ
ಈ ಬಗ್ಗೆ ತಮ್ಮ ಅಕೌಂಟ್‌ನಲ್ಲಿ ಬರೆದುಕೊಂಡ ಅವರು, "ಇತ್ತೀಚಿಗೆ ನಾಯಿ ಸಾಕುವುದು ಒಂದು ಟ್ರೆಂಡ್ ಆಗಿದೆ. ಆದರೆ ಹೆಚ್ಚಿನವರೆಲ್ಲರೂ ಬ್ರೀಡ್ ಜಾತಿ ನಾಯಿಗಳನ್ನು ಅಷ್ಟೇ ಸಾಕುತ್ತಾರೆ. ಬೀದಿ ನಾಯಿಗಳಿಗೆ ಕೊನೆ ಪಕ್ಷ ಒಂದು ಬಿಸ್ಕೆಟ್ ಅನ್ನು ಕೂಡ ಹಾಕಲು ಜನ ಮುಂದಾಗುವುದಿಲ್ಲ. ಈ ರೀತಿ ಮಾಡಿದರೆ ಸಮಾಜದ ಸ್ವಾಸ್ಥ್ಯ ಖಂಡಿತ ಏರುಪೇರು ಆಗುತ್ತದೆ. ಬೀದಿ ನಾಯಿಗಳಿಗೂ ಮನಸ್ಸಿದೆ ಏನಾದರೂ ಕೆಟ್ಟ ಘಟನೆಗಳು ನಡೆದಾಗ ಅವುಗಳಿಗೂ ಮಾನಸಿಕವಾಗಿ ನೋವಾಗುತ್ತದೆ" ಎಂದು ಬರೆದುಕೊಂಡಿದ್ದಾರೆ ಪ್ರಿಯಾಂಕಾ.
ಇದರ ಜೊತೆಗೆ "ಆ ಪುಟ್ಟ ನಾಯಿ ಮರಿಯ ಸುತ್ತಮುತ್ತ ದೊಡ್ಡ ದೊಡ್ಡ ನಾಯಿಗಳಿದ್ದವು. ಹಾಗೆ ಬಿಟ್ಟಿದ್ದರೆ ಆ ದೊಡ್ಡ ನಾಯಿಗಳು ಪುಟ್ಟಮರಿಗೆ ಯಾವ ರೀತಿ ತೊಂದರೆಗಳನ್ನು ಬೇಕಾದರೂ ಕೊಡಬಹುದಿತ್ತು. ಈ ರೀತಿಯ ಸಣ್ಣಪುಟ್ಟ ವಿಚಾರಗಳನ್ನು ನಾವು ಗಮನಿಸಿದಾಗ ಮಾತ್ರ ಮನುಷ್ಯರೆನಿಸಿಕೊಳ್ಳುತ್ತೇವೆ. ನನ್ನ ಪ್ರಕಾರ, ಪ್ರಾಣಿ ಪ್ರೀತಿ ಮಾಡದವರು ಮನುಷ್ಯರೇ ಅಲ್ಲ" ಎಂದಿದ್ದಾರೆ.
ಮೂಕ ಪ್ರಾಣಿಗಳಿಗೆ ಸಹಾಯ ಮಾಡಿ
ನಮ್ಮ ಕೈಲಿ ಹೆಚ್ಚೇನು ಮಾಡುವುದಕ್ಕೆ ಆಗದಿದ್ದರೂ ಒಂದು ಪ್ಯಾಕ್ ಬಿಸ್ಕೆಟ್ ಆದರೂ ಹಾಕಬಹುದು ಅಥವಾ ಏನಾದರೂ ರೋಗ ರುಜಿನ ಕಂಡರೆ ಯಾವುದೇ ಮೆಡಿಕಲ್ ಸ್ಟೋರ್‌ನಲ್ಲಿ ಸಿಗುವ ಅದಕ್ಕೆ ಸರಿಯಾದ ಪೌಡರ್ ಅನ್ನು ಹಾಕಬಹುದು. ಅಷ್ಟನ್ನಾದರೂ ಮಾಡೋಣ. ದೇವರು ನಮಗೆ ಬುದ್ಧಿ ಕೊಟ್ಟಿದ್ದಾರೆ ಆ ಬುದ್ಧಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಮಾತು ಬಾರದ ಈ ಮೂಕ ಪ್ರಾಣಿಗಳಿಗೆ ಸಹಾಯ ಮಾಡಬೇಕು. ಗಣೇಶ ಚತುರ್ಥಿಯಂದು ಆನೆಯನ್ನು ಗಣೇಶ ಎಂದು ಪೂಜಿಸುವ ನಾವು ಬೇರೆ ಪ್ರಾಣಿಗಳನ್ನೇಕೆ ಅಲಕ್ಷಿಸುತಿದ್ದೇವೆ?!" ಎಂದು ತಮ್ಮ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.

ಈ ರೀತಿ ತಮ್ಮ ಪ್ರಾಣಿ ಪ್ರೇಮವನ್ನು ವ್ಯಕ್ತಪಡಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಿದ ನಟಿಯ ಬಗ್ಗೆ ಎಲ್ಲಾ ಕಡೆಯಿಂದ ಪ್ರಶಂಸೆಗಳು ಬರುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಗಳಾಗುತ್ತಿವೆ. ಪ್ರಾಣಿ ಪ್ರೀತಿ ಹಾಗೂ ಬೀದಿ ನಾಯಿಗಳ ಆರೈಕೆಯು ನಮ್ಮ ಮಾನವ ಜವಾಬ್ದಾರಿಗಳಲ್ಲೊಂದು ಎನ್ನುವುದನ್ನು ಮರೆಯದಿರೋಣ.


Click it and Unblock the Notifications











