ಕನ್ನಡ ಕಿರುತೆರೆಯ 'ದೊರೆಸಾನಿ' ರೂಪಿಕಾ ನಡೆಸುವ ನೃತ್ಯ ಶಾಲೆ ಯಾವುದು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ನಿವಾಸ'ವೂ ಒಂದು. ಕೌಟುಂಬಿಕ ಕಥಾ ಹಂದರವನ್ನೊಳಗೊಂಡಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ಈ ಧಾರಾವಾಹಿಯಲ್ಲಿ ಶ್ರೀನಿವಾಸ್ ಮತ್ತು ಲಕ್ಷ್ಮಿ ದಂಪತಿಗಳ ಸೊಸೆ ಸಿಂಚನಾ ಪಾತ್ರದಲ್ಲಿ ರೂಪಿಕಾ ನಟಿಸುತ್ತಿದ್ದಾರೆ. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ರೂಪಿಕಾ ಬಾಲನಟಿಯಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡವರು ಎಂಬ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ.
ಹೌದು, ಬಾಲನಟಿಯಾಗಿ ನಟನೆಗೆ ಕಾಲಿಟ್ಟು ನಂತರ ಹಿರಿತೆರೆಯತ್ತ ಮುಖ ಮಾಡಿ, ಅಲ್ಲೂ ನಟನಾ ಛಾಪನ್ನು ಪಸರಿಸಿದ ಈಕೆ ಸದ್ಯ ಕಿರುತೆರೆಯಲ್ಲಿ ಬ್ಯುಸಿ. ಬೆಳ್ಳಿಚುಕ್ಕಿ', 'ಬದುಕು', 'ಅವಳ ಮನೆ', 'ತ್ರಿವೇಣಿ ಸಂಗಮ' ಧಾರಾವಾಹಿಯಲ್ಲಿ ಬಾಲ ನಟಿಯಾಗಿ ರೂಪಿಕಾ ನಟಿಸಿದ್ದರು. ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಈಕೆ ನಂತರ ಸಿನಿಮಾದ ಕಡೆ ಮುಖ ಮಾಡಿದ್ದರು.

'ಚೆಲುವಿನ ಚಿಲಿಪಿಲಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ ಈ ಬೆಡಗಿ ನಂತರ ಹಿಂತಿರುಗಿ ನೋಡಿದ್ದಿಲ್ಲ. 'ಚೆಲುವಿನ ಚಿಲಿಪಿಲಿ' ಸಿನಿಮಾದ ನಂತರ 'ತೀರ್ಥರೂಪ', 'ಮಾಯದಂಥ ಮಳೆ', 'ಬೀರ', 'ಥರ್ಡ್ ಕ್ಲಾಸ್', 'ರುದ್ರಾಕ್ಷಿಪುರ', 'ಮಂಜರಿ','ನವರಂಗಿ', 'ಡೈಮಂಡ್ ಕ್ರಾಸ್' ಸಿನಿಮಾಗಳಲ್ಲಿ ಅಭಿನಯಿಸಿರುವ ರೂಪಿಕಾ ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಹೌದು, ತೆಲುಗಿನ 'ಚಿಲ್ ಬ್ರೋ' ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರೂಪಿಕಾ ಮತ್ತೆ ಕಿರುತೆರೆಗೆ ಮರಳಿದ್ದು 'ದೀಪಿಕಾ'ಳಾಗಿ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ದೊರೆಸಾನಿ' ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆದ ಈಕೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಆದರೆ ಕಾರಣಾಂತರಗಳಿಂದ ಆ ಧಾರಾವಾಹಿ ಬಹುಬೇಗನೇ ಮುಕ್ತಾಯಗೊಂಡಿತ್ತು.
ತದ ನಂತರ ಜೀ ಕನ್ನಡ ವಾಹಿನಿಯ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಸಿಂಚನಾ ಆಗಿ ಕಾಣಿಸಿಕೊಳ್ಳುತ್ತಿರುವ ಈಕೆ ಅರ್ಧದಲ್ಲಿ ಸೀರಿಯಲ್ ತಂಡ ಸೇರಿಕೊಂಡಾಕೆ. ಈ ಮೊದಲು ಸಿಂಚನಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ದಿವ್ಯಶ್ರೀ ಅವರು ಪಾತ್ರದಿಂದ ಹೊರಬಂದಾಗ ಆ ಜಾಗಕ್ಕೆ ಬಂದ ರೂಪಿಕಾ ಇಂದು ಸಿಂಚನಾ ಆಗಿ ವೀಕ್ಷಕರ ಮನದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅಂದ ಹಾಗೇ ನಟಿ ರೂಪಿಕಾ ಕಿರುತೆರೆ, ಹಿರಿತೆರೆಯ ಹೊರತಾಗಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬೆಡಗಿ. ಬೆನಕ, ಪ್ರಭಾತ್, ಸೂರ್ಯ ಕಲಾವಿದರುಗಳು ಜೊತೆಗೆ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳಲ್ಲಿಯೂ ಈಕೆ ಬಣ್ಣ ಹಚ್ಚಿದ್ದಾರೆ. ನಟನೆಯ ಹೊರತಾಗಿ ಈಕೆ ಅತ್ಯದ್ಭುತ ನೃತ್ಯಗಾರ್ತಿ ಹೌದು. ಒಂದಷ್ಟು ವೇದಿಕೆಗಳಲ್ಲಿ ನೃತ್ಯ ಮಾಡಿ ಸೈ ಎನಿಸಿಕೊಂಡಿರುವ ಗೆಜ್ಜೆ ನೃತ್ಯ ಸ್ಟುಡಿಯೋ ಎನ್ನುವ ನೃತ್ಯ ತರಗತಿಯನ್ನು ನಡೆಸುತ್ತಿದ್ದಾರೆ.


Click it and Unblock the Notifications










