'ಅಭಿ' ಶೂಟಿಂಗ್.. ಪುನೀತ್ ಕ್ಯಾರವಾನ್: ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಅಪ್ಪು ನೆನೆದು ರಮ್ಯಾ ಭಾವುಕ
ಪುನೀತ್ ರಾಜ್‌ಕುಮಾರ್ ಅವರು ಬಾಲ ನಟನಾಗಿ ಸಾಕಷ್ಟು ಹೆಸರನ್ನ ಗಳಿಸಿದ್ದರು. 'ಅಪ್ಪು' ಸಿನಿಮಾ ಮೂಲಕ ನಾಯಕ ನಟನಾಗಿ ಪುನೀತ್ ರಾಜಕುಮಾರ್ ಪಾದಾರ್ಪಣೆ ಮಾಡಿದರು. ಇದು ರಕ್ಷಿತಾ ಅವರಿಗೆ ಮೊದಲ ಚಲನಚಿತ್ರವಾಗಿತ್ತು. ನಂತರ 2003ರಲ್ಲಿ 'ಅಭಿ' ಸಿನಿಮಾದ ಮೂಲಕ ನಟಿ ರಮ್ಯಾ ಅವರನ್ನು ಪಾರ್ವತಮ್ಮ ರಾಜಕುಮಾರ್‌ರವರು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದರು.
ವೀಕೆಂಡ್ ವಿಥ್ ರಮೇಶ್‌ನಲ್ಲಿ ಯಾವ ರೀತಿಯಲ್ಲಿ ಪಾರ್ವತಮ್ಮ ರಾಜಕುಮಾರ್ ನನಗೆ ರಮ್ಯಾ ಎಂದು ಹೆಸರಿಟ್ಟರು ಎಂದು ರಮ್ಯಾ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಪ್ಪು ಅವರ ಜೊತೆಗೆ ನಟಿಸಿದ ಪ್ರತಿಯೊಂದು ಕ್ಷಣವನ್ನ ಮೆಲುಕು ಹಾಕಿದ್ದಾರೆ. ರಕ್ಷಿತಾ ಹಾಗೂ ನನಗೂ ತುಂಬಾ ಕಾಂಪಿಟೇಶನ್ ಇತ್ತು ಎಂದು ಖುಷಿಯಿಂದಲೇ ಕಾಲೆಳೆದುಕೊಂಡಿದ್ದಾರೆ. 'ಅಭಿ' ರಮ್ಯಾಗೆ ಚೊಚ್ಚಲ ಸಿನಿಮಾವಾಗಿದ್ದು ಈ ಸಿನಿಮಾದ ಮೂಲಕ ಕನ್ನಡ ಇಂಡಸ್ಟ್ರಿಗೆ ರಮ್ಯಾ ಅವರು ಪಾದಾರ್ಪಣೆಯನ್ನು ಮಾಡಿದರು.

