ಥಿಯೇಟರ್‌ಗೆ ಜನರು ಯಾಕೆ ಬರುತ್ತಿಲ್ಲ? 'ರಂಗಿತರಂಗ' ನಟಿ ರಾಧಿಕಾ ನಾರಾಯಣ್ ಕೊಟ್ಟ ಕಾರಣವೇನು?
'ರಂಗಿತರಂಗ' ಸಿನಿಮಾ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ನಂತರ 'ಕಾಫಿತೋಟ', 'ಮುಂದಿನ ನಿಲ್ದಾಣ' ಇತ್ಯಾದಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಥಿಯೇಟರ್‌ಗಳಿಗೆ ಜನರು ಸಿನಿಮಾ ನೋಡುವುದಕ್ಕೆ ಬರುತ್ತಿರಲ್ಲ ಅನ್ನೋ ಅಳಲು ಇದೆ. ಅದಕ್ಕೆ ಕಾರಣವೇನು ಅನ್ನೋದನ್ನು ನಟಿ ರಾಧಿಕಾ ನಾರಾಯಣ್ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಓಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿರುವುದು ಹೆಚ್ಚೆಚ್ಚು ಆಗಿರುವುದರಿಂದ, ಹಾಗೆಯೇ ಜನರು ರೀಲ್ಸ್‌ಗೆ ಅಡಿಕ್ಟ್ ಆಗುತ್ತಿರುವುದರಿಂದ ಸಿನಿಮಾ ಕಡೆ ಜನರ ಆಕರ್ಷಣೆ ಕಮ್ಮಿಯಾಗುತ್ತಿದೆ ಎಂಬುದು ರಾಧಿಕಾ ನಾರಾಯಣ್ ಅವರ ಅಭಿಪ್ರಾಯ.

"ಇತ್ತೀಚಿಗೆ ಓಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ಸಿನಿಮಾಗಳು ಬರುತ್ತಿದ್ದು, ಜನರು ಥಿಯೇಟರ್‌ಗೆ ಬರುವುದು ಕಡಿಮೆಯಾಗಿದೆ. ಈ ಕಾರಣದಿಂದ ಯಾವಾಗ ಬೇಕಾದರೂ ಆವಾಗ ಸಿನಿಮಾವನ್ನು ನೋಡುವ ಸ್ವಾತಂತ್ರ್ಯ ಜನರಿಗಿರುವುದರಿಂದ ಸಿನಿಮಾಗಳಿಗೆ ಡಿಮಾಂಡ್ ಕಮ್ಮಿ ಆಗುತ್ತಿದೆ ಎಂಬುದು ನನ್ನ ಅಭಿಪ್ರಾಯ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದರ ಜೊತೆಗೆ "ಆದರೂ ಈ ನಡುವೆ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಬೇಕೆಂದು ಥಿಯೇಟರ್ ಬರುವ ಒಂದು ಜನರ ಗುಂಪು ಖಂಡಿತ ಇದೆ. ಅಷ್ಟೇ ಅಲ್ಲದೆ ಜನರು ಇಂದು ರೀಲ್ಸ್ ಗೆ ಹೆಚ್ಚು ಅಡಿಕ್ಟ್ ಆಗಿದ್ದಾರೆ. ಹಾಗಾಗಿ ಕೆಲವು ಸೆಕೆಂಡ್‌ಗಳ ರೀಲ್ಸ್ ಕಡೆಗೆ ಗಮನ ಕೊಡುವ ಜನರು 3 ಗಂಟೆಗಳ ಸಿನಿಮಾ ನೋಡುವ ತಾಳ್ಮೆ ಸಹನೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಸಿನಿಮಾ ಡೈಲಾಗ್ ಕಥೆ ಎಲ್ಲವೂ ಜನರ ಗಮನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಶ್ರಮಿಸಬೇಕಾಗಿದೆ " ಎಂದು ನಟಿ ರಾಧಿಕಾ ನಾರಾಯಣ್ ಅಭಿಪ್ರಾಯ ಪಟ್ಟಿದ್ದಾರೆ.
