ಪೋಷಕರ ಕನಸು ನನಸು ಮಾಡಲು ನಟನೆಗೆ ಕಾಲಿಟ್ಟ ಈ ನಟಿ ಯಾರು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಚುಕ್ಕಿತಾರೆ' ಧಾರಾವಾಹಿಯು ಇದೀಗ ಮುಕ್ತಾಯಗೊಳ್ಳುತ್ತಿದೆ. ಚುಕ್ಕಿ-ಇಬ್ಬನಿ ಎನ್ನುವ ಪುಟ್ಟ ಹುಡುಗಿಯರ ಜೀವನಕ್ಕೆ ಸಂಬಂಧಿಸಿದ ಕತೆ ಇದಾಗಿದ್ದು, ವೀಕ್ಷಕರ ಮನ ಸೆಳೆದಿತ್ತು. ಇದೇ ತಿಂಗಳು ಮಾರ್ಚ್ ತಿಂಗಳಿನಲ್ಲಿ ಈ ಧಾರಾವಾಹಿ ಆರಂಭವಾಗಿದ್ದು ಇದೀಗ ಸುಖಾಂತ್ಯ ಕಾಣುವ ಮೂಲಕ ತನ್ನ ಪಯಣವನ್ನು ನಿಲ್ಲಿಸಲಿದೆ.
'ಚುಕ್ಕಿತಾರೆ' ಧಾರಾವಾಹಿಯಲ್ಲಿ ಇಬ್ಬನಿಯ ಅಮ್ಮ ಆಶಿಕಾ ಆಗಿ ನಟಿಸುತ್ತಿರುವ ನಟಿಯ ಹೆಸರು ರಿಶಾ ನಿಜಗುಣ. ಆಶಿಕಾ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿರುವ ರಿಶಾ ಅವರು ನಟನಾ ಲೋಕದ ನಂಟು ಬೆಳೆಸಿಕೊಂಡ ಸಂಗತಿ ಸ್ವಾರಸ್ಯಕರವಾದುದು. ಹೌದು, ರಿಶಾ ನಿಜಗುಣ ಅವರ ಪೋಷಕರಿಗೆ ಆಕೆ ನಟನೆಯಲ್ಲಿ ಕಾಣಿಸಿಕೊಳ್ಳಬೇಕು. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸಿತ್ತು.

ಕೋಟೆ ನಾಡು ಚಿತ್ರದುರ್ಗದ ಕುವರಿ ರಿಶಾ ನಿಜಗುಣ ನಟನೆ ಕಲಿಯುವ ಸಲುವಾಗಿ ಮಹಾನಗರಿಗೆ ಕಾಲಿಟ್ಟರು. ನಟನೆಯನ್ನು ಕಲಿಯುವ ಸಲುವಾಗಿ ಕಲಾತ್ಮಕ ಎನ್ನುವ ಹವ್ಯಾಸಿ ತಂಡರಂಗವನ್ನು ಈಕೆ ಸೇರಿದರು. ನಟನೆಯ ಆಗು ಹೋಗುಗಳನ್ನು ಚೆನ್ನಾಗಿ ತಿಳಿದುಕೊಂಡ ರಿಶಾ ಮುಂದೆ ಒಂದೆರಡು ನಾಟಕಗಳಲ್ಲಿ ಬಣ್ಣ ಹಚ್ಚಿದರು.
'ಪ್ರಾರಬ್ಧ ಕರ್ಮ' ಹಾಗೂ 'ಗಡಿಯಂಕ ಕುಡಿಯುದ್ಧ' ಎಂಬ ನಾಟಕಗಳ ಜೊತೆಗೆ ಬೆರಳೆಣಿಕೆಯಷ್ಟು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ರಿಶಾ ನಿಜಗುಣ ನಂತರ ಕಾಣಿಸಿಕೊಂಡಿದ್ದು ಬೆಳ್ಳಿತೆರೆಯಲ್ಲಿ. ಪ್ರೇಮ್ ನಿರ್ದೇಶನದ 'ಡಿಕೆಬೋಸ್' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದರು.
ತದ ನಂತರ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲು ನಟಿಸಿದ್ದು 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದ ಈಕೆ ರಕ್ಷಿತಾ ಪಾತ್ರದಲ್ಲಿ ಮಿಂಚಿದರು. ಮುಂದೆ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕ ವಸಂತನ ತಂಗಿಯಾಗಿ ನಟಿಸಿದರು.

ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿರುವ ರಿಶಾ ನಿಜಗುಣ ಮನೋಜ್ಞ ನಟನೆಯ ಮೂಲಕ ಗಮನ ಸೆಳೆದ ಬೆಡಗಿ. ಸದ್ಯ ಚುಕ್ಕಿತಾರೆ ಧಾರಾವಾಹಿಯ ಆಶಿಕಾ ಆಗಿ ಕಿರುತೆರೆಯಲ್ಲಿ ಗಮನ ಸೆಳೆದಿರುವರ ರಿಶಾ ನಿಜಗುಣ ಇಂದು ಪೂರ್ಣ ಪ್ರಮಾಣದಲ್ಲಿ ನಟಿಯಾಗಿ ಗುರುತಿಸಿಕೊಳ್ಳುವ ಮೂಲಕ ತಮ್ಮ ಪೋಷಕರ ಕನಸನ್ನು ನನಸು ಮಾಡಿರುವ ಖುಷಿಯಲ್ಲಿದ್ದಾರೆ.


Click it and Unblock the Notifications











