ಕಿರುತೆರೆ ನಟಿ ಚಿನ್ನು ಅಲಿಯಾಸ್ ರಶ್ಮಿ ಪ್ರಭಾಕರ್ ಮನೆಯಲ್ಲಿ ಮದುವೆ ಶಾಸ್ತ್ರ
ಕಳೆದ ಆರು-ಏಳು ತಿಂಗಳಿಂದ ಕಿರುತೆರೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರಾದ ಮೇಲೆ ಒಬ್ಬರಂತೆ ಕಿರುತೆರೆ ನಟ-ನಟಿಯರು ಸಪ್ತಪದಿ ತುಳಿಯುತ್ತಿದ್ದಾರೆ. ಇದೀಗ ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ಚಿನ್ನು ಪಾತ್ರದ ರಶ್ಮಿ ಪ್ರಭಾಕರ್ ಮನೆಯಲ್ಲಿ ಮದುವೆಯ ಶಾಸ್ತ್ರಗಳು ಶುರುವಾಗಿವೆ.
ಈಗಾಗಲೇ ರಶ್ಮಿ ಪ್ರಭಾಕರ್ ಅವರ ಮನೆಯಲ್ಲಿ ಲಗ್ನ ಪತ್ರಿಕೆಗಳ ಹಂಚುವ ಕೆಲಸಗಳು ಮುಗಿದಿದೆ. ಮನೆಯಲ್ಲಿ ಮದುವೆಯ ಶಾಸ್ತ್ರಗಳನ್ನು ನಡೆಸುತ್ತಿದ್ದು, ಮೆಹಂದಿ, ಹಳದಿ ಶಾಸ್ತ್ರಗಳಿಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ರಶ್ಮಿ ಮದುವೆಯಾಗುತ್ತಿರುವ ಹುಡುಗ ಯಾರು.?
ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸಿರಿಯಲ್ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಇನ್ನು ತೆಲುಗು ಕಿರುತೆರೆಗೂ ಪಾದಾರ್ಪಣೆ ಮಾಡುವ ಮೂಲಕ ರಶ್ಮಿ ಫೇರಿಟ್ ನಟಿಯಾಗಿದ್ದಾಳೆ. ತೆಲುಗಿನಲ್ಲಿ ರಶ್ಮಿ ಕಾವ್ಯಾಂಜಲಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಗಳಲ್ಲಿ ಬ್ಯುಸಿಯಾಗಿರುವ ರಶ್ಮಿ ಸಮಯ ಮಾಡಿಕೊಂಡು ಮದುವೆ ತಯಾರಿಯನ್ನೂ ನಡೆಸಿದ್ದಾರೆ.

ಧಾರಾವಾಹಿಗಳಲ್ಲಿ ಮಿಂಚಿದ ಲಚ್ಚಿ
ರಶ್ಮಿ ಪ್ರಭಾಕರ್ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದು, ಕನ್ನಡ ಮಾತ್ರವಲ್ಲದೇ, ತೆಲುಗು,ತಮಿಳು ಭಾಷೆಯ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ಕನ್ನಡದ ಶುಭ ವಿವಾಹ, ಮಹಾಭಾರತ, ದರ್ಪಣ, ಜೀವನ ಚೈತ್ರ, ಮನಸೆಲ್ಲಾ ನೀನೇ, ಲಕ್ಷ್ಮೀ ಬಾರಮ್ಮ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಂತರ ರಶ್ಮಿ ಅವರಿಗೆ ಬೇರೆ ಭಾಷೆಗಳ ಕಿರುತೆರೆಗಳಲ್ಲಿ ಆಫರ್ ಗಳು ಬರಲು ಶುರುವಾದವು. ಹೀಗಾಗಿ ರಶ್ಮಿ ಅವರು ತಮಿಳು ಭಾಷೆಯಲ್ಲಿ ಅರುಂಧತಿ ಎಂಬ ಧಾರಾವಾಹಿಗೆ ಬಣ್ಣ ಹಚ್ಚಿದರು. ನಂತರ ತೆಲುಗಿನ ಪೌರ್ಣಮಿ ಹಾಗೂ ಕಾವ್ಯಾಂಜಲಿ ಧಾರಾವಾಹಿಗಳ ಭಾಗವಾದರು. ಇವಿಷ್ಟೇ ಅಲ್ಲದೇ, ಮಹಾಕಾವ್ಯ ಮತ್ತು ಬಿಬಿ5 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಲವ್ ಕಮ್ ಅರೇಂಜ್ ಮ್ಯಾರೇಜ್
ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಕೆಲ ವರ್ಷಗಳ ಹಿಂದೆ ನಿಖಿಲ್ ಹಾಗೂ ರಶ್ಮಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರೂ ಒಬ್ಬರನ್ನು ಒಬ್ಬರು ಮೆಚ್ಚಿಕೊಂಡಿದ್ದಾರೆ. ಬಳಿಕ ಇಬ್ಬರ ಮನೆಯಲ್ಲಿ ವಿಷಯ ತಿಳಿಸಿದ್ದಾರೆ. ಎರಡೂ ಮನೆಯವರೂ ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಇಬ್ಬರ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಕಳೆದ ವರ್ಷ ನೆರವೇರಿಸಿದ್ದರು. ನಿಖಿಲ್ ಭಾರ್ಗವ್ ಬೆಂಗಳೂರಿನಲ್ಲೆ ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ನಿಖಿಲ್ ಹಾಗೂ ಮನೆಯವರು ರಶ್ಮಿ ಅವರ ನಟನೆಗೆ ಸಪೋರ್ಟ್ ಮಾಡುತ್ತಿದ್ದಾರೆ.

