ಐಟಿ ಉದ್ಯೋಗಿಯಾಗ್ಬೇಕು ಅಂತ ಬಯಸಿದ್ದವ್ರು ನಟಿಯಾಗಿದ್ದೇಗೆ? ಖಳನಾಯಕಿ ಪಾತ್ರ ರಜನಿ ಪ್ರವೀಣ್‌ಗೆ ಯಾಕಿಷ್ಟ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ಬಾರಮ್ಮ' ಕೂಡಾ ಒಂದು. ವಿಭಿನ್ನ ರೀತಿಯ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಈ ಧಾರಾವಾಹಿ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಾಯಕ ವೈಷ್ಣವ್‌ನ ಸೋದರತ್ತೆ ಸುಪ್ರಿತಾ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿಯ ಹೆಸರು ರಜನಿ ಪ್ರವೀಣ್. ತಮ್ಮ ಸಹಜ ನಟನೆಯ ಜೊತೆಗೆ ಸ್ಟೈಲಿಶ್ ಲುಕ್ ಮೂಲಕ ತೆರೆಯ ಮೇಲೆ ಮೋಡಿ ಮಾಡುತ್ತಿರುವ ರಜನಿಗೆ ನೆಗೆಟಿವ್ ರೋಲ್‌ನಲ್ಲಿ ನಟಿಸುವುದೆಂದರೆ ಇಷ್ಟ.
"ಇಲ್ಲಿಯ ತನಕ ನಾನು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ನಟಿಸಿದ್ದೇನೆ ನಿಜ. ಆದರೆ, ನಟಿಸಿರುವಂತಹ ಹೆಚ್ಚಿನ ಧಾರಾವಾಹಿಗಳಲ್ಲಿ ನಾನು ಖಳನಾಯಕಿಯಾಗಿ ಅಭಿನಯಿಸಿದ್ದೇ ಹೆಚ್ಚು. ಮೊದಲನೆಯದಾಗಿ ನೆಗೆಟಿವ್ ರೋಲ್‌ನಲ್ಲಿ ಅಭಿನಯಕ್ಕೆ ಪ್ರಾಮುಖ್ಯತೆ ಜಾಸ್ತಿ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಖಳನಾಯಕಿಯ ಪಾತ್ರ ದೊರೆತಾಗ ನಾನು ಖುಷಿಯಿಂದಲೇ ಒಪ್ಪಿಕೊಳ್ಳುತ್ತೇನೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆ ರಜನಿ ಪ್ರವೀಣ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ಧಾರಾವಾಹಿಯಲ್ಲಿ ನಾಯಕ, ನಾಯಕಿಯ ಪಾತ್ರ ಎಷ್ಟೋ ಮುಖ್ಯವೋ ಅಷ್ಟೇ ಮುಖ್ಯ ನೆಗೆಟಿವ್ ಪಾತ್ರ ಎಂದು ನನ್ನ ಅಭಿಪ್ರಾಯ. ಅಂದರೆ ನಾಯಕ, ನಾಯಕಿಯ ಹೊರತಾಗಿ ಅದರಷ್ಟೇ ಪ್ರಾಮುಖ್ಯತೆ ಇರುವ ಪಾತ್ರವೆಂದರೆ ಅದು ಖಳನಾಯಕ/ನಾಯಕಿ ಅರ್ಥಾತ್ ನೆಗೆಟಿವ್ ಪಾತ್ರ. ಆದ ಕಾರಣ ಖಳನಾಯಕಿಯ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಬಂದಾಗ ಪ್ರಾಮುಖ್ಯತೆ ಇರುವ ಪಾತ್ರ ಎಂದು ಸಂತಸದಿಂದಲೇ ನಟಿಸುತ್ತೇನೆ" ಎಂದು ಹೇಳುತ್ತಾರೆ ರಜನಿ ಪ್ರವೀಣ್.
"ನಾನು ಮೊದಲ ಬಾರಿಗೆ ಖಳನಾಯಕಿಯಾಗಿ ಅಭಿನಯಿಸಿದ್ದು ಯುಗಳಗೀತೆ ಧಾರಾವಾಹಿಯಲ್ಲಿ. ನಂತರ ನಿಹಾರಿಕಾ, ರಂಗನಾಯಕಿ, ಆಕಾಶದೀಪ ಹಾಗೂ ರಾಜಿ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿ ನಟಿಸಿದೆ. ಇದೀಗ ಸುಪ್ರೀತಾ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದು ಅದು ಕೂಡಾ ಖಳನಾಯಕಿಯ ಪಾತ್ರ ಎಂದು ಹೇಳಿದರೆ ತಪ್ಪಾಗಲಾರದು" ಎಂದು ನಟನಾ ಜರ್ನಿಯ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
"ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಸುಪ್ರೀತಾ ಪಾತ್ರವನ್ನು ಜನ ತುಂಬಾನೇ ಇಷ್ಟಪಡುತ್ತಿದ್ದಾರೆ. ಆರಂಭದಲ್ಲಿ ಸುಪ್ರೀತಾ ಪಾತ್ರ ಸಂಪೂರ್ಣ ನೆಗೆಟಿವ್ ಶೇಡ್ ಹೊಂದಿತ್ತು. ಆದರೆ, ಈಗ ಒಂದಷ್ಟು ಪಾಸಿಟಿವ್ ಶೇಡ್ ಇದೆ. ಈಗಲೂ ಕೂಡಾ ಕಿರುತೆರೆ ವೀಕ್ಷಕರು ಆ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಸ್ಕ್ರಿಪ್ಟ್ ರೈಟರ್ ಜಯಾ ಆಳ್ವ" ಎಂದು ನಗು ನಗುತ್ತಾ ಹೇಳುತ್ತಾರೆ ರಜನಿ ಪ್ರವೀಣ್.

"ಆಚಾನಕ್ ಆಗಿ ದೊರೆತ ಅವಕಾಶದಿಂದ ನಟನಾ ಲೋಕದ ನಂಟು ಬೆಳೆಸಿಕೊಂಡವಳು ನಾನು. ಸತ್ಯ ಹೇಳಬೇಕು ಎಂದರೆ, ನನಗೆ ನಟಿಯಾಗುವ ಕನಸಿರಲಿಲ್ಲ. ಐಟಿ ಉದ್ಯೋಗಿಯಾಗಬೇಕು ಎಂದು ಬಯಸಿದ್ದೆ. ಅದು ಆಗಲಿಲ್ಲ. ನಟನೆ ಕೈ ಹಿಡಿಯಿತು. ಈಗ ಖಳನಾಯಕಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದೇನೆ. ಒಳ್ಳೆಯ ಅವಕಾಶ, ಉತ್ತಮ ಪಾತ್ರ ದೊರೆತರೆ ಸಿನಿಮಾದಲ್ಲಿ ನಟಿಸಬೇಕು ಎಂಬ ಮನಸ್ಸಿದೆ" ಎಂದು ಸಂದರ್ಶನದ ವೇಳೆ ಮಾತನಾಡುವಾಗ ರಜನಿ ಪ್ರವೀಣ್ ಹೇಳಿಕೊಂಡಿದ್ದಾರೆ.


Click it and Unblock the Notifications











