ಒಗಟು ಹೇಳಿ ತಲೆಗೆ ಹುಳ ಬಿಟ್ಟ ನಟಿ ರಂಜನಿ ರಾಘವನ್!
ಒಗಟುಗಳು ಎಲ್ಲರಿಗೂ ಪರಿಚಯವಿರುತ್ತದೆ. ಆದರೆ ಕೆಲವು ಒಗಟುಗಳನ್ನು ಬಿಡಿಸುವುದೆ ಕಷ್ಟಕರ. ಆದರೆ ಈಗ ಒಗಟು ಹೇಳುವವರೂ ಅಷ್ಟಾಗಿ ಇಲ್ಲ. ಅದನ್ನು ಬಿಡಿಸುವ ಗೋಜಿಗೂ ಯಾರೂ ಹೋಗಲ್ಲ. ಆದರೆ, ಜನರ ತಿಳುವಳಿಕೆ ಹೆಚ್ಚಿಸುವ ಈ ಒಗಟುಗಳನ್ನು ಬಿಡಿಸುವುದೇ ಚೆಂದ.
ಕೆಲವೊಮ್ಮೆ ದಿನಗಟ್ಟಲೆ ಒಗಟು ಬಿಡಿಸಿದರೂ ಸರಿಯಾದ ಉತ್ತರ ಸಿಗುವುದಿಲ್ಲ. ಇನ್ನು ಕೆಲವು ಒಗಟುಗಳೇ ಹಾಗೆ ಉತ್ತರಕ್ಕಾಗಿ ಸಿಗುವವರೆಗೂ ತಲೆ ತಿನ್ನುತ್ತವೆ. ಇದರಿಂದ ಎಲ್ಲರೂ ತಲೆ ಕೆಡಿಸಿಕೊಂಡು ಒಗಟಿಗೆ ಉತ್ತರ ಹುಡುಕುತ್ತಾರೆ. ಆದರೆ ಈಗ ಸಾಕಷ್ಟು ಮಂದಿಗೆ ಒಗಟು ಎಂಬುದೇ ಗೊತ್ತಿರುವುದಿಲ್ಲ.
ಆದರೆ, ಬಹುಮುಖ ಪ್ರತಿಭೆ ನಟಿ, ಬರಹಗಾರ್ತಿ ರಂಜನಿ ರಾಘವನ್ ಈಗ ಎಲ್ಲರಿಗೂ ಒಗಟುಗಳನ್ನು ನೆನಪು ಮಾಡುತ್ತಿದ್ದಾರೆ. ಸಹ ನಟರಿಗೆ ಒಗಟುಗಳನ್ನು ಕೇಳಿ ರೀಲ್ಸ್ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಬ್ಯುಸಿ ಶೆಡ್ಯೂಲ್‌ನಲ್ಲೂ ಬಿಂದಾಸ್ ಹುಡುಗಿ!
ನಟಿ ರಂಜನಿ ರಾಘವನ್ ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಚಿರಪರಿಚಿತರಾದವರು. ಈಗ ಕನ್ನಡತಿ ಎಂಬ ಧಾರಾವಾಹಿಯಲ್ಲಿ ಅಚ್ಚ ಕನ್ನಡದ ಹುಡುಗಿಯಾಗಿ ಮಿಂಚುತ್ತಿದ್ದಾರೆ. ಸಿನಿಮಾ, ಧಾರಾವಾಹಿ ಅಂತ ಬ್ಯುಸಿ ಇರುವ ಇವರು, ಬಿಡುವು ಸಿಕ್ಕಾಗಲೆಲ್ಲಾ ಸಾಹಿತಿ ಆಗಿ ಬಿಡುತ್ತಾರೆ. ಕಥೆ ಡಬ್ಬಿ ಎಂಬ ಪುಟ್ಟ ಪುಟ್ಟ ಕಥೆಗಳಿರುವ ಪುಸ್ತಕ ಬರೆದು ಫೇಮಸ್ ಆಗಿದ್ದಾರೆ. ನಟನೆಯ ಜೊತೆಗೆ ಬರಹಗಾರ್ತಿಯೂ ಆಗಿದ್ದು, ಸಿಕ್ಕಾಪಟ್ಟೆ ಬ್ಯುಸಿ ಹುಡುಗಿ ರಂಜನಿ ರಾಘವನ್. ಹಾಗಿದ್ದರೂ ಬ್ಯುಸಿ ಟೈಮ್ ನಲ್ಲೂ ಬಿಡುವು ಮಾಡಿಕೊಂಡು ಸಹ ನಟರ ತಲೆಗೆ ಒಗಟಿನ ಹುಳ ಬಿಡುತ್ತಿದ್ದಾರೆ.

