Actress Rajini: ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರಕ್ಕೆ 'ಹಿಟ್ಲರ್ ಕಲ್ಯಾಣ' ನಟಿ ರಜಿನಿ ಗ್ರೀನ್ ಸಿಗ್ನಲ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಉಧೋ ಉಧೋ ಶ್ರೀರೇಣುಕಾ ಯಲ್ಲವ್ವ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿಯಲ್ಲಿ ಇದೀಗ ಅಗ್ನಿಶಿಖಾ ಎನ್ನುವ ರಾಕ್ಷಸಿಯ ಪಾತ್ರವೊಂದು ಸೇರಿಕೊಂಡಿದ್ದು ಕಿರುತೆರೆ ನಟಿ ರಜಿನಿ ಅವರು ಆ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರಾ ಆಲಿಯಾಸ್ ಪ್ರಾರ್ಥನಾ ಎರಡು ಪಾತ್ರಗಳನ್ನು ನಿಭಾಯಿಸುತ್ತಿರುವ ರಜಿನಿ ಇದೀಗ ರಾಕ್ಷಸಿಯಾಗಿ ವೀಕ್ಷಕರನ್ನು ಭಯ ಬೀಳಿಸಲಿದ್ದಾರೆ.

"ಅಗ್ನಿಶಿಖಾ ತುಂಬಾ ಚಾಲೆಂಜಿಗ್ ಆಗಿರುವಂತಹ ಪಾತ್ರ. ಇದಕ್ಕಿಂತಲೂ ಮುಖ್ಯವಾಗಿ ಅದು ತುಂಬಾ ಒರಟು ಸ್ವಭಾವದ ಪಾತ್ರವೂ ಹೌದು. ರಾಕ್ಷಸಿಯಾಗಿರುವ ಅಗ್ನಿಶಿಖಾ ರೂಪ ಬದಲಿಸಿಕೊಂಡಿದ್ದರೂ ಆಕೆಯ ಹಾವ ಭಾವ ರಗಡ್ ಆಗಿರಬೇಕು. ಅದರಲ್ಲಿ ಯಾವುದೇ ಬದಲಾವಣೆಯಾಗಬಾರದು. ಅದೇ ಕಾರಣದಿಂದ ಆ ಪಾತ್ರಕ್ಕೆ ಜೀವ ತುಂಬುವುದು ನನ್ನ ಪ್ರಕಾರ ಚಾಲೆಂಜ್ ಹೌದು"ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಳ್ಳುತ್ತಾರೆ ರಜಿನಿ.
"ಅಗ್ನಿಶಿಖಾ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಮೊದಲಿಗೆ ಗೊಂದಲವಿತ್ತು. ಸಹಜವಾಗಿ ರಾಕ್ಷಸಿಯ ಪಾತ್ರ ಎಂದಾಗ ಮುಖವನ್ನು ವಿಕಾರವನ್ನಾಗಿ ಮಾಡಿ ತೋರಿಸುತ್ತಾರೆ ಎಂಬ ಅಳುಕಿತ್ತು. ಆದರೆ ರಾಕ್ಷಸಿಯ ರೂಪಾಂತರದ ಪಾತ್ರವಿದು ಎಂದು ತಿಳಿದು ಖುಷಿಯಾಯಿತು. ರಾಕ್ಷಸಿಯ ಪಾತ್ರವಾಗಿದ್ದರೂ ತೆರೆಯ ಮೇಲೆ ಸುಂದರವಾಗಿ ಕಾಣಿಸಿಕೊಳ್ಳುವ ಕಾರಣ ಸಮಾಧಾನವಾಯಿತು. ಹಾಗಾಗಿ ಸಂತಸದಿಂದಲೇ ಒಪ್ಪಿಕೊಂಡೆ" ಎಂದು ಹೇಳುತ್ತಾರೆ ರಜಿನಿ.
"ಇದೇ ಮೊದಲ ಬಾರಿಗೆ ನಾನು ಪೌರಾಣಿಕ ಧಾರಾವಾಹಿಯೊಂದರ ಭಾಗವಾಗುತ್ತಿದ್ದೇನೆ. ರಾಕ್ಷಸಿಯ ಪಾತ್ರವಾಗಿದ್ದರೂ ಅದೊಂದು ಪೌರಾಣಿಕ ಧಾರಾವಾಹಿ ಎಂಬ ಕಾರಣದಿಂದಲೇ ನಾನು ಅಗ್ನಿಶಿಖಾ ಪಾತ್ರವನ್ನು ಒಪ್ಪಿಕೊಂಡೆ. ಜೊತೆಗೆ ನನಗೆ ಪೌರಾಣಿಕ ಧಾರಾವಾಹಿಯಲ್ಲಿ ಮಾತನಾಡುವ ಭಾಷೆಯೂ ಇಷ್ಟ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ರಜಿನಿ ಹೇಳಿದ್ದಾರೆ.

ಇನ್ನು ದಶಕಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮೃತವರ್ಷಿಣಿ' ಧಾರಾವಾಹಿಯ ಅಮೃತ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ನಟಿಸಿದ್ದರೂ ನಟನೆಯ ಮೂಲಕ ಮನ ಸೆಳೆದ ಬೆಡಗಿ. 'ಅಮೃತವರ್ಷಿಣಿ' ಧಾರಾವಾಹಿಯ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿ 'ಆತ್ಮಬಂಧನ'ದಲ್ಲಿಯೂ ಈಕೆ ಬಣ್ಣ ಹಚ್ಚಿದ್ದರು.
ಇದರ ಜೊತೆಗೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪಾರ್ಥನಾ ಆಲಿಯಾಸ್ ಅಂತರಾ ಆಗಿ ನಟಿಸುತ್ತಿರುವ ಈಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೂಪರ್ ಕ್ವೀನ್' ರಿಯಾಲಿಟಿ ಶೋವಿನಲ್ಲಿಯೂ ಕಾಣಿಸಿಕೊಂಡಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2' ಸ್ಪರ್ಧಿಯಾಗಿ ಮೋಡಿ ಮಾಡಿದ ಈಕೆ 'ಮಜಾ ಟಾಕೀಸ್ ಮೂಲಕವೂ ವೀಕ್ಷಕರನ್ನು ರಂಜಿಸಿದ್ದರು.
'ನಾರಿಗೊಂದು ಸೀರೆ', 'ಶಾಂತಂ ಪಾಪಂ', 'ಪಾಕಶಾಲೆ' ಕಾರ್ಯಕ್ರಮದ ನಿರೂಪಕರಾಗಿಯೂ ಮೋಡಿ ಮಾಡಿರುವ ರಜಿನಿ 'ಅಂಬುಜಾ' ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲೂ ಕಮಾಲ್ ಮಾಡಿದ್ದಾರೆ.


Click it and Unblock the Notifications











