"ಮತ್ತೆ ಅದೇ ಪಾತ್ರ ಮಾಡುವುದಕ್ಕೆ ನಾನು ರೆಡಿಯಿಲ್ಲ"; "ಗ್ಯಾಪ್ ಕೊಟ್ರೆ ಎಲೆಮರೆಕಾಯಿ ಆಗ್ಬಹುದು" ಎಂದ ನೆಟ್ಟಿಗರು
'ಆಕಾಶದೀಪ' ಧಾರಾವಾಹಿಯಲ್ಲಿ ಪೋಷಕ ಪಾತ್ರದ ಮೂಲಕ ನಟಿಸಿ ಮನ ಸೆಳೆದ ಬೆಡಗಿಯ ಹೆಸರು ರಂಜನಿ ರಾಘವನ್. ತದ ನಂತರ 'ಪುಟ್ಟ ಗೌರಿಮದುವೆ'ಯ ಗೌರಿಯಾಗಿ ಕನ್ನಡ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು ಈ ಚೆಂದುಳ್ಳಿ ಚೆಲುವೆ. ಕರುನಾಡಿನ ಮನೆಮಗಳಾಗಿ ಜನಪ್ರಿಯತೆ ಗಳಿಸಿಕೊಂಡಿರುವ ರಂಜನಿ ರಾಘವನ್ ಮುಂದೆ ಬದಲಾಗಿದ್ದು ಸೌಪರ್ಣಿಕಾ ಆಲಿಯಾಸ್ ಭುವನೇಶ್ವರಿಯಾಗಿ.
'ಕನ್ನಡತಿ' ಧಾರಾವಾಹಿಯ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾಳಾಗಿ ಎಲ್ಲರಿಗೂ ಚಿರಪರಿಚಿತರಾಗಿರುವ ರಂಜನಿ ರಾಘವನ್‌ಗೆ ಆ ಧಾರಾವಾಹಿ ಹಾಗೂ ಪಾತ್ರ ತಂದು ಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ. ಇವರ ಸ್ಪಷ್ಟ ಉಚ್ಚಾರಣೆ, ಮಾತುಕತೆ, ನಡೆನುಡಿ, ಸ್ವಭಾವ, ಪಾತ್ರದ ಬಗೆಗಿನ ಡೆಡಿಕೇಶನ್ ಎಲ್ಲವೂ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿತ್ತು. ಆದರೆ 'ಕನ್ನಡತಿ' ಧಾರಾವಾಹಿ ಮುಗಿಯುತ್ತಿದ್ದಂತೆ ಬೇರೆ ಯಾವುದೇ ಧಾರಾವಾಹಿಗಳಲ್ಲಿ ಆಫರ್ ಬಂದರೂ, ಅದನ್ನು ರಂಜನಿ ರಾಘವನ್ ರಿಜೆಕ್ಟ್ ಮಾಡಿದ್ದಾರಂತೆ.

"ಈಗಾಗಲೇ ಮಾಡಿರುವಂತಹ ಪಾತ್ರಗಳನ್ನು ಮತ್ತೆ ಮತ್ತೆ ನಾನು ಮಾಡಲು ತಯಾರಿಲ್ಲ. ನನಗೆ ವಿಭಿನ್ನ ಪಾತ್ರಗಳು ಬೇಕು. ಒಂದೇ ರೀತಿಯ ಪಾತ್ರಗಳನ್ನು ನೀಡುವುದಾದರೆ ಹೊಸಬರಿಗೆ ಅವಕಾಶ ಕೊಡಿ. ವಿಭಿನ್ನ ಪಾತ್ರಗಳು ಸಿಕ್ಕರೆ ಖಂಡಿತ ಮತ್ತೆ ಕಿರುತೆರೆಯಲ್ಲಿ ನಟಿಸುತ್ತೇನೆ" ಎಂದು ನಟಿ ರಂಜನಿ ರಾಘವನ್ ಹೇಳಿದ್ದಾರೆ.
ಅಂದಹಾಗೆ, ಕಿರುತೆರೆಯಲ್ಲಿ ಸ್ವಲ್ಪ ಖ್ಯಾತಿ ಸಿಗುತ್ತಿದ್ದಂತೆ ಸಿನಿಮಾದೆಡೆಗೆ ಕಾಲಿಟ್ಟ ನಟಿ ರಂಜನಿ ರಾಘವನ್ ಎರಡು ಸಿನಿಮಾಗಳಲ್ಲಿ ನಟಿಸಿದರು. ಆದರೆ, ಯಾವ ಸಿನೆಮಾಗಳು ಅವರಿಗೆ ಹೆಚ್ಚು ಜನಪ್ರಿಯತೆ ನೀಡಲಿಲ್ಲ. 'ಕತೆಡಬ್ಬಿ' ಎಂಬ ಪುಸ್ತಕವನ್ನು ಬರೆದಿರುವ ಇವರು ಇದೀಗ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂಬುದು ಇವರ ಕನಸಾಗಿದ್ದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರಂತೆ.
ರಂಜನಿ ರಾಘವನ್ ಅವರ ಈ ನಿರ್ಧಾರವನ್ನು ಅವರ ಪ್ರೇಕ್ಷಕರು ಅಭಿಮಾನಿಗಳು ಗೌರವಿಸಿದ್ದು, ಕೆಲವರು ವಿಭಿನ್ನ ಪಾತ್ರಗಳನ್ನೇ ಹುಡುಕಿ ದಯಮಾಡಿ ಕಿರುತೆರೆಗೆ ಬನ್ನಿ ಎಂಬ ಬೇಡಿಕೆಯನ್ನೇ ಇಟ್ಟಿದ್ದಾರೆ. ಅಲ್ಲದೆ ಅಭಿಮಾನಿ ಒಬ್ಬರು ರಂಜನಿ ರಾಘವನ್ ಅವರಿಗೆ ಒಂದು ಕಾಮೆಂಟ್ ಹಾಕಿದ್ದು " ಪ್ರೀತಿಯ ರಂಜನಿ ರಾಘವನ್ ಅವರೇ ನಿಮ್ಮ ನಿರ್ಧಾರ ಸ್ವಾಗತ ಅರ್ಹ. ಆದರೆ ನೀವು ಈಗಾಗಲೇ ಬಹಳಷ್ಟು ಖ್ಯಾತಿ ಪಡೆದಿದ್ದೀರಿ. ಕನ್ನಡ ಕಿರುತೆರೆ ವೀಕ್ಷಕರ ಮನದಲ್ಲಿ ನೆಲೆ ನಿಂತಿದ್ದೀರಿ. ಹೀಗಿರುವಾಗ ಇನ್ನಷ್ಟು ವಿಭಿನ್ನ ಪಾತ್ರಗಳನ್ನು ಮಾಡಿ ನಿಮ್ಮ ಐಡೆಂಟಿಟಿಯನ್ನು ಗಟ್ಟಿಗೊಳಿಸಿ, ತುಂಬಾ ಗ್ಯಾಪ್ ಸಿಕ್ಕರೆ ನೀವು ಎಲೆಮರೆಕಾಯಿ ಆಗುವ ಸಾಧ್ಯತೆ ಇದೆ" ಎಂದು ಪ್ರೀತಿಯಿಂದ ಎಚ್ಚರಿಸಿದ್ದಾರೆ.

