'ವೃಂದಾ' ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ ರಶ್ಮಿತಾ ಚೆಂಗಪ್ಪ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಕಾವೇರಿ ಕನ್ನಡ ಮೀಡಿಯಂ' ಕೂಡಾ ಒಂದು. ರಕ್ಷಿತ್ ಅರಸ್ ಗೋಪಾಲ್ ಹಾಗೂ ಪ್ರಿಯಾ ಜೆ ಆಚಾರ್ ನಾಯಕ ನಾಯಕಿಯಾಗಿ ನಟಿಸುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಈ ಧಾರಾವಾಹಿಯ ತಂಡದಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಹೌದು, 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಪಾತ್ರವೊಂದರ ಬದಲಾವಣೆಯಾಗಿದೆ. ಪ್ರಸ್ತುತ ಧಾರಾವಾಹಿಯಲ್ಲಿ ಖಳನಾಯಕಿಯ ಪಾತ್ರದಲ್ಲಿ ಬದಲಾವಣೆಯಾಗಿದೆ. ವಿಲನ್ ವೃಂದಾ ಆಗಿ ನಟಿಸುತ್ತಿದ್ದ ಸುಕೃತಾ ನಾಗ್ ತಮ್ಮ ಪಾತ್ರದಿಂದ, ಧಾರಾವಾಹಿಯಿಂದ ಹೊರಬಿದ್ದಿದ್ದಾರೆ.

ಕಾರಣಾಂತರಗಳಿಂದ ಸುಕೃತಾ ನಾಗ್ ಅವರು 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಿಂದ ಹೊರಬಿದ್ದಿದ್ದು, ಆ ಜಾಗಕ್ಕೆ ಹೊಸ ಎಂಟ್ರಿಯ ಆಗಿದೆ. ರಶ್ಮಿತಾ ಚೆಂಗಪ್ಪ ಅವರು ಇನ್ನು ಮುಂದೆ ವೃಂದಾ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅಂದ ಹಾಗೇ ರಶ್ಮಿತಾ ಅವರಿಗೆ ಖಳನಾಯಕಿಯ ಪಾತ್ರ ಹೊಸತೇನಲ್ಲ. ಹಾಗೇ ನೋಡಿದರೆ ಆಕೆ ಈ ಹಿಂದೆ ಖಳನಾಯಕಿಯಾಗಿ ಕಿರುತೆರೆ ಅಂಗಳದಲ್ಲಿ ಗುರುತಿಸಿಕೊಂಡಿರುವ ಬೆಡಗಿ.
'ಮಹಾರಾಣಿ' ಧಾರಾವಾಹಿಯ ಇಶಾಳಾಗಿ ಕಿರುತೆರೆಗೆ ಕಾಲಿಟ್ಟ ರಶ್ಮಿತಾ ಮೊದಲ ಧಾರಾವಾಹಿಯಲ್ಲಿಯೇ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿರುವ ಚೆಲುವೆ. ಮುಂದೆ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಖಳನಾಯಕಿ ಸಾರಿಕಾ ಪಾತ್ರದಲ್ಲಿ ಕಾಣಿಸಿಕೊಂಡ ಆಕೆ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದರು. ಮುಂದೆ 'ಮತ್ತೆ ವಸಂತ' ಧಾರಾವಾಹಿಯಲ್ಲಿಯೂ ವಿಲನ್ ಆಗಿ ಅಬ್ಬರಿಸಿದ ರಶ್ಮಿತಾ 'ಯಾರಿವಳು', 'ಮೂರುಗಂಟು' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಮಿಂಚಿದರು.
ತದ ನಂತರ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಚರಿತಾ ಎನ್ನುವ ಅತಿಥಿ ಪಾತ್ರದಲ್ಲಿ ನಟಿಸಿದ ಈಕೆ ಮುಂದೆ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ್ದರು. ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಊರ್ಮಿಳಾ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಈಕೆ ಮೊದಲ ಬಾರಿಗೆ ಪಾಸಿಟಿವ್ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು.

'ಯುವರಾಣಿ' ಧಾರಾವಾಹಿಯಲ್ಲಿ ಇಶಾ ಆಗಿ ನಟಿಸಿದ್ದ ನಾನು ನಂತರದ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿ ನಟಿಸಿದ್ದೇ ಹೆಚ್ಚು. ಇದೀಗ ದೊಡ್ಡ ಗ್ಯಾಪ್‌ನ ನಂತರ ಮತ್ತೆ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮಹಾದಾಸೆಯಾಗಿದೆ. ಮೊದಲ ಧಾರಾವಾಹಿಯ ನಂತರ ಇದೀಗ ಮತ್ತೆ ನಾಯಕಿಯಾಗಿ ನಟಿಸುತ್ತಿರುವುದಕ್ಕೆ ಖುಷಿಯಿದೆ. ನಾನು ಕೂಡಾ ಬದಲಾವಣೆ ಬೇಕು ಎಂದು ಬಯಸಿದ್ದೆ. ಅಂತಹ ಪಾತ್ರವೂ ದೊರಕಿತು ಎಂದು ಈ ಹಿಂದೆ ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಆಕೆ ಹೇಳಿಕೊಂಡಿದ್ದರು.
ಊರ್ಮಿಳಾ ಧಾರಾವಾಹಿಯ ನಂತರ ಇದೀಗ ವೃಂದಾ ಪಾತ್ರದ ಮೂಲಕ ರಶ್ಮಿತಾ ಚೆಂಗಪ್ಪ ಕಿರುತೆರೆಗೆ ಕಾಲಿಡುತ್ತಿದ್ದು ಆ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ತಯಾರಾಗುತ್ತಿದ್ದಾರೆ.


Click it and Unblock the Notifications