ಒಗಟು ಹಾಕುತ್ತಿರುವ ರಂಜನಿ ರಾಘವನ್!
ಶೂಟಿಂಗ್ ಸಮಯದಲ್ಲಿ ಫ್ರೀ ಆಗಿದ್ದಾಗ, ಸ್ನೇಹಿತರಿಗೆ ಒಗಟು ಕೇಳುತ್ತಿದ್ದಾರೆ ಟೀಚರಮ್ಮ. ಈ ಹಿಂದೆ ಫ್ರೀ ಟೈಮ್‌ನಲ್ಲಿ ಮನರಂಜನೆ ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಈ ಒಗಟುಗಳನ್ನು ಕೇಳಲಾಗುತ್ತಿತ್ತು. ಈಗಲೂ ರಂಜನಿ ರಾಘವನ್ ಅದೇ ಕೆಲಸವನ್ನು ಮಾಡುತ್ತಿದ್ದಾರೆ. ತಮ್ಮೊಂದಿಗೆ ನಟಿಸುತ್ತಿರುವ ನಟಿಯರ ತಲೆಯನ್ನು ತಿನ್ನುತ್ತಿದ್ದಾರೆ. ಒಗಟು ಹೇಳುತ್ತಾ ಕನ್ನಡವನ್ನೂ ಕಲಿಸುತ್ತಿರುವ ರಂಜನಿ ಅವರು ಇದರ ರೀಲ್ಸ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಮೊಹಿರಾ ಆಚಾರ್ಯ, ಅಮೃತಾ ಮೂರ್ತಿ, ಆರೋಹಿ ನೈನಾ ಅವರಿಗೆ ಒಗಟು ಕೇಳಿ ಕೆಲ ಕಾಲ ತಲೆಗೆ ಕೆಲಸ ಕೊಟ್ಟಿದ್ದಾರೆ. ಈ ರೀಲ್ಸ್ ಈಗ ಇನ್ ಸ್ಟಾ ಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕನ್ನಡಕ್ಕೆ ಕೊಡುಗೆ ಕೊಡುವ ಪ್ರಯತ್ನ
ಸಾಹಿತಿಯಾಗಿ ರಂಜನಿ ರಾಘವನ್ ಆಗಾಗ ಕತೆ, ಸಣ್ಣ-ಪುಟ್ಟ ಕವನಗಳನ್ನು ಬರೆಯುತ್ತಿರುತ್ತಾರೆ. ಕನ್ನಡ ಭಾಷೆಗೆ ತಮ್ಮ ಕೈಲಾಗುವ ಕೊಡುಗೆ ನೀಡಲು ರಂಜನಿ ರಾಘವನ್ ಅವರು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುವ ರಂಜನಿ ಬಹುಬೇಗ ಎಲ್ಲರನ್ನು ಆಕರ್ಷಿಸುತ್ತಾರೆ. ಎಲ್ಲಾ ವರ್ಗದವರಿಗೂ ಅಟ್ರಾಕ್ಟ್ ಮಾಡುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಆ ಮುಗ್ಧತೆ, ಆ ಕಣ್ಮನ ಸೆಳೆಯುವ ನೋಟ, ಅದೇನೋ ಸಿಂಪ್ಲಿಸಿಟಿ ಈ ಎಲ್ಲಾ ಒಟ್ಟುಗೂಡಿ ರಂಜನಿ ರಾಘವನ್ ಎಂದಾಕ್ಷಣಾ ಎಲ್ಲರಿಗೂ ಇಷ್ಟವಾಗಿ ಬಿಡುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ರಂಜನಿ ಆ್ಯಕ್ಟಿವ್!
ರಂಜನಿ ರಾಘವನ್ ತಮ್ಮ ನಟನೆ, ಮಾತಿನ ಶೈಲಿ ಇಂದಲೇ ತಮ್ಮ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ. ಅಚ್ಚ ಕನ್ನಡದಲ್ಲಿ ಮಾತನಾಡುತ್ತಾ ಸದಾ ಕನ್ನಡ ಭಾಷೆಯನ್ನು ಎತ್ತಿ ಹಿಡಿಯುವ ರಂಜನಿ ಆಗಾಗ ಟ್ರೆಂಡ್ ಕ್ರಿಯೇಟ್ ಮಾಡುತ್ತಲೇ ಇರುತ್ತಾರೆ. ಹೆಚ್ಚು ಅಭಿಮಾನಿ ಬಳಗ ಗಳಿಸಿರುವ ರಂಜನಿ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಸಾವಿರಾರು ಫಾಲೋವರ್ಸ್ ಇದ್ದಾರೆ.


Click it and Unblock the Notifications