ಅದ್ಧೂರಿಯಾಗಿ ನಡೆದಿದ್ದ ನಿಶ್ಚಿತಾರ್ಥ
ನವೆಂಬರ್ ತಿಂಗಳಿನಲ್ಲಿ ರಶ್ಮಿ ಪ್ರಭಾಕರ್ ನಿಖಿಲ್ ಭಾರ್ಗವ್ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಲ್ಲದೇ ರಶ್ಮಿ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆ ಸರಳವಾಗಿರುತ್ತದೆ. ನಮ್ಮ ಮದುವೆಯಲ್ಲಿ ಆರತಾಕ್ಷತೆ ಇರುವುದಿಲ್ಲ ಎಂದು ಹೇಳಿದ್ದರು. ಅದರಂತೆಯೇ ಏಪ್ರಿಲ್ 25ರಂದು ರಶ್ಮಿ ಹಾಗೂ ನಿಖಿಲ್ ಮದುವೆ ನಡೆಯಲಿದ್ದು, ರಿಸೆಪ್ಷನ್ ಇರುವುದಿಲ್ಲ.

ಸೋಮವಾರ ಸಪ್ತಪದಿ ತುಳಿಯಲಿರುವ ಜೋಡಿ
ಇದೇ ಸೋಮವಾರ ರಶ್ಮಿ ಹಾಗೂ ನಿಖಿಲ್ ಮದುವೆಗೆ ಕುಟುಂಬದವರು ಹಾಗೂ ಸಂಬಂಧಿಕರು ಮತ್ತು ಸ್ನೇಹಿತರು ಸಾಕ್ಷಿಯಾಗಲಿದ್ದಾರೆ. ಈಗಾಗಲೇ ಎರಡೂ ಮನೆಯಲ್ಲಿ ಮದುವೆಯ ಪೂರ್ವ ಶಾಸ್ತ್ರಗಳು ಪ್ರಾರಂಭವಾಗಿವೆ. ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿರುವ ರಶ್ಮಿ ಪ್ರಭಾಕರ್, ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೇ ಸ್ನೇಹಿತರಿಗೆ ಲಗ್ನ ಪತ್ರಿಕೆಗಳನ್ನು ಹಂಚಿ, ಶಾಪಿಂಗ್ ಮುಗಿಸಿದ್ದಾರೆ. ಜೊತೆಗೆ ಸ್ನೇಹಿತರು ನೀಡಿದ ಸರ್ಪ್ರೈಸ್ ಪಾರ್ಟಿಗಳಲ್ಲೂ ಭಾಗಿಯಾಗಿದ್ದಾರೆ. ಈಗ ಮದುವೆ ಶಾಸ್ತ್ರಗಳ ತಯಾರಿ ನಡೆಸಿದ್ದಾರೆ.


Click it and Unblock the Notifications