ದೊಡ್ಮನೆಯ ಹುಡುಗನ ಜೊತೆಗೆ ನಟಿಸಿದ್ದು ರಮ್ಯಾಗೆ ಮತ್ತಷ್ಟು ಹೆಸರನ್ನ ತಂದು ಕೊಟ್ಟಿತು. 'ಅಭಿ' ಚಲನಚಿತ್ರದ ವೇಳೆ ಒಂದು ಸಾಂಗ್‌ಗೆ ರಮ್ಯಾ ಗೆ ಡ್ಯಾನ್ಸ್ ಮಾಡಲು ಬರಲಿಲ್ಲ. ಆದರೂ ಸಹ ಒಂದು ದಿನ ತೆಗೆದುಕೊಂಡು ಅಪ್ಪು ಅವರೇ ಹುರಿದುಂಬಿಸಿ ಡ್ಯಾನ್ಸ್ ಮಾಡಿಸಿದರು ಎಂದು ರಮ್ಯಾ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ.
ಡ್ಯಾನ್ಸ್‌ಗೆ ಬೇಕಾದ ಕಾಸ್ಟ್ಯೂಮ್ ಚೇಂಜ್ ಮಾಡಲು ಒಂದೇ ಒಂದು ಕ್ಯಾರವಾನ್ ಇತ್ತು. ಅದನ್ನು ಅಪ್ಪುಗಾಗಿ ಮಾತ್ರ ಮೀಸಲಿಡಲಾಗಿತ್ತು. ಈ ರೀತಿ ಆದರೆ ಡ್ಯಾನ್ಸ್ ಮಾಡಲು ತುಂಬಾ ತೊಂದರೆ ಯಾಗುತ್ತದೆ ಎಂದು ಅರಿತ ಚಿನ್ನಿ ಮಾಸ್ಟರ್ ಅಪ್ಪು ಅವರ ಬಳಿಗೆ ತೆರಳಿ ಬಳಸಲು ಅನುವು ಮಾಡಿಕೊಡುವಂತೆ ಕೇಳಿಕೊಂಡಿದ್ದರು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ರಮ್ಯಾಗೆ ಇದು ನಿಮ್ಮದೇ ಕ್ಯಾರವಾನ್ ಬನ್ನಿ ಎಂದು ಹೇಳುವ ಮೂಲಕ ಸರಳತೆಯ ಸಾಮ್ರಾಟ ಎನಿಸಿಕೊಂಡಿದ್ದಾರೆ. 'ಅಭಿ' ಸಿನಿಮಾದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯುವಾಗ ಬೇರೆಯವರ ಮನೆಯಲ್ಲಿ ರಮ್ಯಾ ಕಾಸ್ಟ್ಯೂಮ್ ಅನ್ನು ಚೇಂಜ್ ಮಾಡಿದ್ದರ ಬಗ್ಗೆ ವೀಕೆಂಡ್ ವಿತ್ ರಮೇಶ್ ನಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರೀಕರಣ ಹಾಗೂ ಬೇರೆ ಬೇರೆ ಸನ್ನಿವೇಶಗಳನ್ನು ಮೆಲುಕನ್ನ ಹಾಕಿದ್ದಾರೆ. ಅಪ್ಪು ಅವರು ಯಾವ ರೀತಿ ಬೇರೆ ಕಲಾವಿದರ ಜೊತೆ ಬೆರೆಯುತ್ತಿದ್ದರು ಎಂಬುದನ್ನು ಸಹ ಸ್ಯಾಂಡಲ್ವುಡ್ ಕ್ವೀನ್ ತಿಳಿಸಿದ್ದಾರೆ.

ಸಹ ಕಲಾವಿದರ ಜೊತೆ ಶೂಟಿಂಗ್ ಟೈಮ್ನಲ್ಲಿ ಅಪ್ಪು ಕಾಲವನ್ನು ಕಳೆಯುತ್ತಿದ್ದರು ಎಲ್ಲರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಚಿತ್ರದ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದರು ಎಂದು ರಮ್ಯಾತಿಳಿಸಿದ್ದಾರೆ. ಅಪ್ಪು ಅವರ ಗುಣಗಳನ್ನು ಸಹ ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ರಮ್ಯಾ ಹೆಮ್ಮೆಯಿಂದ ಹೇಳಿದ್ದಾರೆ.
ಅಪ್ಪು ಅವರು ನಮ್ಮ ಜೊತೆ ಇಲ್ಲ ಎನ್ನುವುದನ್ನು ನನ್ನ ಕೈಯಲ್ಲಿ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ಮಾಡಿರುವ ಕೆಲಸದ ಮೂಲಕ ನಮ್ಮ ಜೊತೆಗೆ ಇದ್ದಾರೆ ಎಂದು ಸ್ಯಾಂಡಲ್ ಕ್ವೀನ್ ರಮ್ಯಾ ನೆನಪಿಸಿಕೊಂಡಿದ್ದಾರೆ.
ಅಪ್ಪು ಇಲ್ಲ ಎಂದು ನನಗೆ ಫೋನ್ ಮಾಡಿದಾಗ ನಾನು ಅದನ್ನು ನಂಬಿರಲಿಲ್ಲ. ಮತ್ತೊಮ್ಮೆ ನಾನು ಕನ್ಫರ್ಮ್ ಮಾಡಿಕೊಂಡೆ ಈಗಲೂ ಸಹ ಅಪ್ಪು ಫೋಟೋ ನೋಡಿದಾಗ ಅವರು ಎಲ್ಲೋ ಹೋಗಿದ್ದಾರೆ ಎಂದು ನನಗೆ ಅನ್ನಿಸುತ್ತದೆ ಎಂದು ರಮ್ಯಾ ಶೋನಲ್ಲಿ ಭಾವಕರಾದರು.


Click it and Unblock the Notifications











