Lakshmi Nivasa: ಒಂದೇ ಪಾತ್ರಕ್ಕೆ ಇಬ್ಬರು ನಟಿಯರು; ಒಬ್ಬರು ಇನ್.. ಇನ್ನೊಬ್ಬರು ಔಟ್!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ನಿವಾಸ' ಕೂಡಾ ಒಂದು. ಕೌಟುಂಬಿಕ ಕಥಾಹಂದರವನ್ನೊಳಗೊಂಡಿರುವ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ನಡುವೆ ಈ ಧಾರಾವಾಹಿಯ ತಂಡದಿಂದ ಬೇಸರದ ವಿಚಾರವೊಂದು ಇದೀಗ ಹೊರಬಿದ್ದಿದೆ. ಅದೇನೆಂದರೆ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಲಕ್ಷ್ಮಿ ನಿವಾಸದ ಸೊಸೆ ಸಿಂಚನಾ ಆಗಿ ನಟಿಸಿದ್ದ ದಿವ್ಯಶ್ರೀ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ.
ದಿವ್ಯಶ್ರೀ ಈ ಧಾರಾವಾಹಿಯಲ್ಲಿ ಸಿಂಚನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಾರಣಾಂತರಗಳಿಂದ ಧಾರಾವಾಹಿಯಿಂದ ಆಕೆ ಹೊರಬಂದಿದ್ದಾರೆ. ಹೀಗಾಗಿ ಆ ಜಾಗಕ್ಕೆ ಬೇರೊಬ್ಬ ನಟಿಯ ಆಗಮನವೂ ಆಗಿದೆ. ಆಕೆ ಬೇರಾರೂ ಅಲ್ಲ ನಟಿ ರೂಪಿಕಾ. ಬಾಲನಟಿಯಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡು ಮುಂದೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ರೂಪಿಕಾ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಆಗಿ ನಟಿಸುವ ಮೂಲಕ ಕಿರುತೆರೆಗೆ ನಟಿ ರೂಪಿಕಾ ಕಾಲಿಟ್ಟಿದ್ದರು. ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ರೂಪಿಕಾ 'ದೊರೆಸಾನಿ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ.
ಇದೀಗ ವರ್ಷದ ನಂತರ ಆಕೆ ಕಿರುತೆರೆಗೆ ಮರಳಿದ್ದು ಸಿಂಚನಾ ಆಗಿ ಕಿರುತೆರೆ ಪ್ರಿಯರನ್ನು ರಂಜಿಸಲಿದ್ದಾರೆ. ಇನ್ನು ರೂಪಿಕಾ ಅವರ ನಟನಾ ಪಯಣ ಕೂಡಾ ಶುರುವಾಗಿದ್ದು ಕಿರುತೆರೆಯಿಂದ. 'ಬೆಳ್ಳಿಚುಕ್ಕಿ', 'ಬದುಕು', 'ಅವಳ ಮನೆ', 'ತ್ರಿವೇಣಿ ಸಂಗಮ' ಧಾರಾವಾಹಿಯಲ್ಲಿ ಬಾಲನಟಿಯಾಗಿ ಮೋಡಿ ಮಾಡಿದ್ದರು. ಮುಂದೆ 'ಚೆಲುವಿನ ಚಿಲಿಪಿಲಿ' ಸಿನಿಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ರೂಪಿಕಾ ನಂತರ 'ತೀರ್ಥರೂಪ', 'ಮಾಯದಂಥ ಮಳೆ', 'ಬೀರ', 'ಥರ್ಡ್ ಕ್ಲಾಸ್', 'ರುದ್ರಾಕ್ಷಿಪುರ', 'ಮಂಜರಿ','ನವರಂಗಿ', 'ಡೈಮಂಡ್ ಕ್ರಾಸ್' ಹೀಗೆ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿ ರೂಪಿಕಾ ಬಣ್ಣ ಹಚ್ಚಿದ್ದರು.
ಮುಂದೆ 'ಚಿಲ್ ಬ್ರೋ' ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸುವ ಮೂಲಕ ಪರಭಾಷೆಯ ಸಿನಿರಂಗದಲ್ಲಿ ರೂಪಿಕಾ ಮಿಂಚಿದ್ದರು. ಕಿರುತೆರೆ, ಹಿರಿತೆರೆಗಿಂತಲೂ ಈಕೆ ರಂಗಭೂಮಿಯಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಬೆನಕ, ಪ್ರಭಾತ್, ಸೂರ್ಯ ಕಲಾವಿದರುಗಳು ತಂಡಗಳಲ್ಲಿ ಮಾತ್ರವಲ್ಲದೇ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳಲ್ಲಿಯೂ ರೂಪಿಕಾ ಬಣ್ಣ ಹಚ್ಚಿದ್ದಾರೆ.

ಇನ್ನು ನಟನೆಯ ಹೊರತಾಗಿ ರೂಪಿಕಾ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡ ಬೆಡಗಿ. 'ಗೆಜ್ಜೆ ನೃತ್ಯ ಸ್ಟುಡಿಯೋ' ಎಂಬ ತಮ್ಮದೇ ನೃತ್ಯ ತರಗತಿಯನ್ನು ನಟಿ ರೂಪಿಕಾ ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಗೆ ನೃತ್ಯದಲ್ಲಿ ಪಿಎಚ್‌ಡಿ ಮಾಡುವ ಕನಸು ಆಕೆಗಿದೆ.


Click it and Unblock the Notifications











