'ದೂರ ತೀರ ಯಾನ'ಕ್ಕೆ ಹೊರಟ 'ಕೃಷ್ಣ ತುಳಸಿ'; ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಪ್ರಿಯಾಂಕಾ ಕುಮಾರ್
ಮಂಸೋರೆ ನಿರ್ದೇಶನದ 'ದೂರ ತೀರ ಯಾನ' ಸಿನಿಮಾದಲ್ಲಿ ನಾಯಕಿಯಾಗಿ ನಟಿ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ನಾಯಕಿ ತುಳಸಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಿಯಾಂಕಾ ಕುಮಾರ್ ನಂತರ ಕಾಣಿಸಿಕೊಂಡಿದ್ದು ಸಿನಿಮಾದಲ್ಲಿ.
ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸಿನಿಪ್ರಿಯರನ್ನು ರಂಜಿಸಿರುವ ಪ್ರಿಯಾಂಕಾ ಕುಮಾರ್ ಇದೀಗ ಮ್ಯೂಸಿಕಲ್ ಲವ್ ಸ್ಟೋರಿ 'ದೂರ ತೀರ ಯಾನ'ದಲ್ಲಿ ಅಭಿನಯಿಸುತ್ತಿದ್ದಾರೆ. ವಾಸ್ತವಕ್ಕೆ ಹತ್ತಿರವಿರುವ ಇದು ಒಂದು ಸುಂದರ ಪ್ರೇಮಕಥೆಯೂ ಹೌದು. ಮಲೆನಾಡ ಬೆಡಗಿ ಪ್ರಿಯಾಂಕಾಗೆ ಎಳವೆಯಿಂದಲೂ ನಟನೆಯತ್ತ ವಿಶೇಷ ಒಲವು. ಅಂದ ಹಾಗೇ ತನ್ನ ಸಹಜ ನಟನೆಯ ಮೂಲಕ ಬಣ್ಣದ ಲೋಕದಲ್ಲಿ ನಟನಾ ಕಪನ್ನು ಪಸರಿಸುತ್ತಿರುವ ಈಕೆ ನಟಿಯಾಗಲು, ಬಣ್ಣದ ಲೋಕದಲ್ಲಿ ಮೋಡಿ ಮಾಡಲು ವಾರಾಂತ್ಯದಲ್ಲಿ ನೋಡುತ್ತಿದ್ದ ನಾಟಕಗಳೇ ಕಾರಣ.

ದೊಡ್ಡವಳಾದ ಮೇಲೆ ನಟನೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಬೇಕು ಡಂದು ನಿರ್ಧರಿಸಿದ್ದ ಪ್ರಿಯಾಂಕಾ ಕುಮಾರ್ ಮೊದಲ ಬಾರಿ ಆಡಿಶನ್ ನೀಡಿದಾಗ ಆಕೆ ಪಿಯುಸಿ ವಿದ್ಯಾರ್ಥಿನಿ. 'ಕೃಷ್ಣ ತುಳಸಿ' ಯ ತುಳಸಿಯಾಗಿ ಕಿರುತೆರೆಗೆ ಕಾಲಿಟ್ಟು ಮೋಡಿ ಮಾಡಿದ ಈಕೆ ಮುಂದೆ ಕಾಣಿಸಿಕೊಂಡಿದ್ದು ತಮಿಳು ಕಿರುತೆರೆಯಲ್ಲಿ. ಬರೋಬ್ಬರಿ ಮೂರು ವರ್ಷಗಳ ಕಾಲ ತಮಿಳು ಕಿರುತೆರೆಯಲ್ಲಿ ಮೋಡಿ ಮಾಡಿದ ಪ್ರಿಯಾಂಕಾ ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮಾನರ್ಸ್' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.
'ಬ್ಯಾಡ್ ಮಾನರ್ಸ್' ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾಗೆ ದುನಿಯಾ ಸೂರಿ ಅವರೊಂದಿಗೆ ಕೆಲಸ ಮಾಡಿರುವ ಖುಷಿಯಿದೆ. ಆಡಿಶನ್ ಮೂಲಕ 'ಬ್ಯಾಡ್ ಮಾನರ್ಸ್' ಸಿನಿಮಾಕ್ಕೆ ಆಯ್ಕೆಯಾದ ಪ್ರಿಯಾಂಕಾಗೆ ಶೂಟಿಂಗ್‌ಗೆ ಹೋಗುವ ತನಕವೂ ಸಿನಿಮಾದ ಕಥೆಯ ಬಗ್ಗೆ ಚೂರು ಗೊತ್ತಿರಲಿಲ್ಲವಂತೆ. ಶೂಟಿಂಗ್ ಶುರುವಾಗುವ ಮೊದಲು ಸೂರಿ ಅವರು ಸಿನಿಮಾದ ಬಗ್ಗೆ, ಪಾತ್ರದ ಬಗ್ಗೆ ಹೇಳಿದರಂತೆ. ಹಾಗಾಗಿ ನಟಿಸಲು ಸುಲಭವಾಯಿತು ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಕುಮಾರ್ ಹೇಳಿದ್ದರು.

