'ಸೀತಾರಾಮ' ಧಾರಾವಾಹಿಗೆ ಚಿತ್ರಕಥೆ-ಸಂಭಾಷಣೆ ಬರೆಯುತ್ತಿರೋದು ಯಾರು ಗೊತ್ತಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿ ಇದೀಗ ಬಹಳಷ್ಟು ಜನಪ್ರಿಯತೆ ಪಡೆಯುತ್ತಿದೆ. ಕಥೆ ಹಲವಾರು ತಿರುವುಗಳೊಂದಿಗೆ ಪ್ರೇಕ್ಷಕರನ್ನು ರಕ್ಷಿಸಿ ಮುನ್ನಡೆಯುತ್ತಿದೆ. ಹೀಗಿರುವಾಗ ಈ ಧಾರಾವಾಹಿಯ ಹಿಂದಿನ ಕಥೆಯ ಚಿತ್ರಕಥೆ ಹಾಗೂ ಸಂಭಾಷಣೆ ಯಾರ ಕೈಲಿದೆ ಎಂಬ ಕುತೂಹಲ ನಿಮಗೆ ಇರುವುದು ಸಹಜ. ಅವರ ಹೆಸರು ರಶ್ಮಿ ಅಭಯ ಸಿಂಹ.
ಹೌದು, ಸದ್ಯ 'ಸೀತಾರಾಮ' ಧಾರಾವಾಹಿಯ ಹಿಂದಿನ ಕಥೆ ಬರವಣಿಗೆ ಜವಾಬ್ದಾರಿಯನ್ನು ಹೊತ್ತಿರುವವರು ನಟಿ ಬರಹಗಾರ್ತಿ ರಶ್ಮಿ ಅಭಯಸಿಂಹ. ಅಂದ ಹಾಗೇ ಯಾರಿದು ರಶ್ಮಿ ಅಭಯ ಸಿಂಹ ಎಂದು ನೀವು ಯೋಚಿಸುತ್ತಿರಬಹುದು. ನಿಮ್ಮ ಯೋಚನೆಗೆ ಬ್ರೇಕ್ ಬೀಳಬೇಕು ಎಂದರೆ ನೀವು ಇದನ್ನು ಓದಲೇಬೇಕು.

ದಶಕದ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಲ್ಲವಿ ಅನುಪಲ್ಲವಿ' ಧಾರಾವಾಹಿಯ ನಾಯಕ ನಟಿಯೇ ರಶ್ಮಿ ಅಭಯಸಿಂಹ. ಆ ಕಾಲದ ಪಾಪ್ಯುಲರ್ ಧಾರಾವಾಹಿಗಳಲ್ಲಿ ಒಂದಾದ 'ಪಲ್ಲವಿ ಅನುಪಲ್ಲವಿ' ಧಾರಾವಾಹಿಯಲ್ಲಿ ನಂದಿನಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದರು ನಟಿ ರಶ್ಮಿ ಅಭಯ ಸಿಂಹ. ಅದಾದ ಮೇಲೆ 'ರಾಧೆ', 'ನಮ್ಮಮ್ಮ ಶಾರದೆ', 'ಅಳಗುಳಿ ಮಣೆ', 'ಮೀರಾ ಮಾಧವ', 'ನಾಗಮಣಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ ನಟಿ ರಶ್ಮಿ ಅಭಯ ಸಿಂಹ ಅವರು ಕೆಲ ವರ್ಷಗಳಿಂದ ತೆರೆಯಿಂದ ದೂರವೇ ಉಳಿದಿದ್ದಾರೆ.
ಕನ್ನಡ ಕಿರುತೆರೆಯೊಂದಿಗೆ ಗಟ್ಟಿ ಸಂಬಂಧವನ್ನು ಉಳಿಸಿಕೊಂಡವರು ಇದೀಗ ಬರಹಗಾರರಾಗಿ ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 'ಮಿಲನ', 'ಅನುರೂಪ', 'ಹರಹರ ಮಹಾದೇವ', ಜೊತೆಗೆ ಇತ್ತೀಚೆಗೆ ಬಹಳಷ್ಟು ಖ್ಯಾತಿ ಪಡೆದ 'ಜೊತೆ ಜೊತೆಯಲಿ' ಧಾರಾವಾಹಿಗೂ ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದದ್ದು ನಟಿ ಬರಹಗಾರ್ತಿ ರಶ್ಮಿ ಅಭಯಸಿಂಹ. ಅಷ್ಟೇ ಅಲ್ಲದೆ 'ಹೆಲ್ತ್ ಪ್ಲೇಸ್', 'ದೇಗುಲ ದರ್ಶನ' ಮುಂತಾದ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ.

ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರ 'ಕೂರ್ಮಾವತಾರ' ಸಿನಿಮಾ ಸೇರಿದಂತೆ 'ಲೈಫ್ ಇಷ್ಟೇನೆ', 'ಎಂದೆಂದಿಗೂ ನಿನಗಾಗಿ' ಇತ್ಯಾದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪ್ರಸ್ತುತ ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ಅವರು ನಟಿಸುತ್ತಿರುವ 'ಸೀತಾರಾಮ' ಧಾರಾವಾಹಿಯ ಕಥೆ ಚಿತ್ರಕಥೆ ಬರೆಯುತ್ತಿರುವುದು ರಶ್ಮಿ ಅಭಯ ಸಿಂಹ ಎಂದು ತಿಳಿದು ಪ್ರೇಕ್ಷಕರು ಬಹಳ ಸಂತಸಪಟ್ಟಿದ್ದಾರೆ. ಬರಹಗಾರ್ತಿಯಾಗಿ ಕಿರುತೆರೆ ವೀಕ್ಷಕರ ಮನಕ್ಕೆ ಲಗ್ಗೆ ಇಟ್ಟಿರುವ ರಶ್ಮಿ ಅಭಯ ಸಿಂಹ ಅವರನ್ನು ಮತ್ತೆ ನಟಿಯಾಗಿ ತೆರೆ ಮೇಲೆ ಕಾಣಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











