ಕಿರುತೆರೆಯ ಊರ್ಮಿಳಾ ಈಗ 'ಸೂಪರ್ ಮಾಮ್'ನ ನಿರೂಪಕಿ: ಏನಂತಾರೆ ನಟಿ ರಶ್ಮಿತಾ ಚೆಂಗಪ್ಪ?
ಸಿರಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಊರ್ಮಿಳಾ' ಧಾರಾವಾಹಿಯಲ್ಲಿ ನಾಯಕಿ ಊರ್ಮಿಳಾ ಪಾತ್ರದಲ್ಲಿ ರಶ್ಮಿತಾ ಚೆಂಗಪ್ಪ ನಟಿಸುತ್ತಿದ್ದಾರೆ. ಇದೀಗ ಕಿರುತೆರೆಯಲ್ಲಿ ನಿರೂಪಕಿಯಾಗಿ ಮೋಡಿ ಮಾಡುತ್ತಿದ್ದಾರೆ. ಹೌದು, ಸಿರಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಕ್ಕಳ ರಿಯಾಲಿಟಿ ಶೋ 'ಲಿಟಲ್ ಕಿಲಾಡೀಸ್'ನ ಮೂಲಕ ನಿರೂಪಕಿಯಾಗಿ ಭಡ್ತಿ ಪಡೆದಿದ್ದರು.
ರಶ್ಮಿತಾ ಚೆಂಗಪ್ಪ ಇದೀಗ ಮಗದೊಂದು ಶೋ ನಿರೂಪಣೆ ಮಾಡುತ್ತಿದ್ದಾರೆ. ಸಿರಿ ಕನ್ನಡ ವಾಹಿನಿಯಲ್ಲೇ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಸಿರಿ ಸೂಪರ್ ಮಾಮ್'ನ ನಿರೂಪಕಿಯಾಗಿ ರಶ್ಮಿತಾ ಮಿಂಚುತ್ತಿದ್ದಾರೆ.

ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರಶ್ಮಿತಾ ಚೆಂಗಪ್ಪ ಖಳನಾಯಕಿಯಾಗಿ ಕಿರುತೆರೆಗೆ ಕಾಲಿಟ್ಟವರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕನ ಚಿಕ್ಕಮ್ಮನ ಮಗಳು ಸಾರಿಕಾ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ರಶ್ಮಿತಾ ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿ ಅಬ್ಬರಿಸಿದ ನಟಿ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ಮಹಾರಾಣಿ' ಧಾರಾವಾಹಿಯಲ್ಲಿ ನಾಯಕಿ ಇಶಾ ಆಗಿ ನಟಿಸಿದ್ದ ಈಕೆ ಮುಂದೆ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮೂಲಕ ಮನೆ ಮಾತಾದರು. ತದ ನಂತರ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಮತ್ತೆ ವಸಂತ' ಧಾರಾವಾಹಿಯಲ್ಲಿಯೂ ಖಳನಾಯಕಿಯಾಗಿ ಮೋಡಿ ಮಾಡಿದ ರಶ್ಮಿತಾ ಚೆಂಗಪ್ಪ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಾರಿವಳು' ಧಾರಾವಾಹಿಯಲ್ಲಿ ಖಳನಾಯಕಿ ಗೌತಮಿಯಾಗಿ ಕಾಣಿಸಿಕೊಂಡರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೂರುಗಂಟು' ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ ನಟಿಸಿದ್ದ ಈಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ಚರಿತಾ ಎನ್ನುವ ಅತಿಥಿ ಪಾತ್ರಕ್ಕೆ ಜೀವ ತುಂಬಿದ್ದರು.

ಇದೀಗ 'ಊರ್ಮಿಳಾ' ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರಶ್ಮಿತಾ ಚೆಂಗಪ್ಪ "ಊರ್ಮಿಳಾ ಎನ್ನುವುದು ತುಂಬಾ ಸ್ಟ್ರಾಂಗ್ ಆಗಿರುವಂತಹ ಪಾತ್ರ. ಗಂಡು ಮಗುವಿನಂತೆ ಅಮ್ಮನ ಮನೆಯ ಜವಾಬ್ದಾರಿಯನ್ನು ನೋಡಿಕೊಂಡಿದ್ದ ಊರ್ಮಿಳಾ ಇಷ್ಟವಿಲ್ಲದಿದ್ದರೂ ನಾಯಕ ಸಾಮ್ರಾಟ್‌ನ ಮದುವೆಯಾಗಬೇಕಾಗುತ್ತದೆ. ಮದುವೆಯಾದ ಮೇಲೆ ಸೊಸೆಯ ಜವಾಬ್ದಾರಿಯನ್ನು ಕೂಡಾ ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ ಊರ್ಮಿಳಾ" ಎಂದು ಹೇಳುತ್ತಾರೆ.
"ಊರ್ಮಿಳಾ ಎನ್ನುವುದು ಒಂದು ಗಟ್ಟಿಗಿತ್ತಿಯ ಪಾತ್ರ ಎಂದರೆ ತಪ್ಪಾಗಲಾರದು. ಕಣ್ಣ ಮುಂದೆ ಏನೇ ತಪ್ಪುಗಳು ಅಥವಾ ಅನ್ಯಾಯ ನಡೆದರೂ ಅದನ್ನು ಖಡಾಖಂಡಿತವಾಗಿ ಖಂಡಿಸುವ ಪಾತ್ರವದು. ಸರಿ ಅಂತ ಗೊತ್ತಾದರೆ ಯಾರಿಗೂ ಹೆದರದೇ, ಕೇರ್ ಮಾಡದೇ ಇರುವ ಖಡಕ್ ಪಾತ್ರವದು" ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಳ್ಳುತ್ತಾರೆ ರಶ್ಮಿತಾ ಚೆಂಗಪ್ಪ.
ಇದರ ಜೊತೆಗೆ "ನಾನು ಮೊದಲ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದೆ. ತದ ನಂತರದ ಮೂರು ನಾಲ್ಕು ಧಾರಾವಾಹಿಗಳಲ್ಲಿ ಖಳನಾಯಕಿಯಾಗಿ ನಟಿಸಿದ್ದೇ ಹೆಚ್ಚು. ಗ್ಯಾಪ್‌ನ ನಂತರ ಇದೀಗ ಮತ್ತೆ ಪಾಸಿಟಿವ್ ಪಾತ್ರ ದೊರೆತಾಗ ತಕ್ಷಣವೇ ಒಪ್ಪಿಕೊಂಡೆ. ಯಾಕೆಂದರೆ, ನಾನು ಕೂಡಾ ಬದಲಾವಣೆ ಬಯಸಿದ್ದೆ" ಎಂದು ಈ ಹಿಂದೆ ಫಿಲ್ಮಿಬೀಟ್ ಜೊತೆಗೆ ರಶ್ಮಿತಾ ಚೆಂಗಪ್ಪ ಹೇಳಿಕೊಂಡಿದ್ದರು.


Click it and Unblock the Notifications