'ಬ್ಯಾಡ್ ಮಾನರ್ಸ್' ಸಿನಿಮಾದ ನಂತರ ಹಿಂತಿರುಗಿ ನೋಡದ ಪ್ರಿಯಾಂಕಾ ಕುಮಾರ್ ತದ ನಂತರ 'ಅದ್ಧೂರಿ ಲವರ್', 'ದಿಲ್ದರ್' ಮತ್ತು ಇತ್ತೀಚೆಗೆ ಬಿಡುಗಡೆಗೊಂಡಿರುವ 'ರುದ್ರ ಗರುಡ ಪುರಾಣ' ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಪ್ರಿಯಾಂಕಾ ನಟನೆಯಲ್ಲಿ ಪಕ್ವತೆಯನ್ನು ಪಡೆಯಲು ಕಿರುತೆರೆಯೇ ಕಾರಣ.
ಹೌದು, ನಟನೆ ಎಂದರೆ ಏನು ಎಂದು ತಿಳಿಯದ ಆಕೆಗೆ ನಟನೆ ಕಲಿಸಿದ್ದು ಕಿರುತೆರೆ. ನಟನೆಯ ಕುರಿತು ಯಾವುದೇ ಒಂದು ತರಬೇತಿಯನ್ನು ಪಡೆದಿರದ ಈಕೆ ಇಂದು ನಟಿಯಾಗಿ ಕಿರುತೆರೆ ಮಾತ್ರವಲ್ಲದೇ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಕಿರುತೆರೆ ಎಂಬುದು ಪ್ರಿಯಾಂಕಾ ಅವರ ಅಭಿಪ್ರಾಯ.
ನಟಿಸಲು ಇಂತಹದ್ದೇ ಪಾತ್ರಗಳು ಬೇಕೆಂದಿಲ್ಲ ಎಂದು ಹೇಳುವ ಪ್ರಿಯಾಂಕಾ ಕುಮಾರ್‌ಗೆ ಸಿನಿ ವೀಕ್ಷಕರು ಮೆಚ್ಚುವ ಪಾತ್ರಕ್ಕೆ ಜೀವ ತುಂಬುವ ಬಯಕೆ. ಮಾತ್ರವಲ್ಲದೇ ನಟಿಸುವ ಪಾತ್ರ ಯಾವುದು ಎನ್ನುವುದಕ್ಕಿಂತಲೂ ನಟಿಸುವ ಪಾತ್ರದಲ್ಲಿ ನಟನೆಗೆ ಅವಕಾಶ ಇದೆಯಾ ಎಂಬುದಷ್ಟೇ ಆಕೆಗೆ ಮುಖ್ಯ. ಇದರ ಜೊತೆಗೆ ಪ್ರಯೋಗಾತ್ಮಕ ಸಿನಿಮಾದಲ್ಲಿ ನಟಿಸಬೇಕೆಂದು ಆಕೆಯ ಬಹು ದೊಡ್ಡ ಬಯಕೆ. ದೂರ ತೀರಾ ಯಾನ ಸಿನಿಮಾ ಮೂಲಕ ಈಕೆಯ ಕನಸು ಈಡೇರಿದೆ.


Click it and Unblock the Notifications











