ಮತ್ತೆ ಕಿರುತೆರೆಗೆ ಬಂದ 'ಕನ್ನಡತಿ'ಯ ರಮೋಲಾ; ಯಾವುದಾ ಆ ಧಾರಾವಾಹಿ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಸೀತಾರಾಮ'. ಈ ಧಾರಾವಾಹಿಯು ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಧಾರಾವಾಹಿಯಲ್ಲಿ ಈಗಾಗಲೇ ಹೊಸ ಟ್ವಿಸ್ಟ್‌ಗಳು ಕಂಡುಬರುತ್ತಿದೆ. ಹೌದು, ನಾಯಕ ರಾಮ ಹಾಗೂ ನಾಯಕಿ ಸೀತಾ ಇನ್ನೇನು ಒಂದಾಗುತ್ತಾರೆ. ನಾಯಕ ರಾಮ ನಾಯಕಿ ಸೀತಾಳಿಗೆ ತನ್ನ ಪ್ರೀತಿಯ ವಿಷಯ ಹೇಳಿ ಪ್ರಪೋಸ್ ಮಾಡುತ್ತಾನೆ ಅನ್ನುವ ಸನ್ನಿವೇಶವಿತ್ತು.
ಆ ಸಮಯದಲ್ಲಿ ಆತನ ಮಾಜಿ ಪ್ರೇಯಸಿ ಚಾಂದಿನಿಯ ಆಗಮನವಾಗಿದೆ. ರಾಮನ ಬದುಕುನಲ್ಲಿ ಕಳೆದುಹೋಗಿರುವ ಹಳೆಯ ಕಹಿಯ ಪ್ರೀತಿ ಮತ್ತೆ ಕಣ್ಣ ಮುಂದೆ ಬಂದಿದೆ. ರಾಮ ಆಸ್ಪತ್ರೆಯಲ್ಲಿ ಇರುವಾಗಲೇ ಆತನನ್ನು ನೋಡಲು ಚಾಂದಿನಿ ಬಂದಿದ್ದಾಳೆ. ಅಂದ ಹಾಗೇ ನಟಿ ರಮೋಲಾ ಚಾಂದಿನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಆಕೆಯ ಆಗಮನದಿಂದ ಕಥೆಗೆ ಇನ್ನು ಯಾವ್ಯಾವ ಟ್ವಿಸ್ಟ್ ಸಿಗಲಿದೆ ಎಂದು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ.

ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು ರಮೋಲಾ. ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಕಮಾಲ್ ಮಾಡಿದ್ದ ಈಕೆ ಕಾರಣಾಂತರಗಳಿಂದ ಧಾರಾವಾಹಿಯಿಂದ, ಸಾನಿಯಾ ಪಾತ್ರದಿಂದ ಹೊರಬಂದಿದ್ದರು.
ಮುಂದೆ ಜೀ ಕನ್ನಡ ವಾಹಿನಿಯ 'ಅಮೃತಧಾರೆ' ಧಾರಾವಾಹಿಯಲ್ಲಿ ರಶ್ಮಿಕಾ ಎನ್ನುವ ಅತಿಥಿ ಪಾತ್ರದಲ್ಲಿ ನಟಿ ರಮೋಲಾ ನಟಿಸಿದ್ದರು. ಅಂದ ಹಾಗೇ ಅದು ಬರೀ ಎರಡು ದಿನದ ಸಂಚಿಕೆಯಾಗಿತ್ತು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆದರು ರಮೋಲಾ.

'ಅಂತರಪಟ' ಧಾರಾವಾಹಿಯಲ್ಲಿ ವೆಡ್ಡಿಂಗ್ ಪ್ಲಾನರ್ ಸಾರಾ ಆಗಿ ರಮೋಲಾ ನಟಿಸಿದ್ದರು. ದೀಪಿಕಾ ದಾಸ್ ಅವರು ವೆಡ್ಡಿಂಗ್ ಪ್ಲಾನರ್ ಸಮೀರಾ ಆಗಿ ಕಾಣಿಸಿಕೊಂಡಿದ್ದು, ಅವರ ತಂಗಿ ಸಾರಾಳಾಗಿ ನಟಿ ರಮೋಲಾ ನಟಿಸುತ್ತಿದ್ದಾರೆ. ಅಂದ ಹಾಗೇ ಇದು ನೆಗೆಟಿವ್ ಛಾಯೆ ಇರುವ ಪಾತ್ರವೂ ಹೌದು ಅನ್ನಿ. ಒಟ್ಟಿನಲ್ಲಿ, ಖಳನಾಯಕಿಯಾಗಿ ಆಗಿ ನಟಿಸುತ್ತಿರುವ ರಮೋಲಾ ಇದೀಗ ಚಾಂದಿನಿಯಾಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವುದು ಸೀರಿಯಲ್ ಪ್ರಿಯರಿಗೆ ಖುಷಿ ತಂದಿದೆ.
ರಮೋಲಾ ಅವರು ಚಾಂದಿನಿ ಪಾತ್ರದ ಮೂಲಕ ಕಿರುತೆರೆಗೆ ಮರಳಿ ಬಂದಿರುವ ಖುಷಿ ಒಂದೆಡೆಯಾದರೆ ಸೀತಾರಾಮ ಪ್ರೀತಿಗೆ ಮುಳ್ಳಾಗುತ್ತಾಳಾ ಎಂಬ ಚಿಂತೆ ಇನ್ನೊಂದೆಡೆ. ಒಟ್ಟಿನಲ್ಲಿ ಏನೆಲ್ಲಾ ಆಗುತ್ತದೆ ಎಂಬ ಟೆನ್ಷನ್ ವೀಕ್ಷಕರಲ್ಲಿ ಮನೆ ಮಾಡಿದೆ. ಚಾಂದಿನಿ ಪಾತ್ರ ಇನ್ನು ಇಡೀ ಧಾರಾವಾಹಿಯುದ್ದಕ್ಕೂ ಇದೆಯಾ? ಅಥವಾ ಅದು ಕೂಡಾ ಕೇವಲ ಅತಿಥಿ ಪಾತ್ರವಾ? ಎಂಬ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.


Click it and Unblock the Notifications