ಸದ್ಯಕ್ಕೆ ನಟಿ ರಂಜಿನಿ ರಾಘವನ್ ಅವರು ಯಾವ ಪ್ರಾಜೆಕ್ಟ್ ನಲ್ಲಿ ಬಿಜಿ ಇದ್ದಾರೆ ಎಂಬುದು ತಿಳಿದು ಬಂದಿಲ್ಲ. ಆದರೆ ಬರವಣಿಗೆ ಹಾಗೂ ಸಿನಿಮಾ ನಿರ್ದೇಶನದಲ್ಲಿ ತಾವು ಬಹಳ ಬಿಸಿ ಇರುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ, ರಂಜನಿ ರಾಘವನ್ ಏಕತಾನತೆಯನ್ನು ಇಷ್ಟಪಡುವವರಲ್ಲ. ವಿಭಿನ್ನತೆಗೆ ಕಾಯುತ್ತಿರುವ ಈಕೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರತಿಭಾ ಅನಾವರಣಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಆದಷ್ಟು ಬೇಗ ಮತ್ತೊಂದು ಧಾರಾವಾಹಿ ಮೂಲಕ ಕಿರುತೆರೆಗೆ ಮರಳಲಿ ಅನ್ನೋದು ಅವರ ಅಭಿಮಾನಿಗಳ ಆಸೆ.
ಇನ್ನು ಸಿನಿಮಾದ ವಿಚಾರ ಬಂದರೆ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ 'ಸ್ವಪ್ನಮಂಟಪ' ಸಿನಿಮಾದಲ್ಲಿ ನಟಿಯಾಗಿ ನಟಿಸಲಿದ್ದಾರೆ ರಂಜನಿ ರಾಘವನ್. 'ಸತ್ಯಂ' ಸಿನಿಮಾದಲ್ಲಿ ನಾಯಕಿ ಗೀತಾ ಪಾತ್ರಕ್ಕೆ ಜೀವ ತುಂಬಿರುವ ರಂಜನಿ ರಾಘವನ್ 'ಕಾಂಗರೂ', 'ನೈಟ್ ಕರ್ಫ್ಯೂ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
'ರಾಜಹಂಸ' ಸಿನಿಮಾದ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಈಕೆ ಮುಂದೆ 'ಟಕ್ಕರ್', 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ'ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲಿ ಮಿಂಚಿರುವ ರಂಜನಿ ರಾಘವನ್ ಅವರು ವೆಬ್ ಸಿರೀಸ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. 'ಹಕೂನಾ ಮಟಾಟ' ಎನ್ನುವ ವೆಬ್ ಸಿರೀಸ್‌ನಲ್ಲಿ ಸೈ ಎನಿಸಿಕೊಂಡಿರುವ ಈಕೆ ರೂಪ ಪಾತ್ರದ ಮೂಲಕ ಗಮನ ಸೆಳೆದಿದ್ದರು.


Click it and Unblock the Notifications











