ಖಳನಾಯಕಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರುಹಾನಿ ಶೆಟ್ಟಿ ಹಿನ್ನೆಲೆಯೇನು?
ರಿಯಾಲಿಟಿ ಶೋಗಳ ಜೊತೆಗೆ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿಗಳ ಪೈಕಿ ಜೀ ಕನ್ನಡ ವಾಹಿನಿಯೂ ಒಂದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ನಾ ನಿನ್ನ ಬಿಡಲಾರೆ' ಯೂ ಒಂದು. ಇತ್ತೀಚೆಗಷ್ಟೇ ಶುರುವಾಗಿರುವ ಹಾರರ್ ಧಾರಾವಾಹಿ 'ನಾ ನಿನ್ನ ಬಿಡಲಾರೆ'ಯಲ್ಲಿ ನಾಯಕ ಶರತ್ ಪಾತ್ರದಲ್ಲಿ ಶರತ್ ಪದ್ಮನಾಭ ನಟಿಸುತ್ತಿದ್ದರೆ, ನಾಯಕಿ ಅಂಬಿಕಾ ಆಗಿ ನೀತಾ ಅಶೋಕ್ ಅಭಿನಯಿಸುತ್ತಿದ್ದಾರೆ.
ಇನ್ನು ಈ ಧಾರಾವಾಹಿಯಲ್ಲಿ ಖಳನಾಯಕಿ ಮಾಯಾ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನ ಸೆಳೆಯುತ್ತಿರುವ ಚೆಲುವೆಯ ಹೆಸರು ರುಹಾನಿ ಶೆಟ್ಟಿ. ಖಳನಾಯಕಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ರುಹಾನಿ ಶೆಟ್ಟಿ ಅವರ ನಟನಾ ಪಯಣ ಶುರುವಾಗಿದ್ದು 'ಎರಡು ಕನಸು' ಧಾರಾವಾಹಿ ಮೂಲಕ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಎರಡು ಕನಸು' ಧಾರಾವಾಹಿಯಲ್ಲಿ ನಾಯಕಿ ಸಹಜ ಪಾತ್ರದಲ್ಲಿ ನಟಿಸಿದ ಈಕೆ ನಂತರ ಕಾಣಿಸಿಕೊಂಡಿದ್ದು ಕೋಸ್ಟಲ್‌ವುಡ್‌ನಲ್ಲಿ.

'ಗಿರ್ ಗಿಟ್' ಎನ್ನುವ ತುಳು ಸಿನಿಮಾದಲ್ಲಿ ಬಣ್ಣ ಹಚ್ಚಿದ ರುಹಾನಿ ಶೆಟ್ಟಿ 'ನ್ಯೂರಾನ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ರಮೇಶ್ ಅರವಿಂದ್ ನಿರ್ದೇಶನದ 100 ಚಿತ್ರದಲ್ಲಿಯೂ ನಟಿಸಿರುವ ರುಹಾನಿ ಶೆಟ್ಟಿ, ಡಾರ್ಲಿಂಗ್ ಕೃಷ್ಣ ಅಭಿನಯದ 'ಶುಗರ್ ಫ್ಯಾಕ್ಟರಿ' ಸಿನಿಮಾದಲ್ಲಿಯೂ ನಾಯಕಿಯಾಗಿ ಬಣ್ಣ ಹಚ್ಚಿರುವ ಬೆಡಗಿ.
ಸದ್ಯ ಖಳನಾಯಕಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ರುಹಾನಿ ಶೆಟ್ಟಿ ಶಾಲಾ ದಿನಗಳಲ್ಲಿ ನಾಟಕರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಗಲೇ ನಾಟಕಗಳಲ್ಲಿ ನಟಿಸಿದ್ದ ರುಹಾನಿ ಶೆಟ್ಟಿ ಐಕೆ ಬೊಳುವಾರು ಹಾಗೂ ಮೋಹನ್ ಸೋನಾ ಅವರಿಂದ ನಟನೆಯ ಬಗ್ಗೆ ಹೆಚ್ಚಿನ ತರಬೇತಿಯನ್ನು ಪಡೆದುಕೊಂಡರು.

'ಮಳೆಹಕ್ಕಿ' , 'ಐನ್ ಸ್ಟೈನ್' ,'ಚಂದ್ರಮ ವೃತ್ತಾಂತ' ನಾಟಕಗಳಲ್ಲಿ ನಟಿಸಿರುವ ರುಹಾನಿ ಶೆಟ್ಟಿ ನಟನೆಯ ಹೊರತಾಗಿ ನೃತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಫಿಲ್ಮಿ ಡ್ಯಾನ್ಸ್ ಹಾಗೂ ಸುಗಮ ಸಂಗೀತವನ್ನು ಕಲಿತಿರುವ ಈಕೆ ಮಾಡೆಲಿಂಗ್ ಜಗತ್ತಿನಲ್ಲಿಯೂ ಸದ್ದು ಮಾಡಿರುವ ಬೆಡಗಿ.
ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ರುಹಾನಿ ಶೆಟ್ಟಿ ಆಗ ತಾನೇ ನಡೆಯುತ್ತಿದ್ದ ಮಿಸ್ ಇಂಡಿಯಾ ಸ್ಪರ್ಧೆಯ ಆಡಿಷನ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡರು. ಆದರೆ ಆಡಿಶನ್‌ನಲ್ಲಿ ಭಾಗವಹಿಸಿದ ಆಕೆ ಆಯ್ಕೆಯಾಗಲಿಲ್ಲ. ನಂತರ ಒಂದಷ್ಟು ಫ್ಯಾಶನ್ ಶೋಗಳಲ್ಲಿ ರಾಂಪ್ ವಾಕ್ ಮಾಡಿ ಸೈ ಎನಿಸಿಕೊಂಡ ಈಕೆ ನಂತರ ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ.
'ಎರಡು ಕನಸು' ಧಾರಾವಾಹಿಯಲ್ಲಿ ನಾಯಕಿ ಸಹಜ ಆಗಿ ನಟಿಸಿದ್ದ ಈಕೆ ಮೊದಲ ಧಾರಾವಾಹಿಯಲ್ಲಿಯೇ ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಬೆಡಗಿ. ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳದ ಆಕೆ ಕೋಸ್ಟಲ್‌ವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲೂ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಇದೀಗ ವರ್ಷಗಳ ಬಳಿಕ ಮಾಯಾ ಆಗಿ ಕಿರುತೆರೆಗೆ ಕಂ ಬ್ಯಾಕ್ ಆಗಿರುವ ರುಹಾನಿ ಶೆಟ್ಟಿ ಮೊದಲ ಬಾರಿಗೆ ಖಳನಾಯಕಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