"ನಟನೆ ನಮಗೆ ಬಹಳಷ್ಟು ವಿಚಾರಗಳನ್ನು ಹೇಳಿಕೊಡುತ್ತದೆ. ಅದರಲ್ಲೂ ರಂಗಭೂಮಿಯಲ್ಲಿ ಕೆಲಸ ಮಾಡುವವರಾಗಿದ್ದರೆ ಹೊಸ ಹೊಸ ಆಯಾಮಗಳನ್ನು ತಿಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ನಟರಿಗೆ ಸಿನಿಮಾ, ಧಾರಾವಾಹಿ ಅಥವಾ ಕ್ಯಾಮೆರಾ ಮುಂದಿನ ನಟನೆಗಿಂತಲೂ ಥಿಯೇಟರ್ ನಟನೆ ಬಹಳಷ್ಟು ಸಹಾಯ ಮಾಡುತ್ತದೆ" ಎಂದು ನಾಟಕ ರಂಗದ ಬಗ್ಗೆ ಹೇಳಿದ್ದಾರೆ ನಟಿ ರಾಧಿಕಾ ನಾರಾಯಣ್.

"ಇಂದು ನಾವು ಒಂದೇ ಭಾಷೆಗೆ ಕಮಿಟ್ ಆಗಿ ಕೂರಲು ಸಾಧ್ಯವಿಲ್ಲ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ರೋಲ್‌ಗಳು ಸಿಕ್ಕಾಗ ನಾವು ಅಲ್ಲಿಗೆ ಹೋಗಲೇ ಬೇಕಾಗುತ್ತದೆ. ಇಲ್ಲವಾದರೆ ಅವಕಾಶಗಳು ಕಮ್ಮಿ ಒಳ್ಳೆ ಪಾತ್ರಗಳು ನಮ್ಮ ಕೈ ತಪ್ಪುತ್ತವೆ. ಹಾಗಾಗಿ ಬೇರೆ ಬೇರೆ ಭಾಷೆ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡುವುದು ಯಾವುದೇ ರೀತಿಯಿಂದಲೂ ತಪ್ಪಲ್ಲ. ಒಟ್ಟಿನಲ್ಲಿ ನಮ್ಮ ಭಾಷೆಯ ಬಗ್ಗೆ ನಮಗೆ ಸದಾ ಪ್ರೀತಿಯ ಅಭಿಮಾನವಿರಬೇಕು ಅಷ್ಟೇ" ಎಂದು ಭಾಷೆ ಹಾಗೂ ಸಿನಿಮಾ ಇಂಡಸ್ಟ್ರಿ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ನಟಿ ರಾಧಿಕಾ ನಾರಾಯಣ್.
ಪಾತ್ರಗಳ ಬಗ್ಗೆ ಮಾತನಾಡಿದ ನಟಿ ರಾಧಿಕಾ "ನನ್ನ ಪ್ರಕಾರ ಇಂದು ವಿಭಿನ್ನವಾದ ರೋಲ್ ಗಳ ಅವಶ್ಯಕತೆ ಇದೆ. ಒಂದಷ್ಟು ಸ್ತ್ರೀ ನಿರ್ದೇಶಕರು, ಬರಹಗಾರರು ಮುಂಬರಬೇಕು ಎಂಬುದು ನನ್ನ ಅಭಿಪ್ರಾಯ. ಒಬ್ಬ ಸ್ತ್ರೀ ಮಾತ್ರ ಇನ್ನೊಬ್ಬ ಸ್ತ್ರೀಯ ಭಾವನೆಯನ್ನು ಸರಿಯಾಗಿ ಅರ್ಥೈಸಿ ಪದ ರೂಪಕ್ಕೆ ತರಲು ಸಾಧ್ಯ. ಹಾಗಾಗಿ ನಮಗೆ ಹೆಚ್ಚಿನ ಸ್ತ್ರೀ ಡೈರೆಕ್ಟ್ ಹಾಗು ಬರಹಗಾರರು ಇದ್ದರೆ, ಹೊಸ ರೀತಿಯ ಶ್ರೀ ಪಾತ್ರಗಳು ಬೆಳಕಿಗೆ ಬರುತ್ತದೆ. ಮೇಲ್ ಡೈರೆಕ್ಟರ್ಸ್ ಎಷ್ಟೇ ಸಿನಿಮಾಗಳನ್ನು ಮಾಡಿ ಎತ್ತರಕ್ಕೆರಿದ್ದರು ಫೀಮೇಲ್ ಡೈರೆಕ್ಟರ್ ದೃಷ್ಟಿಕೋನ ಬೇರೆಯದೆ ಆಗಿರುತ್ತದೆ. ಹಾಗಾಗಿ ಇಂದು ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಇಂಡಸ್ಟ್ರಿಯ ಬೇರೆ ಬೇರೆ ಫೀಲ್ಡ್‌ನಲ್ಲಿ ಪಾಲ್ಗೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ"ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











