'ಲಕ್ಷ್ಮಿ ಬಾರಮ್ಮ' ಮುಗಿದು 2 ವರ್ಷಗಳ ಬಳಿಕ 'ಭಾಗ್ಯಲಕ್ಷ್ಮಿ'ಯಾಗಿ ಎಂಟ್ರಿ ಕೊಟ್ಟ ರಶ್ಮಿ!
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಲಕ್ಷ್ಮಿ ಆಲಿಯಾಸ್ ಲಚ್ಚಿ ಅರ್ಥಾತ್ ಚಿನ್ನು ಆಗಿ ನಟಿಸಿದ ನಟಿ ರಶ್ಮಿ ಪ್ರಭಾಕರ್ ಅದೇ ಪಾತ್ರದ ಮೂಲಕ ಕರುನಾಡಿನಾದ್ಯಂತ ಗುರುತಿಸಿಕೊಂಡಿರುವ ಬೆಡಗಿ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಕವಿತಾ ನಂತರ ಆ ಪಾತ್ರಕ್ಕೆ ಜೀವ ತುಂಬಿದ ರಶ್ಮಿ ಪ್ರಭಾಕರ್ ತಮ್ಮ ನಟನೆಯಿಂದ ಎಲ್ಲರ ಮನ ಸೆಳೆದಿದ್ದರು. ಇದರ ಜೊತೆಗೆ ನಟಿ ನೇಹಾ ಗೌಡ ಹಾಗೂ ರಶ್ಮಿ ಪ್ರಭಾಕರ್ ಲಚ್ಚಿ ಹಾಗೂ ಅವರಕ್ಕ ಗೊಂಬೆಯಾಗಿ ಇಡೀ ಧಾರಾವಾಹಿಯನ್ನು ಅದ್ಭುತವಾಗಿ ನಡೆಸಿಕೊಟ್ಟಿದ್ದರು. ರಶ್ಮಿ ಪ್ರಭಾಕರ್ ಈಗ ಮತ್ತೆ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕೂಡಾ ಲಚ್ಚಿಯಾಗಿ!
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಅಕ್ಕ ತಂಗಿಯ ರೀತಿ ಧಾರಾವಾಹಿಯುದ್ದಕ್ಕೂ ನಟಿಸಿ ಸೈ ಎನಿಸಿಕೊಂಡಿದ್ದ ನೇಹಾ ಗೌಡ ಹಾಗೂ ರಶ್ಮಿ ಪ್ರಭಾಕರ್ ಜೋಡಿ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಮೂಲಕ ಮತ್ತೆ ಪ್ರೇಕ್ಷಕ ಪ್ರಭುಗಳನ್ನು ರಂಜಿಸಲು ಬರುತ್ತಿದ್ದಾರೆ. ಹೌದು, ಧಾರಾವಾಹಿ ಮುಗಿದು ಎರಡು ವರ್ಷಗಳ ನಂತರ ಅದೇ ಪಾತ್ರದ ಮೂಲಕ ರಶ್ಮಿ ಪ್ರಭಾಕರ್ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿರುವುದು ಸೀರಿಯಲ್ ವೀಕ್ಷಕರ ಪಾಲಿಗೆ ದುಪ್ಪಟ್ಟು ಸಂಭ್ರಮ ನೀಡಿದೆ.

ಲಕ್ಷ್ಮಿ ಮದುವೆಯಲ್ಲಿ ಲಚ್ಚಿ ಭಾಗಿ
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ನಟಿ ರಶ್ಮಿ ಪ್ರಭಾಕರ್ "ಇಂದು ನನ್ನ ಈ ಎಲ್ಲ ಯಶಸ್ಸಿಗೂ ಲಕ್ಷ್ಮಿ ಬಾರಮ್ಮ ಧಾರಾವಾಹಿಯೇ ಕಾರಣ. ಲಚ್ಚಿ ಆಗಿ ಪಾತ್ರ ಮಾಡುವ ಮೂಲಕ ಕಿರುತೆರೆಗೆ ಕಾಲಿಟ್ಟ ನನಗೆ ಇವತ್ತಿನ ತನಕ ಎಲ್ಲವೂ ಒಳ್ಳೆಯದೇ ಆಗಿದೆ. ಈಗ ಮತ್ತೆ 'ಭಾಗ್ಯಲಕ್ಷ್ಮಿ' ಧಾರವಾಹಿಯಲ್ಲಿ ಲಚ್ಚಿ ಆಗಿ ಕಾಣಿಸಿಕೊಳ್ಳುತ್ತಿರುವುದು ಬಹಳ ಸಂತೋಷ ತಂದಿದೆ" ಎಂದಿದ್ದಾರೆ.
'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನೇಹ ಗೌಡ ಹಾಗೂ ರಶ್ಮಿ ಪ್ರಭಾಕರ್ ವೈಷ್ಣವ್ ಹಾಗೂ ಲಕ್ಷ್ಮಿ ಅವರ ಮೆಹೆಂದಿ ಸಮಾರಂಭದಲ್ಲಿ ಅನಿರೀಕ್ಷಿತವಾಗಿ ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರಿಗೂ ಹಾಗೂ ಆ ಮದುವೆ ಮನೆಯ ಸದಸ್ಯರಿಗೂ ಸರ್ಪ್ರೈಸ್ ಕೊಡುವಂತೆ ಎಂಟ್ರಿ ಕೊಟ್ಟಿದ್ದಾರೆ. ಈ ಸರ್ಪ್ರೈಸ್ ಎಂಟ್ರಿಯನ್ನು ಸಂತೋಷದಿಂದ ಸ್ವೀಕರಿಸಿರುವ ಧಾರಾವಾಹಿ ಪ್ರೇಕ್ಷಕರು ಮುಂದೆ ಎರಡು ಪಾತ್ರಗಳನ್ನು ಧಾರಾವಾಹಿ ಉದ್ದಕ್ಕೂ ನೋಡಲು ಕೌತುಕವಾಗಿ ಕಾಯುತ್ತಿದ್ದಾರೆ.

ತಮಿಳಿನಲ್ಲಿ ಬ್ಯುಸಿ
ಸ್ಟಾರ್ ವಿಜಯ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ 'ಕಣ್ಣೆ ಕಲೈಮಾನ್'ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸುತ್ತಿರುವ ರಶ್ಮಿ ಪ್ರಭಾಕರ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಸೂಪರ್ ಕ್ವೀನ್' ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











